ಹೇಳಿಕೆ ಕೊಟ್ಟು , ವಿಲನ್‌ ಆದ್ರೂ ಹೆಲ್ತ್‌ ಮಿನಿಸ್ಟರ್

ಸಿಎಂ ಮಾತಿಗೆ ಮಾರುತ್ತರ ನೀಡದೆ ಮುಖಭಂಗ ಅನುಭವಿಸಿದರು ಸಚಿವ ಡಾ. ಸುಧಾಕರ್‌ !

ಚಿತ್ರಮಂದಿರಗಳಲ್ಲಿನ ಶೇಕಡಾ ನೂರರಷ್ಟು ಸೀಟು ಭರ್ತಿ ವಿಷಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಬುಧವಾರ ನಿಜಕ್ಕೂ ಮುಖಭಂಗ ಅನುಭವಿಸಿದರು. ನೂರರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್ವುಡ್‌ ಬುಧವಾರ ಮುಂಜಾನೆಯಿಂದಲೇ ಆರಂಭಿಸಿದ್ದ ಸೋಷಲ್‌ ಮೀಡಿಯಾ ಆಭಿಯಾನಕ್ಕೆ ಮಧ್ಯಾಹ್ನ ಸುಧಾಕರ್‌ ವಿಧಾನ ಸೌಧದಲ್ಲೇ ಪ್ರತಿಕ್ರಿಯೆ ನೀಡಿದ್ದರು. ಅವರ ಹೇಳಿಕೆಯೇ ವಿಚಿತ್ರವಾಗಿತ್ತು. ಸಿಎಂ ಜೊತೆ ಮಾತುಕತೆ ನಡೆಸಿ, ಆ ಹೇಳಿಕೆ ನೀಡಿದ್ದರೂ ಅಥವಾ ತಾವೇ ಸ್ವ ಇಚ್ಚೆಯಿಂದ ಈ ಹೇಳಿಕೆ ನೀಡಿದ್ದರೂ ಗೊತ್ತಿಲ್ಲ. ʼಮನರಂಜನೆಗಿಂತ ತಮಗೆ ಜನರ ಆರೋಗ್ಯ ಮುಖ್ಯʼಎನ್ನುವ ಮಾತುಗಳನ್ನು ತೀರಾ ವ್ಯಂಗ್ಯದ ಧ್ವನಿಯಲ್ಲೇ ನೀಡಿದ್ದರು. ಆದರೆ ಆ ಹೇಳಿಕೆ ಗೆ ಸ್ಯಾಂಡಲ್‌ ವುಡ್‌ ಜತೆಗೆ ಅಧಿವೇಶನದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್‌ ವಿಲನ್‌ ಸ್ಥಾನದಲ್ಲಿ ನಿಂತರು.


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿಯೇ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡರು. ಮತ್ತೊಂದೆಡೆ ಚಿತ್ರರಂಗ ಸಿಟ್ಟಾಗಿ ಕುಳಿತಿತು. ಈ ಬೆಳವಣಿಗೆಗಳ ಬೆನ್ನಲೇ ಸಿಎಂ ಯುಡಿಯೂರಪ್ಪ ಎಚ್ಚೆತ್ತುಕೊಂಡರು. ಉರಿಯುವ ಬೆಂಕಿಗೆ ಸಿಲುಕಬಹುದೆನ್ನುವ ಸೂಚನೆ ಸಿಗುತ್ತಿದ್ದಂತೆ ಆರೋಗ್ಯ ಸಚಿವ ಸುಧಾಕರ್‌ ಗೆ ಕ್ಲಾಸ್‌ ತೆಗೆದುಕೊಂಡರು. ತಕ್ಷಣವೇ ಚಿತ್ರರಂಗದ ಗಣ್ಯರ ಜತೆ ಸಭೆ ನಡೆಸಿ, ಷರತ್ತು ಬದ್ಧ ಅವಕಾಶ ನೀಡಲು ಕ್ರಮ ಕೈಗೊಳ್ಳಿ ಅಂತ ಕಿವಿ ಹಿಂಡಿದರು.

ಇದಾಗುತ್ತಿದ್ದಂತೆ ತೀವ್ರ ಮುಖಭಂಗ ಅನುಭವಿಸಿದ ಸುಧಾಕರ್‌, ತಕ್ಷಣವೇ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಿತ್ರರಂಗದವರ ಜತೆಗೆ ಸಭೆ ನಡೆಸಿದರು. ಚಿತ್ರೋದ್ಯಮದ ಪರಿಸ್ಥಿತಿ ಅವಲೋಕಿಸಿ, ಅವಕಾಶ ಕೊಡುವುದಾಗಿ ಹೇಳಿದರು. ಒಟ್ಟಾರೆ ಪೂರ್ವಾಲೋಚನೆ ಇಲ್ಲದೆ ಸುಧಾಕರ್‌ , ಒಂದು ಹೇಳಿಕೆ ಕೊಟ್ಟು ಆಮೇಲೆ ಮುಖಭಂಗ ಅನುಭವಿಸಬೇಕಾಗಿ ಬಂತು.

Related Posts

error: Content is protected !!