ಇದು ಕಿಶೋರ್-ಹರಿಪ್ರಿಯಾ ಜೋಡಿ ಸಿನಿಮಾ
ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ “ಅಮೃತಮತಿ” ಸಿನಿಮಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆ ಸಿನಿಮಾಗೆ ಒಂದಷ್ಟು ಪ್ರಶಸ್ತಿಗಳು ಲಭಿಸುತ್ತವೆ ಎಂಬ ಮಾತುಗಳೂ ಕೂಡ ಕೇಳಿಬಂದಿದ್ದವು. ಈಗ ಆ ಮಾತು ನಿಜವಾಗಿದೆ.
ಹೌದು, “ಅಮೃತಮತಿ” ಚಿತ್ರಕ್ಕೆ ಅಮೆರಿಕದ ಅಟ್ಲಾಂಟದಲ್ಲಿ ನಡೆದ ‘ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ದಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿದೆ. “ಅಮೃತಮತಿ” ಈಗಾಗಲೇ 5 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.
ನೋಯ್ಡಾದ 4ನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈ ಚಲನ ಚಿತ್ರೋತ್ಸವದಲ್ಲಿ “ಅಮೃತಮತಿ” ಪಾತ್ರ ನಿರ್ವಹಿಸಿದ್ದ ಹರಿಪ್ರಿಯ ಅವರು ಶ್ರೇಷ್ಠನಟಿ ಪ್ರಶಸ್ತಿಗೆ ಭಾಜನರಾಗಿದ್ದರು. “ಅಮೃತಮತಿ” ಸಿನಿಮಾ 13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತ್ರೆಯನ್ನು ಆಧರಿಸಿ ಮಾಡಲಾಗಿದೆ. ಇನ್ನು ಚಿತ್ರದ ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.
ಇವರೊಂದಿಗೆ ಹಿರಿಯ ನಟರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಮುಂಬೈ ಮೂಲದ ಸಿಎಆರ್ ಯು ಎಂಟರ್ ಪ್ರೈಸಸ್ ಸಂಸ್ಥೆ ಈಚಿತ್ರದ ಪ್ರದರ್ಶನದ ಹಕ್ಕು ಪಡೆದಿದೆ. ಚಿತ್ರಮಂದಿರ ಮಾತ್ರವಲ್ಲದೆ ಈ ಸಿನಿಮಾ ಓಟಿಟಿಯಲ್ಲೂ ರಿಲೀಸ್ ಆಗಲಿದೆ ಎನ್ನಲಾಗಿದೆ.