ತಮಿಳು, ತೆಲುಗು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದ್ರನ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಇತ್ತೀಚೆಗೆ ಅವರು ಜೊತೆಯಾಗಿ ಹಲವೆಡೆ ಕಾಣಿಸಿಕೊಳ್ಳುತ್ತಿರುವುದು ವದಂತಿಗೆ ಪುಷ್ಠಿ ನೀಡಿದೆ. ಈ ಬಗ್ಗೆ ಸತ್ಯ ಹೇಳಿ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಆದರೆ ಇಲ್ಲಿಯವರೆಗೆ ಇಬ್ಬರಿಂದಲೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ಅಲ್ಲದೇ ಅವರು ವದಂತಿಯನ್ನು ಅಲ್ಲಗಳೆಯುತ್ತಲೂ ಇಲ್ಲ.
ಸಂಗೀತ ಸಂಯೋಜಕ ಅನಿರುದ್ಧ್ ಮೊನ್ನೆಯವರೆಗೂ ಗಾಯಕಿ ಜೋನಿತಾ ಗಾಂಧಿ ಅವರೊಂದಿಗೆ ಓಡಾಡುತ್ತಿದ್ದರು. ಇದೀಗ ಜೋನಿತಾ ವಿವಾಹ ಫಿಕ್ಸ್ ಆಗಿದೆ ಎನ್ನಲಾಗಿದೆ. ಆನಂತರ ಅನಿರುದ್ಧ್ ಹೆಸರು ಕೀರ್ತಿ ಅವರ ಜೊತೆ ಥಳುಕುಹಾಕಿಕೊಂಡಿದ್ದು, ಇಬ್ಬರೂ ಜೊತೆಯಲ್ಲಿ ಓಡಾಡತೊಡಗಿದ್ದಾರೆ. ಇದೇ ವರ್ಷ ಕೊನೆಯಲ್ಲಿ ಮದುವೆ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನುವ ವದಂತಿ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.
ಇನ್ನು ನಟಿ ಕೀರ್ತಿ ಸುರೇಶ್ ಅವರಿಗೆ ಸದ್ಯ ಕೈತುಂಬಾ ಸಿನಿಮಾಗಳಿವೆ. ಅಣ್ಣಾಥೆ, ಸಾನಿ ಕಾಯಿಧಮ್ ತಮಿಳು ಚಿತ್ರಗಳು ಹಾಗೂ ಗುಡ್‌ಲಕ್ ಸಖಿ, ರಂಗ್ ದೇ, ಸರ್ಕಾರು ವಾರಿ ಪಾಟ, ಐನ ಇಷ್ಟಂ ನೂವು ತೆಲುಗು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಎರಡು ಮಲಯಾಳಂ ಚಿತ್ರಗಳಿಗೂ ಸಹಿ ಹಾಕಿದ್ದಾರೆ. ಮತ್ತೊಂದೆಡೆ ‘ಮಾಸ್ಟರ್’ ತಮಿಳು ಚಿತ್ರದ ಭರ್ಜರಿ ಯಶಸ್ಸಿನ ನಂತರ ಅನಿರುದ್ಧ್ ನಾಲ್ಕು ದೊಡ್ಡ ತಮಿಳು ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.