ಹಠವಾದಿ ಕ್ರಿಯೇಷನ್ಸ್ ಮೂಲಕ ರಾಜಶೇಖರ್ ಚಂದ್ರಶೇಖರ್ ನಿರ್ಮಿಸಿದ ಸಿನಿಮಾ
ಇದು ನಿಮ್ಮೂರು ಅಂದ್ರೆ, ನಮ್ಮೂರು ಕೂಡ. ನಿಮ್ಮೂರು ಆಗಲಿ, ನಮ್ಮೂರು ಆಗಲಿ ಎರಡು ಹಳ್ಳಿ. ಆ ಹಳ್ಳಿಯೊಳಗೆ ಏನೀರಲ್ಲ ಹೇಳಿ? ಹಾಸ್ಯ, ರಾಜಕೀಯ, ವಿಡಂಬನೆ, ಗಲಾಟೆ, ಗೂಂಡಾಗಿರಿ, ತಮಾಷೆ ಎಲ್ಲವೂದರ ಮಿಕ್ಸರ್ ಹಳ್ಳಿ. ಆ ಹಳ್ಳಿಯೊಳಗಿನ ಹಾಸ್ಯ ಹೇಗಿರುತ್ತೆ ಅನ್ನೋದನ್ನೇ ಪ್ರಧಾನವಾಗಿಟ್ಟುಕೊಂಡು “ನಿಮ್ಮೂರು ʼ ಹೆಸರಲ್ಲೊಂದು ಸಿನಿಮಾ ರೆಡಿ ಆಗಿದೆ. ದಾವಣಗೆರೆ ಮೂಲದ ರಾಜಶೇಖರ್ ಚಂದ್ರಶೇಖರ್ ಇದರ ನಿರ್ಮಾಪಕರು. ಹಠವಾದಿ ಕ್ರಿಯೇಷನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.
ವಿಜಯ್.ಎಸ್ ಈ ಚಿತ್ರದ ನಿರ್ದೇಶಕ. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ತಲಕಾಡು, ಹಾಸನ, ಸಕಲೇಶಪುರ ಹಾಗೂ ರಾಣಿಬೆನ್ನೂರು ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿಜಯ್ ಎಸ್. ಅವರ ಪ್ರಕಾರ ಇದೊಂದು ಹಳ್ಳಿ ಸೊಗಡಿನ ಕತೆ. ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕತೆಯ ಹೈಲೈಟ್ಸ್ ಅಂತೆ.
” ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯ ಪ್ರಜ್ನೆ ಹೇಗಿರುತ್ತೆ ಎನ್ನುವುದು ಚಿತ್ರದ ಪ್ರಮುಖ ಅಂಶ. ಜತೆಗೆ ಒಂದು ಉತ್ತಮ ಸಂದೇಶ ಚಿತ್ರದಲ್ಲಿದೆ. ಅಲ್ಲದೇ ಗ್ರಾಮೀಣ ಭಾಗದ ಜನರಿಗೆ ಇದು ತಿಳಿದುಕೊಳ್ಳಲೇಬೇಕಾದ ಸಂದೇಶʼ ಎನ್ನುತ್ತಾರೆ ನಿರ್ದೇಶಕ ವಿಜಯ್. ಸದ್ಯಕ್ಕೀಗ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ. ಹಾಗೆಯೇ ಚಿತ್ರದ ಫಸ್ಟ್ ಕಾಪಿ ಹೊರ ಬಂದಿದೆ. ಹಾಗೆಯೇ ಚಿತ್ರವನ್ನು ಶೀಘ್ರವೇ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ.
ಚಿತ್ರದ ತಾರಾಗಣದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇದ್ಧಾರೆ. ಲಕ್ಕಿರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಮ್, ಸಿದ್ದು ಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ, ಶ್ರೀಕಾಂತ್ ಹೊನ್ನವಳ್ಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಹಾಗೆಯೇ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಮಧು ಸುದಂಡಿ ಸಂಗೀತ ಸಂಯೋಜನೆ, ಹನುರಾಜ್ ಮಧುಗಿರಿ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸವಿದೆ.