ರೈತರ ಉಗ್ರ ಪ್ರತಿಭಟನೆ ಎಫೆಕ್ಟ್‌ – ಒಳ್ಳೇ ನಿರ್ಧಾರ ಕೈಗೊಳ್ಳಿ ಎಂದ ಸಲ್ಲು

ನಿಲುವು ಸ್ಪಷ್ಟಪಡಿಸಲು ಸ್ಟಾರ್ಸ್‌ ಮೇಲೆ ಒತ್ತಡ!

ಪ್ರಶ್ನೆಗಳಿಗೆ  ಸ್ಟಾರ್ಸ್ ತಬ್ಬಿಬ್ಬು

ದೇಶಾದ್ಯಂತ ನಡೆಯುತ್ತಿರುವ ರೈತ ಪ್ರತಿಭಟನೆ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಪಾಪ್‌ ಸ್ಟಾರ್‌ ರಿಹಾನಾರ ಟ್ವೀಟ್‌ ನಂತರದ ಬೆಳವಣಿಗೆಗಳಿವು ಅನ್ನೋದೇ ವಿಶೇಷ. ರೈತರ ಪರವಾಗಿ ದನಿ ಎತ್ತಿದ ರಿಹಾನಾಗೆ ಪ್ರತಿಕ್ರಿಯಿಸುವಂತೆ ಬಾಲಿವುಡ್‌ನ ಕೆಲವು ಸ್ಟಾರ್ ಹೀರೋಗಳು ಟ್ವೀಟ್ ಮಾಡಿದ್ದರು. ನಟಿ ಕಂಗನಾ ಒಂದು ಹೆಜ್ಜೆ ಮುಂದೆ ಹೋಗಿ ರಿಹಾನಾರ ಆಕ್ಷೇಪಾರ್ಹ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದೂ ಆಯ್ತು. ಈ ವಿಚಾರವಾಗಿ ನಟಿ ತಾಪಸಿಪನ್ನು ತಮ್ಮ ಕಾಳಜಿಯನ್ನು ಟ್ವೀಟ್‌ನೊಂದಿಗೆ ಹಂಚಿಕೊಂಡರು. ಅವರೊಂದಿಗೆ ಮತ್ತಷ್ಟು ನಟ-ನಟಿಯರು ಸೇರಿಕೊಂಡರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ತಾರೆಯರ ಮೇಲೆ ಒತ್ತಡ ಬಿದ್ದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರಿಗೆ ಈ ಕುರಿತಂತೆ ಪ್ರಶ್ನೆಗಳು ಎದುರಾಗುತ್ತಿವೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ ಕೂಡ ಮುಂಬಯಿಯಲ್ಲಿ ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆಗ ರೈತರ ಪ್ರತಿಭಟನೆ, ಕೇಂದ್ರದ ಕೃಷಿ ನೀತಿ ಕುರಿತಂತೆ ಅವರಿಗೆ ಒಂದಷ್ಟು ಪ್ರಶ್ನೆಗಳು ಎದುರಾದವು. ಪ್ರಶ್ನೆಗಳಿಗೆ ಉತ್ತರಿಸಲು ಸಲ್ಮಾನ್‌ ಒಲ್ಲೆ ಎಂದರೂ ಪತ್ರಕರ್ತರು ಬಿಲ್‌ಕುಲ್‌ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದ ಸಲ್ಮಾನ್‌, “ಈ ವಿಚಾರವಾಗಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವಂತಾಗಲಿ. ಎಲ್ಲರಿಗೂ ಒಳಿತಾಗುವಂತಾಗಲಿ” ಎಂದು ಸೂಕ್ಷ್ಮವಾಗಿ ಹೇಳುವ ಮೂಲಕ ನುಣುಚಿಕೊಂಡಿದ್ದಾರೆ.


ಇದೀಗ ದಕ್ಷಿಣ ಭಾರತದಲ್ಲಿ ತಮಿಳು, ತೆಲುಗು ಚಿತ್ರರಂಗದ ತಾರೆಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿ ಎನ್ನುವ ಚರ್ಚೆ ಶುರುವಾಗಿದೆ. ನಟ-ನಟಿಯರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಒತ್ತಡ ಹೇರುತ್ತಿದ್ದಾರೆ. ಇದು ತಾರೆಯರಿಗೀಗ ನುಂಗಲಾರದ ತುತ್ತಾಗಿದೆ. “ತಮ್ಮ ‘ಮಹರ್ಷಿ’ ತೆಲುಗು ಚಿತ್ರದಲ್ಲಿ ನಟ ಮಹೇಶ್ ಬಾಬು ರೈತರ ಕುರಿತ ಕಾಳಜಿಯ ಕಥೆ ಮಾಡಿದ್ದರು. ಈಗ ಡೆಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲಿ” ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟನನ್ನು ಪ್ರಶ್ನಿಸಿದ್ದಾರೆ.


ಟಾಲಿವುಡ್ ಸ್ಟಾರ್ ಹೀರೋಗಳಾದ ಪ್ರಭಾಸ್, ಜ್ಯೂನಿಯರ್ ಎನ್‌ಟಿಆರ್‌, ಅಲ್ಲು ಅರ್ಜುನ್‌ ಅಭಿಮಾನಿಗಳೂ ಈ ಬಗ್ಗೆ ತಮ್ಮ ನೆಚ್ಚಿನ ತಾರೆಯರ ನಿಲುವುಗಳಿಗಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ನಟ ಚಿರಂಜೀವಿ ಅವರನ್ನೂ ಇದು ಸಂದಿಗ್ಧಕ್ಕೆ ಸಿಲುಕಿಸಿದೆ. ಕಾಲಿವುಡ್‌ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿ ಪ್ರಮುಖ ತಾರೆಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವಂತಾಗಿದೆ.

Related Posts

error: Content is protected !!