ಕೊರೋನಾ ಹೊಡೆತಕ್ಕೆ ಸಿಲುಕಿ ಚಿತ್ರೀಕರಣ ನಿಲ್ಲಿಸಿತ್ತು ಸೂಪರ್ ಸ್ಟಾರ್ ಸಿನಿಮಾ !
ಸಿರುತೈ ಶಿವ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್ ನಟಿಸಿರುವ ‘ಅನ್ನಾಥೆ’ ತಮಿಳು ಚಿತ್ರದ ಬಿಡುಗಡೆ ದಿನಾಂಕ ಈ ವರ್ಷ ನವೆಂಬರ್ 4 ಎಂದು ನಿಗಧಿಯಾಗಿದೆ.ರಜನೀಕಾಂತ್‌ಗೆ ರಾಜಕೀಯ ಬೇಕು, ಬೇಡ ಎನ್ನುವ ಚರ್ಚೆಯ ಮಧ್ಯೆ ಅಭಿಮಾನಿಗಳು ಅವರ ಸಿನಿಮಾ ಕುರಿತ ಸುದ್ದಿಯ ನಿರೀಕ್ಷೆಯಲ್ಲಿದ್ದರು. ಇದೀಗ ಅವರ ‘ಅನ್ನಾಥೆ’ ಸಿನಿಮಾತಂಡದಿಂದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೂಪರ್‌ಹಿಟ್ ಕಮರ್ಷಿಯಲ್ ಸಿನಿಮಾಗಳ ನಿರ್ದೇಶಕ ಸಿರುತೈ ಶಿವ ಸಾರಥ್ಯದಲ್ಲಿ ರಜನೀಕಾಂತ್ ನಟಿಸುತ್ತಿರುವ ತಮಿಳು ಸಿನಿಮಾ ‘ಅನ್ನಾಥೆ’ ಬರುವ ನೆವೆಂಬರ್ 4ಕ್ಕೆ ಥಿಯೇಟರ್‌ಗೆ ಬರಲಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಚಿತ್ರ ಮೊನ್ನೆ ಪೊಂಗಲ್‌ಗೆ ತೆರೆಗೆ ಬರಬೇಕಿತ್ತು. ಕೊರೋನಾದಿಂದಾಗಿ ಚಿತ್ರೀಕರಣ ನಿಂತುಹೋಗಿದ್ದರಿಂದ ಅಭಿಮಾನಿಗಳು ನಿರಾಶರಾಗಿದ್ದರು.
ಲಾಕ್‌ಡೌನ್ ಘೋಷಣೆಯಾದ ನಂತರ ಸುಮಾರು ಒಂಬತ್ತು ತಿಂಗಳು ಚಿತ್ರೀಕರಣ ನಡೆದೇ ಇರಲಿಲ್ಲ. ಕೊನೆಗೆ 2020ರ ಡಿಸೆಂಬರ್ ಮಧ್ಯದಲ್ಲಿ ರಜನೀಕಾಂತ್ ಹೈದರಾಬಾದ್ ಸೆಟ್‌ಗೆ ಹಾಜರಾಗಿದ್ದರು. ಒಂದೆರೆಡು ದಿನ ಕಳೆಯುವಷ್ಟರಲ್ಲೇ ಸೆಟ್‌ನಲ್ಲಿದ್ದ ನಾಲ್ವರು ಕಾರ್ಮಿಕರಿಗೆ ಕೊರೋನಾ ಅಂಟಿತು. ಆಗ ರಜನೀಕಾಂತ್ ಸೇರಿದಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಇತರೆ ಕಲಾವಿದರು ಕೊರೋನಾ ಟೆಸ್ಟ್ ಮಾಡಿಸಿದ್ದರು. ಅವರಿಗೆಲ್ಲಾ ರಿಪೋರ್ಟ್ ನೆಗೆಟೀವ್ ಬಂದಿದ್ದರಿಂದ ನಿರ್ಮಾಪಕರು ಸಮಾಧಾನದ ನಿಟ್ಟುಸಿರುಬಿಟ್ಟಿದ್ದರು. ಹೀಗಾಗಿ ಮತ್ತೊಮ್ಮೆ ಚಿತ್ರೀಕರಣ ನಿಂತುಹೋಯ್ತು.
ಈ ಮಧ್ಯೆ ರಜನೀಕಾಂತ್ ಬಿಪಿ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕೆಲವು ದಿನಗಳ ನಂತರ ಅವರು ‘ಅನ್ನಾಥೆ’ ಕೊನೆಯ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು, ಸಿನಿಮಾ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಹಾಗಾಗಿ ನಿರ್ಮಾಪಕರು ಚಿತ್ರದ ಪ್ರೊಮೋಷನ್ ಭಾಗವಾಗಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಕೀರ್ತಿಸುರೇಶ್, ನಯನತಾರಾ, ಖುಷ್ಬು, ಮೀನಾ, ಪ್ರಕಾಶ್ ರೈ ಚಿತ್ರದ ಇತರೆ ಪ್ರಮುಖ ತಾರಾಬಳಗದಲ್ಲಿದ್ದಾರೆ.