ರಾಜ್ಯ ಸರ್ಕಾರದ ವಿರುದ್ಧ ಶ್ರೀಮುರಳಿ ಆಕ್ರೋಶ
ಕೇಂದ್ರ ಸರ್ಕಾರ ಚಿತ್ರಮಂದಿರಗಳಿಗೆ ನೂರರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಮಾತ್ರ ಶೇ.೫೦ರಷ್ಟು ಅನುಮತಿ ಮುಂದುವರೆಸಿದೆ. ಇದು ಸಹಜವಾಗಿಯೇ ಚಿತ್ರರಂಗದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಶಿವರಾಜಕುಮಾರ್ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರುಗಳು ತಮ್ಮ ಟ್ವೀಟ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗೊಂದು ಟ್ವೀಟ್ ಅಭಿಯಾನ ಕೂಡ ಶುರುವಾಗಿದೆ. ಅದರ ಬೆನ್ನಲ್ಲೇ, ನಟ ಶ್ರೀಮುರಳಿ ಅವರು ಕೂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮದಗಜ” ಚಿತ್ರದ ಚಿತ್ರೀಕರಣದಲ್ಲಿರುವ ಶ್ರೀಮುರಳಿ ಅವರು, ಚಿತ್ರೀಕರಣ ಸ್ಥಳದಿಂದಲೇ ವಿಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ನೂರರಷ್ಟು ಭರ್ತಿ ಆಸನಗಳಿಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ “ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ಯಾವ ನ್ಯಾಯ ಹೇಳಿ. ಎಲ್ಲರಿಗೂ ನೂರು ಪರ್ಸೆಂಟ್ ಕೊಟ್ಟುಬಿಟ್ಟು, ನಮ್ಮ ಇಂಡಸ್ಟ್ರಿಗೆ ಮಾತ್ರ ಶೇ.೫೦ ಕೊಟ್ಟಿದ್ದೀರಿ.
ಇದರಿಂದ ಬಹಳ ಬೇಸರವಿದೆ. ಬಹಳಷ್ಟು ಸಂಸಾರ ಇಂಡಸ್ಟ್ರಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ದಯವಿಟ್ಟು, ಸರ್ಕಾರಕ್ಕೆ ಕೇಳಿಕೊಳ್ಳುತ್ತಿರುವುದೇನೆಂದರೆ ನಿಮ್ಮ ನಿರ್ಧಾರವನ್ನು ಬದಲಿಸಿ, ನೂರು ಆಸನಗಳ ಭರ್ತಿಗೆ ಅವಕಾಶ ಮಾಡಿಕೊಟ್ಟು ನಮ್ ಲೈಫ್ ಅನ್ನೂ ನಾರ್ಮಲ್ ಮಾಡಿಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು, ದಯವಿಟ್ಟು ನಮ್ಮ ಈ ಆಸೆಯನ್ನು ನೆರವೇರಿಸಿಕೊಡಿ ಎಂದು ಇಂಡಸ್ಟ್ರಿ ಪರ ಕೇಳಿಕೊಳ್ಳುತ್ತಿದ್ದೇನೆ.