ಕನ್ನಡ ಅಂದ್ರೆ ಬರೀ ಭಾಷೆ ಯಲ್ಲ, ಹೆಸರು !
ಕಲರ್ಸ್ ಕನ್ನಡದ “ಅನುಬಂಧ ಅವಾರ್ಡ್ಸ್ʼ 2020 ಕಾರ್ಯಕ್ರಮ ಕನ್ನಡ ಕಿರುತೆರೆಯ ಇತಿಹಾಸಕ್ಕೆ ಒಂದು ದಾಖಲೆ. ಕನ್ನಡದ ಅಷ್ಟು ಮನರಂಜನಾ ವಾಹಿನಿಗಳ ಅವಾರ್ಡ್ಸ್ ಕಾರ್ಯಕ್ರಮಗಳಲ್ಲಿ ಇದೊಂದು ವಿಭಿನ್ನ, ವಿಶೇಷ.
ಅದಕ್ಕೆ ಕಾರಣವಾಗಿದ್ದು ಕನ್ನಡತಿಯಲ್ಲಿ ಕಂಡ ಕಂದ. ಅದು ಕಿರುತೆರೆಗೆ ಮೂಡಿಸಿತು ಅಂದ .ಕಲರ್ಸ್ ಕನ್ನಡದಲ್ಲೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಕನ್ನಡತಿ ಧಾರಾವಾಹಿ. ಕತೆಯ ಆಚೆ, ಇದು ಕನ್ನಡದ ಭಾಷೆಯ ಜತೆಗೆ ಬೆಸೆದುಕೊಂಡ ಭಾವನಾತ್ಮಕ ಸಂಬಂಧವೇ ಅದರ ಯಶಸ್ಸಿನ ಗುಟ್ಟು.
ಶಾಲಾ ಉಪನ್ಯಾಸಕಿಯಾದ ಧಾರಾವಾಹಿಯ ಕಥಾ ನಾಯಕಿ, ತನ್ನ ಬದುಕಿನ ಕತೆ ಹೇಳುವುದರ ಜತೆಗೆ ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾ ಸಾಗುತ್ತಾಳೆ. ತನ್ನ ಪ್ರೀತಿ ವಿದ್ಯಾರ್ಥಿಗಳಿಗೆ ಕನ್ನಡದ ಹೊಸ ಹೊಸ ಪದಗಳನ್ನು ಪರಿಚಯಿಸುತ್ತಾಳೆ. ವೀಕ್ಷಕ ಸಮೂಹದಲ್ಲಿ ಇದು ಕನ್ನಡದ ಜತೆಗಿನ ಭಾವನಾತ್ಮಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರೇರಣೆ ನೀಡಿದೆ.ಗಡಿ ಭಾಗದಲ್ಲಂತೂ ಕನ್ನಡತಿ ಧಾರಾವಾಹಿ ಅಂದ್ರೆ ಜನರು ಕನ್ನಡವೇ ಎಂಬಂತೆ ಪ್ರೀತಿಸುತ್ತಾರಂತೆ. ಇದು ಅಲ್ಲಿನ ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಹುಟ್ಟುವಂತೆ ಮಾಡಿದೆ. ಅದರ ಪ್ರಭಾವ ಈಗ ಅಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಅಥವಾ ಕನ್ನಡತಿ ಎಂಬುದಾಗಿ ನಾಮಕರಣ ಮಾಡಲು ಸ್ಪೂರ್ತಿ ನೀಡಿದೆ ಎನ್ನುವುದನ್ನು ಅಚ್ಚರಿ ಎನಿಸಿದರೂ ನಂಬಲೇಬೇಕು. ಯಾಕಂದ್ರೆ ಸಾಕ್ಷಿ ಕಣ್ಣೆದುರೇ ಇದೆ. ಅದನ್ನೇ ವೇದಿಕೆಗೆ ತಂದು ತೋರಿಸಿದ್ದು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ.
ಕಲರ್ಸ್ ಕನ್ನಡದ “ಅನುಬಂಧ ಅವಾರ್ಡ್ಸ್ʼ ೨೦೨೦ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಎರಡು ದಿನ ಕಳೆದಿದೆ. ಭಾನುವಾರ(ಜ.17) ಕ್ಕೆ ಸಮಾರೋಪ ಸಮಾರಂಭ. ಕೊರೋನಾ ಕಾರಣಕ್ಕೆ ಅನೇಕ ನಿರ್ಬಂಧಗಳ ನಡುವೆ ನಡೆಯುತ್ತಿದ್ದರೂ, ಆದರ ತಾರಾ ಮೆರಗಿಗೇನು ಕಮ್ಮಿ ಆಗಿಲ್ಲ. ಕಲರ್ಸ್ ಕನ್ನಡದ ಅಷ್ಟು ಕುಟುಂಬವೇ ಜಮಾಯಿಸಿಕೊಂಡಿದ್ದನ್ನು ನೀವು ನೋಡಿದ್ದೀರಿ. ಎಂದಿನಂತೆ ಈ ವರ್ಷ ಕೂಡ ಅದು ಅನೇಕ ವಿಶೇಷತೆಗಳ ಮೂಲಕ ನಡೆಯುತ್ತಿದೆ. ಬಿಗ್ ಬಾಸ್ ನಿರೂಪಕರಾಗಿದ್ದರೂ , ಇದುವರೆಗೂ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಾರದೆ ಇದ್ದ ನಟ ಕಿಚ್ಚ ಸುದೀಪ್ ಇದೇ ಮೊದಲು ಈ ವೇದಿಕೆಗೆ ಬಂದಿದ್ದಾರೆ. ಹಾಗೆಯೇ ನಾದ ಬ್ರಹ್ಮ ಹಂಸಲೇಕ ಹಾಜಾರಾಗಿದ್ದಾರೆ. ಲವ್ ಮಾಕ್ಟೆಲ್ ಖ್ಯಾತಿಯ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಬಂದಿದ್ದಾರೆ. ಅವರೆಲ್ಲರ ಜತೆಗೆ ಕರ್ಲಸ್ ಕನ್ನಡದ ಬಳಗ ಇದೇ ಅಂದ್ರೆ ಮನರಂಜನೆ ಇರಲ್ವಾ? ಅದಕ್ಕೇನು ಇಲ್ಲಿಕೊರತೆ ಇಲ್ಲ. ಅದರೊಳಗಡೆಯೇ ನಡೆದಿದೆ ನಾಮಕರಣದ ವಿಶೇಷ.
ಶುಕ್ರವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಇದೊಂದು ಅಚ್ಚರಿ ನಡೆದು ಹೋಯಿತು. ಗಡಿ ಜಿಲ್ಲೆ ಬೆಳಗಾವಿಯ ಅಥಣಿಯಿಂದ ಬಂದಿದ್ದ ಒಂದು ದಂಪತಿ ವೇದಿಕೆ ಮೇಲಿದ್ದರು. ಅವರು ಕನ್ನಡತಿ ಧಾರಾವಾಹಿಯ ಶುದ್ಧ ಅಭಿಮಾನಿಗಳು. ಅವರ ಡಿಮ್ಯಾಂಡ್ ಅಂದ್ರೆ, ತಮ್ಮ ಹಸುಗೂಸಿಗೆ ಇದೇ ವೇದಿಕೆಯಲ್ಲಿ ಕನ್ನಡ ಅಂತ ನಾಮಕರಣ ಮಾಡಬೇಕು ಎನ್ನುವುದು. ನಿಜಕ್ಕೂ ಇದೊಂದು ವಿಶೇಷ ಕಾರ್ಯಕ್ರಮ. ಕನ್ನಡದ ಭಾಷಾ ವಿಚಾರದಲ್ಲಿ ಚಿರಕಾಲ ನೆನಪಾಗಿ ಉಳಿಯುವಂತಹದು.ಆ ಪೋಷಕರ ಇಚ್ಚಾಶಕ್ತಿಯಂತೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲೇ ನಾಮಕರಣ ಕಾರ್ಯಕ್ರಮ ಆಯೋಜಿಸಿತ್ತು. ನಾಮಕರಣಕ್ಕೆ ನಾದಬ್ರಹ್ಮ ಹಂಸಲೇಖ ಮುಖ್ಯ ಅತಿಥಿ. ಅವರ ಜತೆಗೆ ಪಂಡಿತರಾದ ಹಿರೇಮಗಳೂರು ಕಣ್ಣನ್. ಪುಟ್ಟ ಮಗುವಿಗೆ ನಾದಬ್ರಹ್ಮ ಹಂಸಲೇಖ ಅವರು ಕನ್ನಡ ಅಂತ ನಾಮಕರಣ ಮಾಡಿದರು. ಭಾವುಕರಾಗಿ ಮಾತನಾಡುತ್ತಾ, ಇದು ನಮ್ಮನ್ನು ಆಳುವವರಿಗೆ ಇದು ಗೊತ್ತಾಗಬೇಕು. ಕನ್ನಡ ಅಂದ್ರೆ ಬರೀ ಮಾತು ಅಲ್ಲ ಬದುಕು ಅಂತ ಅವರಗೆ ತಿಳಿಯಬೇಕು ಅಂತ ಸೂಚ್ಯವಾಗಿ ಚುಚ್ಚಿದರು. ಇದು ಸಾಧ್ಯವಾಗಿದ್ದು ಒಂದು ಧಾರಾವಾಹಿ ಮೂಲಕ. ಕನ್ನಡ ಕಿರುತೆರೆಗೆ ಇದೊಂದು ದಾಖಲೆ. ಹಾಗೆಯೇ ಇದು ಕಲರ್ಸ್ ಕನ್ನಡದ ಹೆಗ್ಗಳಿಕೆ.