ಕಿಚ್ಚ ಸುದೀಪ್ ಅವರ ಆಪ್ತರು, ಅಭಿಮಾನಿಗಳು, ಸ್ನೇಹಿತರು “ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ” ಶುರುಮಾಡಿದ್ದು ಗೊತ್ತೇ ಇದೆ. ಈ ಮೂಲಕ ಹಲವು ಸಾಮಾಜಿಕ ಕಾರ್ಯಗಳೂ ನಡೆದಿವೆ. ಈ ಸೊಸೈಟಿಗೆ ಅವರ ಅಭಿಮಾನಿಗಳೂ ಸಾಥ್ ನೀಡುತ್ತಿದ್ದಾರೆ. ಈಗ ಈ “ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ”ಗೆ ನಾಲ್ಕು ವರ್ಷ ಪೂರೈಸಿದೆ. ಹೌದು, ಸುದೀಪ್ ಅವರ ಗೆಳೆಯರು, ಅಭಿಮಾನಿಗಳು “ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ” ಮಾಡಿದ್ದು, ಇದಕ್ಕೆ ಅಭಿನಯ ಚಕ್ರವರ್ತಿ ಮಾರ್ಗದರ್ಶಕರಾಗಿದ್ದಾರೆ. ಈ ಮೂಲಕ ಅಶಕ್ತರಿಗೆ, ಬಡ ವಿದ್ಯಾರ್ಥಿಗಳಿಗೆ, ವಿಕಲಚೇತನರಿಗೆ ಸಹಾಯ ಮಾಡಲಾಗುತ್ತಿದೆ. ಹಲವರಿಗೆ ಚಿಕಿತ್ಸೆಗೆ ನೆರವಾಗಿದೆ.
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ನಾಲ್ಕು ವರ್ಷ ತುಂಬಿದೆ. ಕಳೆದ ನಾಲ್ಕು ವರ್ಷದಿಂದಲೂ ಹಲವಾರು ಸಾಮಾಜಿಕ ಕೆಲಸ ಮಾಡುತ್ತಿರುವ ಈ ಸೊಸೈಟಿಗೆ ನಾಲ್ಕು ವರ್ಷ ತಂಬಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಂದು ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೀದಿ ಬದಿಯಲ್ಲಿ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ತುತ್ತು ಅನ್ನ, ನೀರಿನ ವ್ಯವಸ್ಥೆ, ಪಂಜರದಲ್ಲಿ ಬಂಧಿಯಾಗಿರುವ ಪಕ್ಷಿಗಳನ್ನು ಬಿಡುಗಡೆಗೊಳಿಸುವ ಕೆಲಸ, ಗೋಶಾಲೆಗೆ ಭೇಟಿ ನೀಡಿ ಅಲ್ಲೂ ಮೇವು ಇತ್ಯಾದಿ ವವಸ್ಥೆ ಮಾಡುವ ಬಗ್ಗೆ ಚಾರಿಟೇಬಲ್ ಸೊಸೈಟಿ ನಿರ್ಧರಿಸಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ.
ಆದರೆ, ಅಂದು ಪುಲ್ವಾಮ ದಾಳಿಯಲ್ಲಿ ದೇಶದ ಅನೇಕ ಸೈನಿಕರು ಹುತಾತ್ಮರಾದ ದಿನ. ಹಾಗಾಗಿ ಆ ನಮ್ಮ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಚಾರಿಟೇಬಲ್ ಸೊಸೈಟಿ ಹೇಳಿಕೊಂಡಿದೆ. ಈ ಬಗ್ಗೆ ಸ್ವತಃ ಸುದೀಪ್ ಅವರು ಚಾರಿಟೇಬಲ್ ಸೊಸೈಟಿಯ ಮಹತ್ವದ ಕೆಲಸಗಳ ಬಗ್ಗೆ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಒಂದು ತುತ್ತು ಒಂದು ಜೀವವನ್ನ ಉಳಸೋದಾದ್ರೆ ಅ ಮೊದಲ ತುತ್ತು ನನ್ನದಾಗಲಿ” ಎಂದಿದ್ದಾರೆ.