ಜನಪ್ರಿಯ ಹಾಸ್ಯನಟನಿಗೆ ಸ್ಟಾರ್ಸ್ ಶುಭ ಹಾರೈಕೆ
ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ ಹೆಸರು ಕೇಳಿದವರಿಗೆ ಹಾಗೊಂದು ಜೋರು ನಗು ಬರದೇ ಇರದು. ಅಷ್ಟರಮಟ್ಟಿಗೆ ಸಿನಿರಸಿಕರವನ್ನು ನಕ್ಕು ನಲಿಸಿರುವ ಖ್ಯಾತಿ ಈ ಬ್ರಹ್ಮಾನಂದಂ ಅವರಿಗಿದೆ. ಈಗ ಬ್ರಹ್ಮಾನಂದಂ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬ್ರಹ್ಮಾನಂದ್ ಈಗ 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ತೆಲುಗು ಚಿತ್ರರಂಗದ ಜನಪ್ರಿಯ ತಾರೆಯರೆಲ್ಲರೂ ಶುಭ ಹಾರೈಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಸೇರಿದಂತೆ 1200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಬ್ರಹ್ಮಾನಂದಂ ಅವರಿಗಿದೆ.
ಪದ್ಮಶ್ರೀ ಪುರಸ್ಕೃತ ನಟ “ಆಹಾ ನಾ ಪೆಳ್ಳಂಟ” (1986) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಇವರು, ನಟರಾಗುವ ಮುನ್ನ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಪದ್ಮಶ್ರೀ ಪುರಸ್ಕೃತ ನಟನಿಗೆ ಈವರೆಗೆ ಹತ್ತಾರು ಗೌರವಗಳು ಸಂದಿವೆ.
ತಮ್ಮೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಬ್ರಹ್ಮಾನಂದಂ ಅವರಿಗೆ ತೆಲುಗು ತಾರೆಯರು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ನಟ ರಾಮ್ಚರಣ್ ತೇಜಾ, “ಕಾಮಿಡಿ ಕಿಂಗ್ ಬ್ರಹ್ಮಾನಂದಂ ಅಂಕಲ್ಗೆ ಶುಭಾಶಯ” ಎಂದು ಹಾರೈಸಿದ್ದಾರೆ. ನಟ ವರುಣ್ ತೇಜ್ ಅವರು ಬ್ರಹ್ಮಾನಂದ ಜೊತೆಗಿನ ತಮ್ಮ ಫೋಟೋ ಹಾಕಿ ಶುಭ ಕೋರಿದ್ದಾರೆ.
ನಟರಾದ ರವಿ ತೇಜಾ, ಅಲ್ಲು ಅರ್ಜುನ್, ನಿರ್ದೇಶಕರಾದ ಸುರೇಂದರ್ ರೆಡ್ಡಿ, ಬಾಬ್ಬಿ, ಗೋಪಿಚಂದ್ ಮಾಲಿನೇನಿ, ವೆನ್ನಲ ಕಿಶೋರ್, ಹರೀಶ್ ಶಂಕರ್, ನಟ ಸಾಯಿ ಧರ್ಮ್ ತೇಜ್, ಚಿತ್ರಸಾಹಿತಿ ಕೋನಾ ವೆಂಕಟ್ ಸೇರಿದಂತೆ ಚಿತ್ರರಂಗದ ಹಲವರು ಹಿರಿಯ ಹಾಸ್ಯನಟನಿಗೆ ಶುಭ ಕೋರಿದ್ದಾರೆ.