ಹಿಂದಿ ಚಿತ್ರರಂಗದ ಪ್ರತಿಷ್ಠಿತ ಕಪೂರ್ ಕುಟುಂಬದ ಹಿರಿಯ ನಟ, ನಿರ್ಮಾಪಕ ರಾಜೀವ್ ಕಪೂರ್ ಇಂದು ಅಗಲಿದ್ದಾರೆ.
ನಟ, ನಿರ್ಮಾಪಕ, ನಿರ್ದೇಶಕ ರಾಜೀವ್ ಕಪೂರ್ (58 ವರ್ಷ) ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಬಾಲಿವುಡ್ನ ಶೋಮ್ಯಾನ್ ಎಂದೇ ಹೆಸರಾಗಿದ್ದ ರಾಜ್ಕಪೂರ್ ಅವರ ಕೊನೆಯ ಪುತ್ರ ರಾಜೀವ್. ನಟ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ತಮ್ಮ ನಿರ್ದೇಶನದ ದುಬಾರಿ ಬಜೆಟನ್ನ ಮಹತ್ವಾಕಾಂಕ್ಷೆಯ ಸಿನಿಮಾ ‘ಪ್ರೇಮ್ಗ್ರಂಥ್’ ಚಿತ್ರದ ಸೋಲಿನ ನಂತರ ಅವರು ಚಿತ್ರರಂಗದಿಂದ ದೂರ ಸರಿದಿದ್ದರು.
ತಂದೆ ರಾಜ್ಕಪೂರ್ ಮಾರ್ಗದರ್ಶನದಲ್ಲಿ ಸಿನಿಮಾರಂಗದಲ್ಲಿ ಅನುಭವ ಪಡೆದ ರಾಜೀವ್ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಏಕ್ ಜಾನ್ ಹೈ ಹಮ್’ (1983) ಚಿತ್ರದೊಂದಿಗೆ. ಚೊಚ್ಚಲ ಚಿತ್ರ ತೆರೆಕಂಡು ಎರಡು ವರ್ಷದ ನಂತರ ತಂದೆ ರಾಜ್ಕಪೂರ್ ನಿರ್ದೇಶನದಲ್ಲಿ ರಾಜೀವ್ ನಟಿಸಿದ ‘ರಾಮ್ ತೇರಿ ಗಂಗಾ ಮೈಲಿ’ (1985) ದೊಡ್ಡ ಯಶಸ್ಸು ಕಂಡಿತು. ಆದರೆ ಈ ಗೆಲುವು ಅವರ ಮುಂದಿನ ಚಿತ್ರಗಳಲ್ಲಿ ದಾಖಲಾಗಲಿಲ್ಲ. ಆಸ್ಮಾನ್, ಲವರ್ಬಾಯ್, ಜಬರ್ದಸ್ತ್, ಹಮ್ ತೋ ಚಲೇ ಪರ್ದೇಸ್, ಜಿಮ್ಮೇದಾರ್ ರಾಜೀವ್ ನಟನೆಯ ಇತರೆ ಪ್ರಮುಖ ಚಿತ್ರಗಳು.
ತಮ್ಮ ಹಿರಿಯ ಸಹೋದರರಾದ ರಣಧೀರ್ ಕಪೂರ್ ನಿರ್ದೇಶನದ ‘ಹೆನ್ನಾ’ ಮತ್ತು ರಿಷಿ ಕಪೂರ್ ನಿರ್ದೇಶನದ ‘ಆ ಅಬ್ ಲೌಟ್ ಚಲೇ’ ಎರಡೂ ರಾಜೀವ್ ನಿರ್ಮಾಣದ ಚಿತ್ರಗಳು. ಹಿರಿಯ ಸಹೋರದ ರಿಷಿ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಜೋಡಿಗೆ ರಾಜೀವ್ ನಿರ್ದೇಶಿಸಿದ ‘ಪ್ರೇಮ್ಗ್ರಂಥ್’ ವಿಫಲವಾಯ್ತು. ಈ ಚಿತ್ರದ ಸೋಲಿನ ನಂತರ ರಾಜೀವ್ ಕಪೂರ್ ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದರು.