ದಕ್ಷಿಣ ಭಾರತದ ಪ್ರಸ್ತುತ ಸೆನ್ಸೇಷನ್ ಹೀರೋಗಳಲ್ಲೊಬ್ಬರಾದ ವಿಜಯ್ ದೇವರಕೊಂಡ ನಟನೆಯ ‘ಲಿಗರ್’ ರಿಲೀಸ್ ಡೇಟ್ ಹೊರಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಇದೇ ವರ್ಷ ಸೆಪ್ಟೆಂಬರ್ 9ಕ್ಕೆ ಥಿಯೇಟರ್‌ಗೆ ಬರಲಿದೆ. ಚಿತ್ರತಂಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಬಿಡುಗಡೆ ದಿನಾಂಕ ಘೋಷಿಸಿದೆ. ಅನನ್ಯಾ ಪಾಂಡೆ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು ರಮ್ಯಾ ಕೃಷ್ಣನ್, ರೋನಿತ್ ರಾಯ್, ಅಲಿ, ಮಕರಂದ್ ದೇಶಪಾಂಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಲವರ್ ಬಾಯ್ ವಿಜಯ್ ಈ ಚಿತ್ರದಲ್ಲಿ ಇಮೇಜು ಬದಲಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ಮಾರ್ಷಿಯಲ್ ಆರ್ಟ್ಸ್ ಹಿನ್ನೆಲೆಯ ಕತೆಯ ಇದೊಂದು ಸ್ಪೋರ್ಟ್ಸ್ ಡ್ರಾಮಾ ಎನ್ನಲಾಗಿದೆ. ತೆಲುಗು ಮಾತ್ರವಲ್ಲದೆ ಹಿಂದಿ ಭಾಷೆಯಲ್ಲೂ ಸಿನಿಮಾ ತಯಾರಾಗುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ ದೇವರಕೊಂಡ. ಮತ್ತೊಂದೆಡೆ ಪುರಿ ಜಗನ್ನಾಥ್ ಹತ್ತು ವರ್ಷದ ನಂತರ ಬಾಲಿವುಡ್‌ಗೆ ಮರಳುತ್ತಿದ್ದಾರೆ. ದಶಕದ ಹಿಂದೆ ಅವರ ನಿರ್ದೇಶನದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ‘ಬುಡ್ಡಾ ಹೋಗಾ ತೇರಿ ಬಾಪ್’ ಹಿಂದಿ ಚಿತ್ರ ತೆರೆಕಂಡಿತ್ತು. ಪುರಿ ಜಗನ್ನಾಥ್, ಕರಣ್ ಜೋಹರ್, ನಟಿ ಚಾರ್ಮಿ ಕೌರ್ ಚಿತ್ರದ ನಿರ್ಮಾಪಕರು. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಅವತರಣಿಕೆಗಳೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.