ಅಲ್ಲು ಅರ್ಜುನ್ ಮತ್ತು ರಷ್ಮಿಕಾ ಮಂದಣ್ಣ ಜೋಡಿಯ ‘ಪುಷ್ಪ’ ತೆಲುಗು ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್
ತೆಲುಗು ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಪುಷ್ಪ’ ಬಿಡುಗಡೆ ದಿನಾಂಕ ಘೋಷಿಸಿದೆ. ಇದೇ ಆಗಸ್ಟ್ 13ರಂದು ಚಿತ್ರ ತೆರೆಕಾಣಲಿದ್ದು, ಅಭಿಮಾನಿಗಳಿಗೆ ಸುದ್ದಿ ಖುಷಿ ತಂದಿದೆ. “ಸಿನಿಮಾ ಥಿಯೇಟರ್‌ಗಳಲ್ಲಿ ನಿಮ್ಮನ್ನೆಲ್ಲಾ ಭೇಟಿ ಮಾಡಲು ಕಾತರನಾಗಿದ್ದೇನೆ. ಮತ್ತೊಂದು ಮ್ಯಾಜಿಕ್‌ನ ನಿರೀಕ್ಷೆಯಿದೆ!” ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿ ತಮ್ಮ ರಗಡ್ ಲುಕ್‌ನ ಪೋಸ್ಟರೊಂದನ್ನು ಶೇರ್ ಮಾಡಿದ್ದಾರೆ.
‘ಪುಷ್ಪ’ ಚಿತ್ರದೊಂದಿಗೆ ಬಹುವರ್ಷಗಳ ನಂತರ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಮತ್ತು ಸಂಗೀತ ಸಂಯೋಜಕ ದೇವಿಶ್ರೀ ಪ್ರಸಾದ್ ಜೊತೆಯಾಗುತ್ತಿದ್ದಾರೆ. ಈ ಹಿಂದೆ ಈ ಮೂವರ ಕಾಂಬಿನೇಷನ್‌ನಲ್ಲಿ ‘ಆರ್ಯ’ ಮತ್ತು ‘ಆರ್ಯ2’ ದೊಡ್ಡ ಯಶಸ್ಸು ಕಂಡಿದ್ದವು. ಈ ಎರಡೂ ಚಿತ್ರಗಳು ನಟ ಅಲ್ಲು ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ತಂದಿಕೊಟ್ಟಿದ್ದಲ್ಲದೆ ಅವರ ಸಿನಿಮಾ ಬದುಕಿಗೆ ತಿರುವು ನೀಡಿದ್ದವು. ಇದೀಗ ಮತ್ತೊಮ್ಮೆ ಮೂವರೂ ಮೋಡಿ ಮಾಡಲು ಸನ್ನದ್ಧರಾಗಿದ್ದಾರೆ.
ಬಿಡುಗಡೆಯಾಗಿರುವ ಹೊಸ ಪೋಸ್ಟರ್‌ನಲ್ಲಿ ಅಲ್ಲು ಕೊಡಲಿ ಹಿಡಿದು ರಗಡ್ ಲುಕ್‌ನಲ್ಲಿದ್ದಾರೆ. ನಿರ್ದೇಶಕ ಸುಕುಮಾರ್ ‘ಸ್ಟೈಲಿಶ್ ಸ್ಟಾರ್’ ಅಲ್ಲು ಅವರನ್ನು ಚೆನ್ನಾಗಿಯೇ ಬಳಕೆ ಮಾಡಿಕೊಂಡಿರುವಂತಿದೆ. ಕನ್ನಡತಿ ರಷ್ಮಿಕಾ ಮಂದಣ್ಣ ಚಿತ್ರದ ನಾಯಕಿಯಾಗಿದ್ದು, ಮೊದಲ ಬಾರಿ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಮಹೇಶ್ ಬಾಬು ಜೋಡಿಯಾಗಿ ರಷ್ಮಿಕಾ ‘ಸರಿಲೇರು ನೀಕೆವ್ವಾರು’ ತೆಲುಗು ಚಿತ್ರದಲ್ಲಿ ಗೆಲುವಿನ ನಗೆ ಬೀರಿದ್ದರು.