ಪೋರ್ನ್‌ ಮೂವಿ ರಾಕೆಟ್‌ನಲ್ಲಿ ಸಿಕ್ಕಿಬಿದ್ದ ಹೆಸರಾಂತ ನಟಿ

ಪೊಲೀಸ್‌ ಕಸ್ಟಡಿಯಲ್ಲಿರುವ ಗೆಹನಾ ವಸಿಷ್ಠ್‌ ನಿಜಕ್ಕೂ ಅಪರಾಧಿಯೇ?

ಹಿಂದಿ ಕಿರುತೆರೆ ಹಾಗೂ ಸಿನಿಮಾ ನಟಿ ಗೆಹನಾ ವಸಿಷ್ಠ್‌ ಅವರನ್ನು ಮುಂಬಯಿಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೋರ್ನ್‌ ವೀಡಿಯೋಗಳಲ್ಲಿ ಪಾಲ್ಗೊಳ್ಳುವಂತೆ ಯುವತಿಯರನ್ನು ಓಲೈಸುತ್ತಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರು ಬಂಧನಕ್ಕೊಳಗಾಗಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಅಶ್ಲೀಲ, ಅನಪೇಕ್ಷಿತ ವೀಡಿಯೋಗಳನ್ನು ಹಾಕುತ್ತಿದ್ದರು ಎನ್ನುವ ಆರೋಪವೂ ಅವರ ಮೇಲಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಆಕೆಯೊಂದಿಗೆ ಇನ್ನೂ ಐವರು ಪೊಲೀಸರ ಕಸ್ಟಡಿಯಲ್ಲಿದ್ದಾರೆ.

ಛತ್ತೀಸ್‌ಘಡ ಮೂಲದ ಗೆಹನಾ ವಸಿಷ್ಠ ಅವರ ನಿಜನಾಮಧೇಯ ವಂದನಾ ತಿವಾರಿ. 2012ರ ಮಿಸ್‌ ಏಷ್ಯಾ ಬಿಕಿನಿ ಸ್ಪರ್ಧೆಯಲ್ಲಿ ವಿಜೇತರಾದ ಅವರು ಜಾಹೀರಾತು, ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು. ಮುಂದೆ ಕಿರುತೆರೆ, ಸಿನಿಮಾರಂಗದಲ್ಲೂ ತೊಡಗಿಸಿಕೊಂಡರು. ‘ಗಂಧಿ ಬಾತ್‌’ ವೆಬ್‌ ಸರಣಿ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಗೆಹನಾ ಸ್ಟಾರ್‌ ಪ್ಲಸ್‌ನ ‘ಬೆಹನೀನ್‌’ ಸರಣಿಯಲ್ಲೂ ಹೆಸರು ಮಾಡಿದ್ದಾರೆ. ಲಕ್ನೋವಿ ಇಶ್ಕ್‌, ದಾಲ್‌ ಮೇ ಕುಚ್‌ ಕಾಲಾ ಹೈ ಸೇರಿದಂತೆ ಕೆಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.

ವೆಬ್‌ ಸರಣಿಗಳಲ್ಲಿ ಅವಕಾಶ ಕೊಡುವುದಾಗಿ ಯುವತಿಯರಿಗೆ ಆಮಿಷ ಒಡ್ಡಿ ಅವರನ್ನು ಪೋರ್ನ್‌ ವೀಡಿಯೋದಲ್ಲಿ ಕಾಣಿಸಿಕೊಳ್ಳುವಂತೆ ಗೆಹನಾ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆದರೆ ಮತ್ತೊಂದು ವಾದದ ಅನ್ವಯ ಗೆಹನಾ ಜನಪ್ರಿಯತೆಯನ್ನು ಸಹಿಸದೆ ಹಿತಶತ್ರುಗಳು ಆಕೆಯನ್ನು ಈ ಆರೋಪಕ್ಕೆ ಸಿಲುಕಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. “ಈ ವಿಚಾರದಲ್ಲಿ ಗೆಹನಾ ನಿರ್ದೋಷಿ. ಆಕೆ ಯಾವುದೇ ಪೋರ್ನ್‌ ರಾಕೆಟ್‌ನಲ್ಲಿ ತೊಡಗಿಕೊಂಡಿಲ್ಲ. ತಮ್ಮ ಜಿವಿ ಸ್ಟುಡಿಯೋದ ನಿರ್ದೇಶಕಿ, ನಿರ್ಮಾಪಕಿಯಾಗಿ ಅವರು ಕಾನೂನಿಗೆ ಮೀರಿ ಯಾವುದೇ ರೀತಿಯ ಕಾರ್ಯಚಟುವಟಿಕೆ ಕೈಗೊಂಡಿಲ್ಲ. ಇದೊಂದು ದೊಡ್ಡ ಪಿತೂರಿ” ಎಂದು ಗೆಹನಾ ವಕೀಲರು ವಾದ ಮಾಡುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಮುಂದಿನ ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

Related Posts

error: Content is protected !!