ಬೆಳ್ಳಿತೆರೆಗೆ ಸುದೀಪ್‌ ಅವರದ್ದು ಐರನ್‌‌ ಲೆಗ್ಗಾ? ಗೋಲ್ಡನ್‌ ಲೆಗ್ಗಾ?

ನಟ ಕಿಚ್ಚ ಸುದೀಪ್‌ ಅವರೇ ಈ ಬಗ್ಗೆ ಏನ್ ಹೇಳ್ತಾರೆ ಕೇಳಿ….

ಅಭಿನಯ ಚಕ್ರವರ್ತಿ ಅಂತಲೇ ಜನಪ್ರಿಯತೆ ಪಡೆದ ನಟ ಕಿಚ್ಚ ಸುದೀಪ್‌ ಅವರ ಸಿನಿಜರ್ನಿಗೆ ಈಗ ೨೫ ವರ್ಷ. ಸದ್ಯ ಸುದೀಪ್‌ ಈಗ ಅದೇ ಖುಷಿಯಲ್ಲಿದ್ದಾರೆ. ಯಾಕಂದ್ರೆ, ಒಬ್ಬ ನಟಿನಿಗೆ ಯಶಸ್ವಿ ೨೫ ವರ್ಷ ಅನ್ನೋದು ಸುಲಭವಾದದ್ದೇನು ಅಲ್ಲ. ಸೋಲಿಗಿಂತ ಹೆಚ್ಚಾಗಿ ಗೆಲುವು ಸಾಧಿಸಿಕೊಂಡಾಗಲೇ ಅದೆಲ್ಲ ಸಾಧ್ಯ. ಆ ವಿಚಾರದಲ್ಲಿ ನಟ ಸುದೀಪ್‌ ಒಬ್ಬ ಯಶಸ್ವಿ ನಟ.

ಅದಕ್ಕೆ ಅದೃಷ್ಟ ಎನ್ನಬೇಕೋ, ಇಲ್ಲವೇ ಕಠಿಣವಾದ ಪರಿಶ್ರಮ ಎನ್ನಬೇಕೋ ಗೊತ್ತಿಲ್ಲ. ಆದರೆ ಸ್ಯಾಂಡಲ್‌ ವುಡ್‌ನಲ್ಲಿ ಅವರ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆ. ಸಿನಿಮಾ ಅಂತ ಬಂದಾಗ ಅವರ ಬಗ್ಗೆ ಕೆಲವರು ಐರನ್‌ ಲೆಗ ಅಂದಿದ್ದಾರೆ. ಹಾಗೆಯೇ ಕೆಲವರು “ಗೋಲ್ಡನ್‌ ಲೆಗ್‌ʼ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದೂ ಇದೆ. ಹಾಗಾದ್ರೆ ಇವೆರೆಡು ಅಭಿಪ್ರಾಯಗಳಲ್ಲಿ ಯಾವುದು ಸರಿ ? ನಟ ಸುದೀಪ್‌ ಅವರ ಪ್ರಕಾರವೇ ಯಾವುದು ಸರಿ, ಯಾವುದು ತಪ್ಪು ?

ನಟ ಸುದೀಪ್‌ ಅವರು ತಮ್ಮ ಸಿನಿಜರ್ನಿಯ ೨೫ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭಾನುವಾರ(ಫೆ.೭) ದಂದು ಬೆಂಗಳೂರಿನ ಪಂಚತಾರಾ ಹೋಟೆಲ್‌ ನಲ್ಲಿ ಮಾಧ್ಯಮದವರೊಂದಿಗೆ ಒಂದು ಔತಣಕೂಟ ಆಯೋಜಿಸಿದ್ದರು. ಹಾಗೆಯೇ ಅಲ್ಲಿ ಅವರ ಬಹು ನಿರೀಕ್ಷಿತ ʼವಿಕ್ರಾಂತ್‌ ರೋಣʼ ಚಿತ್ರದ ಮೊದಲ ಸುದ್ದಿ ಗೋಷ್ಠಿ ಕೂಡ ಇತ್ತು. ಅದರ ಮಾತುಕತೆ ನಂತರ ಸುದೀಪ್‌ ಅವರಿಗೆ ಎದುರಾಗಿದ್ದು ಐರನ್‌ ಲೆಗ್‌ ಹಾಗೂ  ಗೋಲ್ಡನ್‌ ಲೆಗ್‌ ಬಗೆಗಿನ ಪ್ರಶ್ನೆ.

ಸಿನಿಮಾ ಮಂದಿ ನಡುವೆ ನಿಮ್ಮ ಬಗ್ಗೆ ಎರಡು ಅಭಿಪ್ರಾಯಗಳಿದ್ದವು. ಸುದೀಪ್‌ ಅಂದ್ರೆ ಐರನ್‌ ಲೆಗ್‌ ಅಂತ ಕೆಲವರು ಹೇಳಿದ್ರೆ, ಮತ್ತೆ ಕೆಲವರು ಸುದೀಪ್‌ ಅವರದ್ದು ಗೋಲ್ಡನ್‌ ಲೆಗ್‌ ಅಂತಲೂ ಹೇಳಿದ್ದರು. ಈ ಬಗ್ಗೆ ನೀವೇನು ಹೇಳ್ತೀರಾ ? ನಿಮ್ಮ ಪ್ರಕಾರ ಯಾವುದು ಸರಿ ? ಮಾಧ್ಯಮದವರು ಕೇಳಿದ ಈ ಪ್ರಶ್ನೆಗೆ ಸುದೀಪ್‌ ನೀಡಿದ ಉತ್ತರ ಮಾತ್ರ ಮಜಾ ವಾಗಿತ್ತು.” ಐರನ್‌ ಲೆಗ್ಗೋ, ಗೋಲ್ಡನ್‌ ಲೆಗ್ಗೋ ಗೊತ್ತಿಲ್ಲ. ನಂಗೆ ದೇವರು ಕೊಟ್ಟ ಎರಡು ಕಾಲುಗಳು ಮಾತ್ರ ಇವೆ. ಅವೆಲ್ಲ ಅಪ್ಪ-ಅಮ್ಮನ ಕೊಡುಗೆ. ನಂಗೆ ಅವಷ್ಟೇ ಸಾಕು, ಬೇರೆನೋ ಲೆಗ್‌ ಬೇಡ.” ಎಂದು ನಗುತ್ತಲೇ ಮಾರ್ಮಿಕವಾಗಿ ಉತ್ತರಿಸಿದರು ನಟ ಸುದೀಪ್.

Related Posts

error: Content is protected !!