ಆ ” ಹೀರೋ ʼ ಕುರಿತು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೀಗೆ ಹೇಳಿದ್ದರ ಹಿಂದಿನ ಕತೆಯೇ ರೋಚಕ…!!!.
ವಿಷಯಕ್ಕೆ ಬರೋಣ, ರಿಷಬ್ ಶೆಟ್ಟಿ ಹೇಳಿದ ಈ ಕತೆ ಯಾವುದಕ್ಕೆ ಸಂಬಂಧಿಸಿದ್ದು? ಎಲ್ಲೋ ಹೋಗಿ ಲಾಕ್ ಆಗಿ ಅನುಭವಿಸಿದ ಹಾರರ್ ಕತೆಯಾ ಅಥವಾ ನಕ್ಸಲೈಟೋ, ಇಲ್ಲವೇ ಯಾವುದಾದ್ರೂ ದರೋಡೆ ಗ್ಯಾಂಗ್ನವರ ಕೈಗೆ ಸಿಲುಕಿ, ತಪ್ಪಿಸಿಕೊಂಡು ಬಂದಿದ್ದರ ರಾಬಿನ್ ಹುಡ್ ಥರದ ಸ್ಟೋರಿಯಾ ? ಅಸಲಿಗೆ, ಈ ಕತೆ ಅದ್ಯಾವುದಕ್ಕೂ ಲಿಂಕ್ ಆಗಿದ್ದಲ್ಲ. ಬದಲಿಗೆ ಇದು ಅವರ ” ಹೀರೋʼ ಸಿನಿಮಾದ ಚಿತ್ರೀಕರಣಕ್ಕೆ ಸಂಬಂಧಿಸಿದ್ದು. ರಿಷಬ್ ಶೆಟ್ಟಿ ಫಿಲಂಸ್ ಮೂಲಕ ಭರತ್ ರಾಜ್ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ನಾಯಕರಾಗಿ ಅಭಿನಯಿಸಿರುವ ʼಹೀರೋʼ ಚಿತ್ರ ಈಗ ಚಿತ್ರೀಕರಣ ಮುಗಿಸಿ, ರಿಲೀಸ್ಗೆ ರೆಡಿ ಆಗಿದೆ. ನಾಳೆ( ಜ.14) ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ಮೊದಲ ಅಫೀಷಿಯಲ್ ಟ್ರೈಲರ್, ಯುಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗುತ್ತಿದೆ. ಸಹಜವಾಗಿಯೇ ಅದರ ಬಗ್ಗೆ ದೊಡ್ಡ ನಿರೀಕ್ಷೆಯೂ ಇದೆ.
ಕಾರಣ ಇಷ್ಟೇ, “ಬೆಲ್ ಬಾಟಮ್ʼ ಚಿತ್ರದ ಬಹುದೊಡ್ಡ ಸಕ್ಸಸ್ ನಂತರ ರಿಷಬ್ ಶೆಟ್ಟಿ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು. ಹಾಗೆಯೇ ನಿರ್ಮಾಪಕರಾಗಿ ” ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ ಚಿತ್ರದ ಮೂಲಕ ಕಂಡ ಬಹುದೊಡ್ಡ ಗೆಲುವಿನ ನಂತರ ನಿರ್ಮಾಣ ಮಾಡಿದ ಚಿತ್ರ ʼಹೀರೋʼ. ವಿಶೇಷ ಅಂದ್ರೆ ಈ ಚಿತ್ರ ಶುರುವಾಗಿದ್ದೂ, ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೂ ಎರಡು ಚಿತ್ರ ತಂಡಕ್ಕೆ ಗೊತ್ತೇ ಆಗಿಲ್ಲವಂತೆ. ಅಂದ್ರೆ, ಶುರುವಾಗಿದ್ದಷ್ಟೇ ಬೇಗ, ಚಿತ್ರೀಕರಣವೂ ಮುಗಿದಿದೆಯಂತೆ. ಅದರಲ್ಲೂ ಲಾಕ್ ಡೌನ್ ಸಮಯದಲ್ಲೇ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾದರೂ, ಆ ಸಿನಿಮಾಗಳ ಚಿತ್ರೀಕರಣದ ಹಾಗೆ ಸೆಟ್ನಲ್ಲೂ ಇರುವಷ್ಟು ಜನರೇ ಇಲ್ಲದೆ, ಕೇವಲ ೨೪ ಜನ ಸೆಟ್ನಲ್ಲಿದ್ದು ನಿಗದಿತ ಸಮಯದಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದು, ರಿಷಬ್ ಶೆಟ್ಟಿ ಸಿನಿ ಜರ್ನಿಯಲ್ಲೇ ಇದು ಫಸ್ಟ್ ಅಂತೆ. ಟ್ರೈಲರ್ ಲಾಂಚ್ ಹಿನ್ನೆಲೆಯಲ್ಲಿ ಜ. 13 ರಂದು ಬುಧವಾರ ಚಿತ್ರ ತಂಡದೊಂದಿಗೆ ಮಾಧ್ಯಮದ ಮುಂದೆ ಬಂದಿದ್ದ ನಟ, ನಿರ್ದೇಶಕ ಕಮ್ ನಿರ್ಮಾಪಕ ರಿಷಬ್ ಶೆಟ್ಟಿ, ʼಹೀರೋʼ ಚಿತ್ರೀಕರಣದ ಆ ರೋಚಕ ಸಂಗತಿಗಳನ್ನು ತೆರೆದಿಟ್ಟರು.
” ಈ ಚಿತ್ರದ ಆಗಿದ್ದೇ ಲಾಕ್ ಡೌನ್ ಸಮಯದಲ್ಲಿ. ಲಾಕ್ಡೌನ್ ಇದೆ ಅಂತ ಊರಿಗೆ ಹೋದಾಗ ಎರಡು ತಿಂಗಳು ಕೆಲಸ ಇಲ್ದೆ ಒದ್ದಾಡಿ ಬಿಟ್ಟೆ. ಏನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತೆನಿಸಿತು. ಹಾಗಾಗಿ ಅಲ್ಲಿಂದ ಮಿಸೆಸ್ ಕರ್ಕೊಂಡು ಬೆಂಗಳೂರಿಗೆ ಬಂದು ಬಿಟ್ಟೆ. ಬಂದ್ಮೇಲೆ ಒಂದಷ್ಟು ಗೆಳೆಯರನ್ನು ಅವರಿದ್ದ ಜಾಗಗಳಿಂದಲೇ ಫೋನ್ ಮೂಲಕ ಸಂಪರ್ಕಿಸಿ, ಈ ಸಿನಿಮಾದ ಬಗ್ಗೆ ಹೇಳಿದೆ. ಆಗಲೇ ನಿರ್ದೇಶಕ ಭರತ್ ರಾಜ್ ಕತೆ ಬರೆದಿದ್ರು. ಉಳಿದಂತೆ ಸ್ಕ್ರಿಫ್ಟ್ ವರ್ಕ್ ತುಂಬಾನೆ ಅರ್ಜೆಂಟ್ ಆಗಿ ನಡೆದು ಹೋದವು. ಕಲಾವಿದರು ಬೇಕಲ್ವಾ ಅಂತ ಯೋಚಿಸುತ್ತಿದ್ದಾಗ, ಯಾರೆಲ್ಲ ಕೆಲಸ ಇಲ್ದೆ ಮನೆಯಲ್ಲೇ ಕುಳಿತಿದ್ದಾರೋ ಅವರನ್ನೇ ಆಯ್ಕೆ ಮಾಡ್ಕೊಳೋಣ ಅಂತ ಡಿಸೈಡ್ ಮಾಡಿದೆವು. ಜತೆಗೆ ಅವರ ಸೇಫ್ಟಿ ಬಗ್ಗೆಯೋ ಅಷ್ಟೇ ಕೇರ್ ವಹಿಸಿದೆವು, ಶೂಟಿಂಗ್ ಮುಗಿಯೋ ತನಕ ಮನೆಗೆ ಬರೋ ಹಾಗಿಲ್ಲ ಅಂತ ಸೂಚನೆ ಕೊಟ್ಟೆವು. ಅದಕ್ಕೆ ತಕ್ಕಂತೆ ಲೊಕೇಷನ್ ಹಂಟಿಂಗ್ ಶುರುವಾಯ್ತು. ನಿರ್ಜನವಾದ 200 ಎಕರೆ ಪ್ರದೇಶದ ಒಂದು ಕಾಫಿ ಎಸ್ಟೇಟ್ ಸಿಕ್ಕಿತು. ಕಲಾವಿದರು, ತಾಂತ್ರಿಕ ವರ್ಗದವರು ಸೇರಿ ೨೪ ಜನರ ತಂಡದೊಂದಿಗೆ ಅಲ್ಲಿಗೆ ಹೋದೆವು. ಅಲ್ಲಿಗೆ ಹೋದ ನಂತರ ಆದ ಅನುಭವೇ ಅದ್ಭುತʼ ಎನ್ನುತ್ತಾ ಮುಂದೆ ಹೇಳಲಿದ್ದ ತಮ್ಮ ಅನುಭವದ ಕತೆಗೆ ಮತ್ತಷ್ಟು ಕುತೂಹಲದ ಟ್ವಿಸ್ಟ್ ಕೊಟ್ಟರು ನಟ ರಿಷಬ್ ಶೆಟ್ಟಿ.
ಲಾಕ್ ಡೌನ್ ಸಮಯದಲ್ಲಿ ಅನೇಕರಿಗೆ ಹತ್ತಾರು ರೀತಿಯ ಅನುಭವ ಆಗಿವೆ. ಪ್ರತಿಯೊಬ್ಬರದು ಒಂದೊಂದು ಬಗೆ. ಒಬ್ಬ ಸಿನಿಮಾ ಮೇಕರ್ ಆಗಿ ರಿಷಬ್ ಕಂಡಿದ್ದು ಕೂಡ ಒಂದು ಸಿನಿಮ್ಯಾಟಿಕ್ ಅನುಭವವೇ. ಅದನ್ನವರು ಹೀಗೆ ವಿವರಿಸುತ್ತಾರೆ..” ಕತೆಯಲ್ಲಿ ಅಶೋಕ ವನದ ಸನ್ನಿವೇಶ ಇದೆ. ಅದಕ್ಕೆ ತಕ್ಕಂತೆಯೇ ಇರಲಿ ಅಂತ ನಾವು ಊರ ಹೊರಗಿನ ಆ ಎಸ್ಟೇಟ್ ಹುಡುಕಿಕೊಂಡಿದ್ದೆವು. ಊರಿನಿಂದ ಅದು ತುಂಬಾ ದೂರ ಅದು. ಏನಾದ್ರೂ ಬೇಕಿದ್ದರೆ, ಸಿಟಿ ಗೆ ಹೋಗಿ ಬರೋದಿಕ್ಕೆ ಒಂದಿನ ಬೇಕಿತ್ತು. ಹಾಗಾಗಿ ನಾವು ಮತ್ತೆ ಸಿಟಿಗೆ ಹೋಗಿ ಬರುವ ತಾಪತ್ರಯಗಳನ್ನು ದೂರ ವಿಟ್ಟು, ವಾಸ್ತವ್ಯ, ಅಡುಗೆ-ಉಡುಗೆಯ ಸರಕು ಸರಂಜಾಮುಗಳ ಸಮೇತ ಅಲ್ಲಿಗೆ ಹೋಗಿದ್ದೆವು. ತಂಡದ ಹಿರಿಕರು, ಅನುಭವಿಗಳು ಆದ ಪ್ರಮೋದ್ ಶೆಟ್ಟಿ ಹಾಗೂ ನಟ ಮಂಜುನಾಥ್ ಗೌಡ ಒಂದೇ ದಿನದಲ್ಲಿ ಸೆಟ್ ಪ್ರಾಪರ್ಟಿ ತಂದುಕೊಟ್ಟರು. ಸುಹಾಸ್ ಅಡುಗೆ ನೋಡಿಕೊಂಡರು. ಕೇವಲ ೨೪ ಜನ ಮಾತ್ರ ನಾವಲ್ಲಿದ್ದೆವು. ಕಲಾವಿದರಾಗಿ ಕ್ಯಾಮೆರಾ ಎದುರಿಸಿದವರೇ, ಸೆಟ್ ಬಾಯ್ ಆಗಿ ಕೆಲಸ ಮಾಡಿದರು. ಬಹುಶಃ, ಒಂದು ಕಮರ್ಷಿಯಲ್ ಸಿನಿಮಾಕ್ಕೆ ಇಷ್ಟು ಕಡಿಮೆ ಜನ ಇಟ್ಕೊಂಡು ಚಿತ್ರೀಕರಣ ಮಾಡಿದ್ದು ಇದೇ ಮೊದಲಿರಬೇಕು. ನನ್ನ ಸಿನಿ ಜರ್ನಿಗೆ ಇದೇ ಮೊದಲು. ಲೈಫ್ ನಲ್ಲಿ ಅಂತಹ ಅನುಭವ ಕಂಡೇ ಇರಲಿಲ್ಲ. ಸಿನಿಮಾದಲ್ಲಿ ರಕ್ತ ಇದೆ, ಹಾಗೆಯೇ ಅದರ ಚಿತ್ರೀಕರಣಕ್ಕೂ ಕೆಲವರು ರಕ್ತ ಹರಿಸಿದ್ದಾರೆ. ನಿದ್ದೆ – ನೀರಡಿಕೆ ಬಿಟ್ಟು ಚಿತ್ರೀಕರಣ ಮಾಡಿದ್ದೇವೆ. ಮಜಾ ಮಾಡ್ಲಿಕ್ಕೆ ಬಂದಿದ್ದೇವೆ ಅಂತ ಯಾರಿಗೂ ಎನಿಸಲಿಲ್ಲ. ಅದೆಲ್ಲದರ ಪ್ರತಿಫಲವೇ ʼಹೀರೋʼ. ಅಂತ ಅದರ ಚಿತ್ರೀಕರಣದ ಅನುಭವ ಹೇಳಿಕೊಂಡರು ರಿಷಬ್ ಶೆಟ್ಟಿ.
ಅಂದ ಹಾಗೆ, ರಿಲೀಸ್ ಗೆ ರೆಡಿಯಾಗಿರುವ ಹೀರೋ ಸಿನಿಮಾ ಅತೀ ಶೀಘ್ರದಲ್ಲೇ ತೆರೆಗೆ ಬರಲಿರುವುದು ಗ್ಯಾರಂಟಿ ಅಂತೆ.