ಕಲರ್‌ಫುಲ್‌ ಫೀಲ್ಡ್‌ಗೆ ಮತ್ತೆ ಬಂದ ಬಿಂದು – ಬಾಲನಟಿಯಿಂದ ನಾಯಕಿಯವರೆಗೆ

ನಮ್ಮ ಸಂಸ್ಕೃತಿ ಬಿಂಬಿಸುವ ಪಾತ್ರಕ್ಕೆ ಬಿಂದುಶ್ರೀ ಹುಡುಕಾಟ

ಈ ಬಣ್ಣದ ಲೋಕದ ಸೆಳೆತವೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಮತ್ತೆ ಮತ್ತೆ ಬಣ್ಣ ಹಚ್ಚಲೇಬೇಕೆನಿಸುವುದು ಸಹಜ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಮಿಂದೆದ್ದಿದ್ದಾರೆ. ಆ ಸಾಲಿಗೆ ಬಿಂದುಶ್ರೀ ಎಂಬ ನವನಟಿ ಕೂಡ ಈಗ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೌದು, ಬಿಂದುಶ್ರೀ ಚನ್ನಗಿರಿ ಮೂಲದ ಹುಡುಗಿ. ಈ ಹುಡುಗಿಗೆ ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”,”ಶಿವಪ್ಪ ನಾಯಕ”,”ಪ್ರೀತ್ಸೋದ್‌ ತಪ್ಪಾ” ಸೇರಿದಂತೆ ಈವರೆಗೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಇವರ ಪ್ರಯಣ ಸಾಗಿದೆ. “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ನಟನೆ ಜೊತೆಗೆ ಓದು ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್‌ ಎಂಜಿನಿಯರ್.‌ ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ‍್ಯಾಂಕ್.

ಪ್ರತಿಷ್ಠಿತ ಕಂಪೆನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತಾಯಿ ಶಾಸ್ತ್ರೀಯ ಸಂಗೀತ ಕಲಿತವರ. ವೃತ್ತಿಪರ ಗಾಯಕಿಯೇನಲ್ಲ. ಆದರೆ, ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ಮರಳಲು ರೆಡಿಯಾಗಿದ್ದಾರೆ.  ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್‌ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ಕೆಲಸ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಮಾತ್ರ ಮಾಡುತ್ತೇನೆ. ವಿನಾಕಾರಣ ಬೇರೆ ರೀತಿಯ ಪಾತ್ರ ಮಾಡಲಾರೆ” ಎಂಬುದು ಬಿಂಬಶ್ರೀ ಮಾತು.
ಇತ್ತೀಚೆಗೆ ಬಿಂದುಶ್ರೀ ಅಭಿನಯದ “ಮಹಿಷಾಸುರ” ಚಿತ್ರ ರಿಲೀಸ್‌ ಆಗಿತ್ತು. ಈ ಚಿತ್ರದಲ್ಲಿ ಬಿಂದುಶ್ರೀ ನಟಿಸಿದ್ದಾರೆ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಷ್ಟರಲ್ಲೇ ಬಿಡುಗಡೆಯಾಗಲಿದೆ. “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಬಿಂದುಶ್ರೀ ಮೂರು ಕಥೆ ಗಳನ್ನು ಕೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಬಿಂದಶ್ರೀ. ಅದೇನೆ ಇರಲಿ, ಕೈತುಂಬ ಸಂಬಳ ಸಿಗುವ ಕೆಲಸಕ್ಕೆ ಗುಡ್‌ಬೈ ಹೇಳಿ, ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಬಿಂದುಶ್ರೀ ಅವರಿಗೆ ಹೆಮ್ಮೆ ಇದೆ. ಟ್ರೆಡಿಷನಲ್‌ ಪಾತ್ರ ನನಗಿಷ್ಟ. ಅಪ್ಪನಿಗೂ ಅಂಥದ್ದೇ ಪಾತ್ರ ಮಾಡಬೇಕು ಎಂಬ ಬಯಕೆ. ಆ ಕುರಿತು ಸಲಹೆ, ಸೂಚನೆಯನ್ನೂ ನೀಡಿದ್ದಾರೆ. ಸದ್ಯ ನಾನು ನಾಯಕಿ ಆಗಿರವುದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ. ಸದ್ಯ ಇಬ್ಬರು ತಂಗಿಯರಿಗೆ ಅಭಿನಯದಲ್ಲಿ ಆಸಕ್ತಿ ಇಲ್ಲ. ಅಂದು ರವಿಚಂದ್ರನ್, ಸೌಂದರ್ಯ ಅವರಿಗೆ ಅಭಿಮಾನಿಯಾಗಿದ್ದ ಬಿಂದುಶ್ರೀ, ಇಂದು ರಾಧಿಕಾಪಂಡಿತ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಅದೇನೆ ಇರಲಿ, ಪಕ್ಕಾ ಕನ್ನಡದ ಹುಡುಗಿಯಾಗಿರುವ ಬಿಂದುಶ್ರೀ ಇದೀಗ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ.

Related Posts

error: Content is protected !!