ಕನ್ನಡಕ್ಕೆ ಮತ್ತೊಂದು ಹಾರರ್ ಚಿತ್ರ
ಈಗ ಸಿನಿಮಾರಂಗ ಮತ್ತಷ್ಟು ರಂಗು ರಂಗಾಗಿದೆ. ಇನ್ನೇನು ಫೆಬ್ರವರಿ ಒಂದರಿಂದ ಸ್ಯಾಂಡಲ್ವುಡ್ ತನ್ನ ಕಾರ್ಯಚಟುವಟಿಕೆಯನ್ನು ಸಾಕಷ್ಟು ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹೌದು, ಈಗಾಗಲೇ ಸ್ಟಾರ್ ಚಿತ್ರಗಳು ತಮ್ಮ ಚಿತ್ರಗಳ ಬಿಡುಗಡೆ ದಿನವನ್ನು ಘೋಷಿಸಿವೆ. ಆ ಸಾಲಿಗೆ ಈಗ ಹೊಸಬರ “ಸ್ಕೇರಿ ಫಾರೆಸ್ಟ್” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.
ಹೌದು, ಸಂಪೂರ್ಣ ಹೊಸಬರೇ ಸೇರಿ ಮಾಡಿರುವ “ಸ್ಕೇರಿ ಫಾರೆಸ್ಟ್” ಹಾರರ್ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ “ಸ್ಕೇರಿ ಫಾರೆಸ್ಟ್” ಚಿತ್ರವೂ ಸೇರಿದೆ. ಈ ಚಿತ್ರಕ್ಕೆ “ಪ್ರೀತಿ-ಭಯ-ಆತ್ಮ” ಎಂಬ ಅಡಿಬರಹವಿದೆ. ಈ ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ.
ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಮಿತ್ರರೆಲ್ಲ ಸೇರಿ ಒಂದು ಸಂಶೋಧನೆಗೆಂದು ಕಾಡಿಗೆ ಹೋಗುತ್ತಾರೆ. ಅಲ್ಲೊಂದಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯ ಜಯಪ್ರಭು ಆರ್. ಲಿಂಗಾಯಿತ್ ಚಿತ್ರದ ನಿರ್ಮಾಪಕರು. ಸಂಜಯ್ ಅಭೀರ್ ನಿರ್ದೇಶನವಿದೆ. ಇದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿದೆ.
ನಿರ್ದೇಶಕ ಸಂಜಯ್ ಅಭೀರ್ ಅವರು ಬಾಲಿವುಡ್ನಲ್ಲಿ ಒಂದಷ್ಟು ಕೆಲಸ ಮಾಡಿದ ಅನುಭವ ಹೊಂದಿದ್ದು, ಆ ಅನುಭವದ ಮೇಲೆ ಈ ಚಿತ್ರ ಮಾಡಿದ್ದಾರೆ. ನಿರ್ಮಾಪಕ ಜಯಪ್ರಭು ಆರ್. ಲಿಂಗಾಯಿತ್, ಮುಂಬೈನಲ್ಲಿದ್ದಾರೆ. ಡಾ.ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವ ಅವರು, ಅವರ ಸ್ಫೂರ್ತಿಯಿಂದಲೇ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಮುಂಬೈನಲ್ಲೊಂದು ಕಾರ್ಖಾನೆ ನಡೆಸುತ್ತಿರುವ ಜಯಪ್ರಭು ಲಿಂಗಾಯಿತ್, ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಟ್ರಸ್ಟ್ವೊಂದನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯ ನಡೆಸುತ್ತಿದ್ದಾರೆ. ಗೆಳೆಯರೊಬ್ಬರು ಸಿನಿಮಾ ನಿರ್ಮಾಣ ಮಾಡಿ ಅಂದಾಗ, ಕನ್ನಡ ಸಿನಿಮಾ ಮಾಡಿದರೆ ಮಾತ್ರ ಮಾಡುವುದಾಗಿ ಹೇಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನಿರ್ದೇಶಕ ಸಂಜಯ್ ಅಭೀರ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ನೀಡಿದ್ದಾರೆ. ಹಾಲಿವುಡ್ ನ “ಜಂಗಲ್ ಬುಕ್ 1994”, ಹಿಂದಿಯ “ರಾಗಿಣಿ ಎಂ.ಎಂ.ಎಸ್-೨” ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣವಿದೆ. ರಾಜೇಶ್ ಶಾ ಸಂಕಲನ ಹಾಗೂ ದೀಪಕ್ ಶರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕುತೂಹಲಕಾರಿ ಕಥೆಯೊಂದಿಗೆ ಟ್ರಯಾಂಗಲ್ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಸಾಗಲಿದೆ. ನಿರ್ಮಾಪಕ ಜಯಪ್ರಭು ಸಹ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಜೀತ್ ರಾಯ್ದತ್, ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಟೀನಾ ಪೊನ್ನಪ್ಪ, ಆಮ್ ರೀನ್, ಕಲ್ಪನಾ ನಾಯಕಿಯರು. ಬೇಬಿ ಪೂಜಾ ಇತರರು ನಟಿಸಿದ್ದಾರೆ. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ.