ಅಭಿಮಾನಿ ಪ್ರಶ್ನೆಗೆ ಕನ್ನಡ ಮೂಲದ ರೂಪದರ್ಶಿ, ನಟಿಯ ಖಡಕ್ ಉತ್ತರ
ಕನ್ನಡ ಮೂಲದ ರೂಪದರ್ಶಿ, ನಟಿ ಸನಂ ಶೆಟ್ಟಿ ಕಾಲಿವುಡ್‌ನಲ್ಲಿ ಹೆಚ್ಚು ಪರಿಚಿತರು. ‘ಅಥರ್ವ’ ಕನ್ನಡ ಸಿನಿಮಾ ಸೇರಿದಂತೆ ತಮಿಳು, ತೆಲುಗು, ಮಲಯಾಳಂನ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಮಿಸ್ ಸೌತ್ ಇಂಡಿಯಾ’ (2016) ಪ್ರಶಸ್ತಿ ವಿಜೇತೆಯಾದ ಸನಂ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಅಂಬುಲಿ’ ತಮಿಳು ಚಿತ್ರದೊಂದಿಗೆ. ನಟ ಕಮಲ್ ಹಾಸನ್ ನಿರೂಪಿಸಿದ ‘ಬಿಗ್‌ಬಾಸ್ 4’ ರಿಯಾಲಿಟಿ ಶೋ ಸ್ಪರ್ಧಿಯಾಗಿ ಅವರು ಜನರಿಗೆ ಹೆಚ್ಚು ಹತ್ತಿರವಾದರು. ನೇರ ಮಾತಿನ ಸನಂ ಕೋಪತಾಪಗಳನ್ನು ಪ್ರದರ್ಶಿಸಿದರೂ ಬಲಿಷ್ಠ ಸ್ಪರ್ಧಿಯಾಗಿದ್ದ ಅವರು 63ನೇ ದಿನ ಬಿಗ್‌ಬಾಸ್ ಮನೆಯಿಂದ ಹೊರ ಬಿದ್ದಿದ್ದರು.
ಬಿಗ್‌ಬಾಸ್‌ನಿಂದ ಹೊರಬಂದ ಅವರಿಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಅಲ್ಲಿ ಅಭಿಮಾನಿಗಳು ನಟಿಯ ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. “ನೀವು ಬೈತಲೆಯಲ್ಲಿ ಸಿಂಧೂರ ಇಡುತ್ತೀರಿ. ನೀವು ಮದುವೆ ಆಗದ್ದೀರಾ?” ಎನ್ನುವ ಪ್ರಶ್ನೆಗಳಿಗೆ ನಟಿ ಕೋಪ ಮಾಡಿಕೊಳ್ಳುತ್ತಾರೆ. “ಮದುವೆಯಾದ ಮಹಿಳೆಯರಷ್ಟೇ ಸಿಂಧೂರ ಇಡಬೇಕೆನ್ನುವ ನಿಯಮವೇನೂ ಇಲ್ಲ. ನನಗಿನ್ನೂ ಮದುವೆಯಾಗಿಲ್ಲ. ಹಾಗೇನಾದರೂ ಇದ್ದರೆ ನಿಮಗೆ ತಿಳಿಸಿಯೇ ಮದ್ವೆ ಆಗುತ್ತೇನೆ” ಎಂದು ಉತ್ತರ ಕೊಟ್ಟಿದ್ದಾರೆ ಸನಂ. ‘ಬಿಗ್‌ಬಾಸ್ 3’ ಸ್ಪರ್ಧಿ ರರ್ಶನ್ ತ್ಯಾಗರಾಜ್ ಅವರೊಂದಿಗೆ ಸನಂ ನಿಶ್ಚಿತಾರ್ಥ ನೆರವೇರಿತ್ತು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎನ್ನುವ ವೇಳೆಗೆ ಸಂಬಂಧ ಮುರಿದುಬಿದ್ದಿತು. ಇದೇ ಕಾರಣಕ್ಕೆ ಅವರ ಮದುವೆ ಕುರಿತಂತೆ ಊಹಾಪೋಹಗಳು ಹರಡುತ್ತಿರುವುದು ಎನ್ನಲಾಗಿದೆ.