ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮೀರಾ ನಾಯರ್ ಅವರ ‘ ಮಿಸಿಸಿಪ್ಪಿ ಮಸಾಲಾ’ ಇಂಗ್ಲಿಷ್ ಸಿನಿಮಾ 1991ರ ಸೆಪ್ಟೆಂಬರ್ನಲ್ಲಿ ತೆರೆಕಂಡಿತ್ತು. ಚಿತ್ರ ತೆರೆಕಂಡು 2021ಕ್ಕೆ ಮೂವತ್ತು ವರ್ಷ. ಈ ರೊಮ್ಯಾಂಟಿಕ್ – ಡ್ರಾಮಾ ಚಿತ್ರದೊಂದಿಗೆ ಹಾಲಿವುಡ್ನಲ್ಲೂ ಮೀರಾ ಸದ್ದು ಮಾಡಿದ್ದರು. ಇದರ ಸವಿನೆನಪಿಗಾಗಿ ಚಿತ್ರದ ರೀಮಾಸ್ಟರ್ಡ್ ಅವತರಣಿಕೆ ಬಿಡುಗಡೆ ಮಾಡುವ ಯೋಜನೆ ಮೀರಾ ನಾಯರ್ ಅವರದು.
ಅಮೆರಿಕದ ಮಿಸಿಸಿಪ್ಪಿಯ ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದ್ದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಡೆನ್ಝಲ್ ವಾಷಿಂಗ್ಟನ್ ಮತ್ತು ಸರಿತಾ ಚೌಧರಿ ನಟಿಸಿದ್ದರು. ಆಫ್ರಿಕ-ಅಮೆರಿಕದ ಯುವಕ ಮತ್ತು ಭಾರತ-ಅಮೆರಿಕದ ಯುವತಿಯ ನಡುವಿನ ರೊಮ್ಯಾಂಟಿಕ್ ಪ್ರೇಮ ಕಥಾನಕವಿದು. ಶರ್ಮಿಳಾ ಟ್ಯಾಗೂರ್, ರೋಷನ್ ಸೇಠ್ ಮತ್ತು ಮೋಹನ್ ಅಗಾಸ್ಸೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಶ್ಲೇಷಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿನಿಮಾ ವೆನಿಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಸನ್ಡ್ಯಾನ್ಸ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರು ಚಿತ್ರವೀಕ್ಷಣೆಯ ನಂತರ ಸ್ಟ್ಯಾಂಡಿಂಗ್ ಓವಿಯೇಷನ್ ಕೊಟ್ಟಿದ್ದರು. ಈ ಚಿತ್ರದೊಂದಿಗೆ ಮೀರಾ ನಾಯರ್ ಅವರು ತಮ್ಮ ನಿರ್ದೇಶನದ ‘ಸಲಾಂ ಬಾಂಬೆ’, ‘ದಿ ನೇಮ್ಸೇಕ್’, ‘ಕ್ವೀನ್ ಆಫ್ ಕಾಟ್ವೆ’ ಚಿತ್ರಗಳೊಂದಿಗೂ ಪ್ರೇಕ್ಷಕರಿಗೆ ನೆನಪಾಗುತ್ತಾರೆ. ಇತ್ತೀಚೆಗೆ ಮೀರಾ ಅವರು ವಿಕ್ರಂ ಸೇಠ್ ಕೃತಿ ‘ಎ ಸೂಟಬಲ್ ಬಾಯ್’ ಆಧರಸಿ ಸರಣಿ ರೂಪಿಸಿದ್ದರು.