ಪ್ರಭಾಸ್ ‘ರಾಧೆ ಶ್ಯಾಮ್’ ಪ್ರೀ-ಟೀಸರ್ ಔಟ್
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ತೆಲುಗು, ಹಿಂದಿ ಚಿತ್ರದ ಪ್ರೀ-ಟೀಸರ್ ವೀಡಿಯೋ ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ನಿರ್ದೇಶನದ ಈ ದ್ವಿಭಾಷಾ ಸಿನಿಮಾದ ಟೀಸರ್ ಇದೇ ಫೆಬ್ರವರಿ 14ರ ವ್ಯಾಲೆಂಟೇನ್ ದಿನ ಬಿಡುಗಡೆಯಾಗಲಿದೆ.
ಇದಕ್ಕೆ ಪೂರಕವಾಗಿ ಇಂದು ಚಿತ್ರತಂಡ ಪ್ರೀ-ಟೀಸರ್ ವೀಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ “ಬಾಹುಬಲಿ” ಮತ್ತು “ಸಾಹೋ” ಚಿತ್ರಗಳ ವೀಡಿಯೋ ಕ್ಲಿಪಿಂಗ್ಗಳು ಹಾದು ಹೋಗುತ್ತವೆ. ಅಲ್ಲಿ ಆಕ್ಷನ್ ಹೀರೋ ಆಗಿ ಪ್ರಭಾಸ್ರನ್ನು ನೋಡಿದ್ದ ಪ್ರೇಕ್ಷಕರು ‘ರಾಧೆ ಶ್ಯಾಮ್’ ಚಿತ್ರದಲ್ಲಿ ಬೇರೆಯದ್ದೇ ರೀತಿ ನೋಡಲಿದ್ದಾರೆ ಎನ್ನುವ ಸಂದೇಶ ವೀಡಿಯೋದಲ್ಲಿದೆ.
ಮಂಜುಮುಸುಕಿದ ತಿಳಿ ಬೆಳಕು, ಹಿನ್ನಲೆಯಲ್ಲಿ ಮಧುರ ಸಂಗೀತದೊಂದಿಗೆ ನಡೆದು ಹೋಗುವ ಪ್ರಭಾಸ್ ವೀಡಿಯೋ ತುಣುಕು ಕಾಣಿಸುತ್ತದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸಿನಿಮಾ 2021ರ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ.
ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ಇದ್ದಾರೆ ಎನ್ನುವುದು ವಿಶೇಷ. ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಉತ್ತರ ಭಾರತದ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿಲ್ಲ. ‘ರಾಧೆ ಶ್ಯಾಮ್’ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರಗಳು ಅವರಿಗೆ ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ದೊರಕಿಸಿಕೊಡಲಿವೆ ಎನ್ನಲಾಗುತ್ತಿದೆ.