ಆದ್ರೂ ಅಪ್ಪಟ ಕನ್ನಡತಿ ಕಣ್ರೀ ಈ ಬೆಡಗಿ
ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಥಿರಾ ಎಂಬ ನವನಟಿ ಕೂಡ ಸೇರಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡ ಚಿತ್ರರಂಗದ ಬಾಗಿಲ ಬಳಿ ಬಂದು ನಿಂತಿದ್ದಾರೆ. ಇದಕ್ಕೂ ಮುನ್ನ, ಮಲಯಾಳಂ ಚಿತ್ರರಂಗದಲ್ಲಿ ಕಾಲಿಟ್ಟು, ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ, ಅಥಿರಾ “ಹಾಫ್” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಬಂದಿರುವ ಅಥಿರಾ ತಮ್ಮ ಸಿನಿಜರ್ನಿ ಕುರಿತು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.
ಓವರ್ ಟು ಅಥಿರಾ
ನಾನು ಈಗಷ್ಟೇ ಕಾಲೇಜು ಓದುತ್ತಿದ್ದೇನೆ. ಸಿನಿಮಾ ನನ್ನ ಪ್ಯಾಷನ್. ಇಲ್ಲಿ ಒಳ್ಳೆಯ ಕಥೆ, ಪಾತ್ರಗಳ ಮೂಲಕ ಕಾಣಿಸಿಕೊಂಡು ಭದ್ರ ನೆಲೆಕಂಡುಕೊಳ್ಳು ಆಸೆ ನನ್ನದು. ಹಾಗಾಗಿಯೇ, ನಾನು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ನಾನು ನಟನೆ ಕೋರ್ಸ್ ಅನ್ನುವುದೇನೂ ಮಾಡಿಲ್ಲ. ಆಡಿಷನ್ ಮೂಲಕ ಆಯ್ಕೆಯಾಗಿದ್ದು, ಈಗಾಗಲೇ ಮಲಯಾಳಂ ಭಾಷೆಯ “ಲಾಲ್ ಜೋಸ್” ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಕನ್ನಡ ಸಿನಿಮಾಗೂ ಆಯ್ಕೆಯಾಗಿ ನಟಿಸಿದ್ದೇನೆ.
“ಹಾಫ್” ನನ್ನ ಮೊದಲ ಕನ್ನಡ ಚಿತ್ರ. ಒಳ್ಳೆಯ ಕಥೆ, ಪಾತ್ರ ಇದ್ದುದರಿಂದ ನಾನು ಆ ಚಿತ್ರ ಮಾಡಲು ಒಪ್ಪಿದ್ದೇನೆ. ಸದ್ಯಕ್ಕೆ ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ನನ್ನ ಬಗ್ಗೆ ಹೇಳುವುದಾದರೆ, ಕಳೆದ ಒಂಭತ್ತು ವರ್ಷಗಳಿಂದ ಕಥಕ್ ಮತ್ತು ಭರತನಾಟ್ಯ ಅಭ್ಯಾಸ ಮಾಡಿದ್ದೇನೆ. ನಟನೆ ಬಗ್ಗೆ ಪ್ಯಾಷನ್ ಇತ್ತು. ಹಾಗಾಗಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದೆ. “ಹಾಫ್” ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ. ಇನ್ನು, ಇಲ್ಲಿ ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟ. ಇನ್ನು, ನನಗೆ ಯಶ್ ಹಾಗೂ ರಾಧಿಕಾ ಪಂಡಿತ್ ರೋಲ್ ಮಾಡೆಲ್. ನನಗೆ ಕಮರ್ಷಿಯಲ್ ಮತ್ತು ಕಲಾತ್ಮಕ ಸಿನಿಮಾಗಳು ಎಂಬುದಿಲ್ಲ. ಯಾವುದೇ ಸಿನಿಮಾ ಇದ್ದರೂ, ಒಳ್ಳೆಯ ಕಥೆ ಮತ್ತು ಪಾತ್ರ ಇದ್ದರೆ, ಖಂಡಿತ ಒಪ್ಪಿಕೊಂಡು ಕೆಲಸ ಮಾಡುತ್ತೇನೆ. ಒಟ್ಟಲ್ಲಿ ಆ ಪಾತ್ರ ಜನರಿಗೆ ತಲುವಂತಿರಬೇಕಷ್ಟೇ ಎಂಬುದು ಅಥಿರಾ ಮಾತು.
ಗ್ಲಾಮರಸ್ಗೆ ತಕರಾರಿಲ್ಲ…
ಇನ್ನು, “ಹಾಫ್” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಒಂದೊಳ್ಳೆಯ ಪಾತ್ರವೇ ಸಿಕ್ಕಿದೆ. ಅದೊಂದು ರೀತಿ ನನಗೆ ಹೊಸ ರೀತಿಯ ಪಾತ್ರ. ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿಯುವ ಹಂತ ತಲುಪಿದೆ. ಸಾಂಗ್ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿಕೊಳ್ಳುವ ಅಥಿರಾ, ನನಗೆ ಎಲ್ಲಾ ಭಾಷೆಯ ಸಮಸ್ಯೆ ಇಲ್ಲ. ಮಲಯಾಳಂ, ಕನ್ನಡ, ತೆಲುಗು ಭಾಷೆ ಬರುತ್ತೆ. ಯಾಕೆಂದರೆ, ನಾನು ಇಲ್ಲಿಯವಳಾಗಿದ್ದರೂ, ಮೂಲತಃ ಕೇರಳದವಳು.
ಅಪ್ಪ ಅರುಣ್ ಕನ್ನಡದವರು. ಅಮ್ಮ ಶ್ರೀಜಾ ಕೇರಳದವರು. ಹಾಗಾಗಿ ಎರಡೂ ಭಾಷೆ ನನಗೆ ಸುಲಲಿತ. “ಹಾಫ್” ಬಗ್ಗೆ ಹೇಳುವುದಾದರೆ, ಈ ಚಿತ್ರ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿ ಸೀನ್ ಮುನ್ನ ತಾವೇ ನಟಿಸಿ ತೋರಿಸುತ್ತಿದ್ದರು. ಒಂದೊಳ್ಳೆಯ ಚಿತ್ರ ಮಾಡಿದ ಹೆಮ್ಮೆ ನನಗಿದೆ. ಮುಂದೆ ಯಾವುದೇ ಸಿನಿಮಾಗಳಿರಲಿ, ಕಥೆ ಹಾಗೂ ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯಾವ ತಕರಾರೂ ಇಲ್ಲ ಎಂಬುದು ಅಥಿರಾ ಮಾತು.
ಮೊದಲ ಪೋಸ್ಟರ್ ರಿಲೀಸ್
ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿರುವ “ಹಾಫ್” ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. “ಹಾಫ್” ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ನಟನೆ ಬಗ್ಗೆ ನಿರ್ದೇಶಕ ಲೋಕೇಂದ್ರ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಮ್ಮ ಸಿನಿಮಾಗೆ ಸ್ಕೂಲ್ ಸ್ಟೂಡೆಂಟ್ ಕ್ಯಾರೆಕ್ಟರಿನ ನಾಯಕನಟಿ ಬೇಕಿತ್ತು. ಆಡಷನ್ನಲ್ಲಿ ಅಥಿರಾ ಭಾವಾಭಿವ್ಯಕ್ತಿ ನೋಡಿ ಸೆಲೆಕ್ಟ್ ಮಾಡಿಕೊಂಡೆ.
ಸದ್ಯ ಅಥಿರಾ ಅವರ ಭಾವಚಿತ್ರ ಇರುವ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ವರ್ಲ್ಡ್ ಬುಕ್ ಆಫ್ ರೆಕಾರ್ಡ್”ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ಕರೆಸಿಕೊಳ್ಳುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಾಣವಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದರೆ, ರಾಕಿ ಸೋನು ಸಂಗೀತವಿದೆ. ಥ್ರಿಲ್ಲರ್ ಮಂಜು ಸಾಹಸವಿದೆ.