ರೈತರ ಪರವಾಗಿ ಮಾತನಾಡದ ನಟ-ನಟಿಯರ ಸಿನಿಮಾ ವೀಕ್ಷಿಸುವುದಿಲ್ಲ ಅಂತ ನೀವೇಕೆ ಹೇಳಬಾರದು ?

ಚಿಂತಕ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರಶ್ನೆ

ದೆಹಲಿ ಹೋರಾಟದ ಬಿಸಿ ಈಗ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಬಾಲಿವುಡ್‌ ನಲ್ಲಿ ಹೊತ್ತಿಕೊಂಡ ಬೆಂಕಿ, ಸಣ್ಣಗೆ ಈಗ ಸ್ಯಾಂಡಲ್‌ ವುಡ್‌ನಲ್ಲೂ ಕಾಣಿಸಿಕೊಂಡಿದೆ. ರೈತರ ಪರವಾಗಿ ಕಲಾವಿದರು ಯಾಕೆ ಮಾತನಾಡುತ್ತಿಲ್ಲ ಎನ್ನುವ
ಜನ ಸಾಮಾನ್ಯರಲ್ಲಿ ಕಾಡುತ್ತಿರುವ ಬೆನ್ನಲೇ ಪತ್ರಕರ್ತ ಹಾಗೂ ಚಿಂತಕ ದಿನೇಶ್‌ ಅಮೀನ್‌ ಮಟ್ಟು ನೇರವಾಗಿಯೇ ಸ್ಟಾರ್‌ ಗಳ ಮೌನವನ್ನು ಕೆಣಕಿದ್ದಾರೆ. ಹಾಗಂತ ಅವರ ದೂರು ಸ್ಟಾರ್‌ ಗಳ ಮೇಲೆ ಅಲ್ಲ. ಸ್ಟಾರ್‌ ಗಳನ್ನು ಮೆರೆಸುವ ಜನರ ಪರವಾಗಿ ಕನ್ನಡ ಸಂಘಟನೆಗಳು ಏನು ಮಾಡಬಹುದು ಎನ್ನುವುದಕ್ಕೆ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಆ ಮೂಲಕ ಮೌನಿಗಳಾದ ಸ್ಟಾರ್‌ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

“ ನಿಮ್ಮ ಚಿತ್ರಗಳನ್ನು ನೋಡಬೇಕಾದರೆ ಮೊದಲು ನೀವು ರೈತರ ಹೋರಾಟದ ಪರವಾಗಿ ಮಾತನಾಡಿ” ಎಂದು ಕನ್ನಡ ಚಿತ್ರನಟ-ನಟಿಯರ ಮೇಲೆ ಜನ ಒತ್ತಡ ಹಾಕಬಾರದೇಕೆ? ರೈತರ ಪರವಾಗಿ ಮಾತನಾಡದ ನಟ-ನಟಿಯರ ಚಿತ್ರಗಳನ್ನು ವೀಕ್ಷಿಸುವುದಿಲ್ಲ ಎಂದು ರೈತರು ಮತ್ತು ಅವರ ಪರವಾಗಿರುವವರು ಗಟ್ಟಿದನಿಯಲ್ಲಿ ಹೇಳುವ ಅಭಿಯಾನ ಯಾಕೆ ನಡೆಸಬಾರದು? ಕೇವಲ ಕಂಗನಾ, ಅಕ್ಷಯಕುಮಾರ್ ಗಳನ್ನು ಗೇಲಿಮಾಡುತ್ತಾ ಕೂತರೆ ಸಾಕೇ? ನಮ್ಮ ಕನ್ನಡ ಸಂಘಟನೆಗಳು ಇದರ ಬಗ್ಗೆಯೂ ಒಂದು ಟ್ವಿಟರ್ ಅಭಿಯಾನ ನಡೆಸಲಿ ಎಂದು ತಮ್ಮ ಪೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ತಮ್ಮ ಪೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಿಷ್ಟು…

ಕೊರೊನಾ ಪರಿಣಾಮದ ಪ್ರೇಕ್ಷಕರ ಬರಗಾಲದ ನಂತರ ಇದ್ದಕ್ಕಿದ್ದಂತೆ ಸಾಲುಸಾಲು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ, ಚಿತ್ರಮಂದಿರಗಳನ್ನು ತುಂಬುವ ಅಭಿಯಾನ ಬಿರುಸು ಪಡೆದಿದೆ. ಟಿವಿ ಚಾನೆಲ್ ಗಳಂತೂ ಚಿತ್ರಮಂದಿರಗಳು ತುಂಬಿ ತುಳುಕಾಡುತ್ತಿವೆ ಎಂಬಂತೆ ಪೇಯ್ಡ್ ಕ್ಯಾಂಪೇನ್ ನಡೆಸುತ್ತಿವೆ. ಚಿತ್ರನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಚಾನೆಲ್ ಗಳ ತೆರೆಯ ಮೇಲೆ ಕಾಣಿಸಿಕೊಂಡು ಪ್ರೇಕ್ಷಕಪ್ರಭುವಿಗೆ ಕೈಮುಗಿದು,ಕಾಲಿಗೆರಗಿ ಕರೆಯುತ್ತಿದ್ದಾರೆ.

ನಿಜ, ಕೊರೊನಾದಿಂದಾಗಿ ಚಿತ್ರರಂಗ ಕಷ್ಟದಲ್ಲಿದೆ ಪ್ರೇಕ್ಷಕರೂ ಚಿತ್ರನೋಡಿ ಸಹಕರಿಸಬೇಕು. ಆದರೆ ನಮ್ಮ ಅನ್ನದಾತರೂ ಕಷ್ಟದಲ್ಲಿದ್ದಾರಲ್ಲಾ, ಅನ್ನತಿನ್ನುವ ಈ ನಟ-ನಟಿಯರೂ ಅವರಿಗೂ ನೆರವಾಗಬೇಕಲ್ಲ? ಇಲ್ಲಿಯ ವರೆಗೆ ಎಷ್ಟು ಮಂದಿ ನಟ-ನಟಿಯರು,ನಿರ್ದೇಶಕ ನಿರ್ಮಾಪಕರು ರೈತರ ಪರವಾಗಿ ದನಿ ಎತ್ತಿದ್ದಾರೆ? ಹ್ಯಾಟ್ರಿಕ್, ಕಿಚ್ಚು, ಡಿಚ್ಚು,ಪವರ್, ಗೋಲ್ಡ್,ಸಿಲ್ವರ್ ಗಳಲ್ಲಿ ಯಾರಾದರೂ ಬಾಯಿ ಬಿಟ್ಟಿದ್ದಾರಾ? ಕನ್ನಡ ಸಿನೆಮಾಗಳ ಬಹುಪಾಲು ಪ್ರೇಕ್ಷಕರು ಹಳ್ಳಿಗಳಲ್ಲಿದ್ದಾರೆ, ನಗರ-ಪಟ್ಟಣಗಳಲ್ಲಿಯೂ ಕನ್ನಡ ಚಿತ್ರಗಳನ್ನು ಹೆಚ್ಚು ನೋಡುವವರು ಗ್ರಾಮೀಣ ಪ್ರದೇಶದಿಂದ ಬಂದವರು. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೇಕ್ಷಕರಾಗಿ ಪರಿವರ್ತನೆಗೊಂಡಿರುವ ನಗರ-ಪಟ್ಟಣಗಳಲ್ಲಿ ಹುಟ್ಟಿಬೆಳೆದವರು, ಯುವಜನರು ಚಿತ್ರಮಂದಿರದ ಕಡೆ ತಲೆಹಾಕುವುದಿಲ್ಲ.

ಇತ್ತೀಚೆಗೆ ‘ಆ್ಯಕ್ಟ್ 1978’ ಚಿತ್ರದ ನಿರ್ದೇಶಕ ಮನಸೋರೆ ಮತ್ತು ಕತೆಗಾರ ಟಿ.ಕೆ.ದಯಾನಂದ್ ಹಾಗೂ ಬೆಲ್ ಬಾಟಮ್ ಚಿತ್ರದ ನಿರ್ದೇಶಕ ಜಯತೀರ್ಥ ಅವರು ರೈತರ ಹೋರಾಟವನ್ನು ಬೆಂಬಲಿಸಿದರು ಎನ್ನುವ ಕಾರಣಕ್ಕೆ ‘ಅರ್ಬನ್ ನಕ್ಸಲ್ ಸಿನೆಮಾ ಬಹಿಷ್ಕರಿಸಿ’ ಎಂದು ಭಕ್ತರು ಕ್ಯಾಂಪೇನ್ ಶುರುಮಾಡಿದ್ದರು. ಈ ಎರಡುರೂಪಾಯಿ ಗಿರಾಕಿಗಳ ಪೋಸ್ಟ್ ಗಳಿಗೆ ಯಾರೂ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ಬೇರೆ ಮಾತು. ಅದನ್ನೇ ತಿರುಗಿಸಿ ಕೊಡಲು ಅವಕಾಶ ಕೂಡಿ ಬಂದಿದೆ. “ ನಿಮ್ಮ ಚಿತ್ರಗಳನ್ನು ನೋಡಬೇಕಾದರೆ ಮೊದಲು ನೀವು ರೈತರ ಹೋರಾಟದ ಪರವಾಗಿ ಮಾತನಾಡಿ” ಎಂದು ಕನ್ನಡ ಚಿತ್ರನಟ-ನಟಿಯರ ಮೇಲೆ ಒತ್ತಡ ಹಾಕಬಾರದೇಕೆ? ರೈತರ ಪರವಾಗಿ ಮಾತನಾಡದ ನಟ-ನಟಿಯರ ಚಿತ್ರಗಳನ್ನು ವೀಕ್ಷಿಸುವುದಿಲ್ಲ ಎಂದು ರೈತರು ಮತ್ತು ಅವರ ಪರವಾಗಿರುವವರು ಗಟ್ಟಿದನಿಯಲ್ಲಿ ಹೇಳುವ ಅಭಿಯಾನ ಯಾಕೆ ನಡೆಸಬಾರದು? ಕೇವಲ ಕಂಗನಾ, ಅಕ್ಷಯಕುಮಾರ್ ಗಳನ್ನು ಗೇಲಿಮಾಡುತ್ತಾ ಕೂತರೆ ಸಾಕೇ? ಇದರ ಬಗ್ಗೆಯೂ ಒಂದು ಟ್ವಿಟರ್ ಅಭಿಯಾನ ನಡೆಸಲಿ.

Related Posts

error: Content is protected !!