ಇದು ಪ್ರಜ್ವಲ್ ಸಿನಿಮಾ ಅಲ್ಲ, ಹೊಸಬರ ಟೆಲಿ ಮೂವೀ…
ವೀರಂʼ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಅದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ. ಅದಿನ್ನು ಚಿತ್ರೀಕರಣದ ಹಂತದಲ್ಲಿದೆ. ಈ ನಡುವೆಯೇ ಸ್ಯಾಂಡಲ್ವುಡ್ ನಲ್ಲೊಂದು ಅದೇ ಹೆಸರಲ್ಲೊಂದು ಮತ್ತೊಂದು ಸಿನಿಮಾ ಬರುತ್ತಿದೆ. ಈಗ ಅದರ ಟ್ರೈಲರ್ ಲಾಂಚ್ ಆಗಿದೆ.
ಅರೆ, ಒಂದೇ ಹೆಸರಿನ ಎರಡು ಸಿನಿಮಾವೇ? ಅದು ಸಿನಿಮಾ, ಇದು ಟೆಲಿ ಸಿನಿಮಾ. ಹೌದು, ಬಳ್ಳಾರಿ ಮೂಲದ ಯುವಕರ ಒಂದು ಗಂಪು “ವೀರಂʼ ಹೆಸರಲ್ಲೊಂದು ಟೆಲಿ ಸಿನಿಮಾ ಮಾಡಿದೆ. ಸುಮಾರು 1 ಗಂಟೆಯಷ್ಟು ಅವದಿಯ ಟೆಲಿ ಚಿತ್ರ ಇದು.ಯಾವುದೇ ಬಿಗ್ ಬಜೆಟ್ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ. ಸದ್ಯಕ್ಕೆ ಅದರ ಅದ್ದೂರಿ ಮೇಕಿಂಗ್ ಗೆ ಒಂದು ಸ್ಯಾಂಪಲ್ 1 ನಿಮಿಷ 46 ಸೆಕೆಂಡ್ ಗಳ ಟ್ರೈಲರ್.
ಇದು ಪಕ್ಕಾ ಮಾಸ್ ಸಿನಿಮಾ. ರೌಡಿಸಂನ ಶುದ್ಧ ರಾ ಲುಕ್ ಇಲ್ಲಿದೆ. ಇದರ ಹಿಂದೆ ಇದ್ದವರು ಬಳ್ಳಾರಿಯವರು ಅಂದ್ರೆ ಕೇಳಬೇಕೆ, ಅಲ್ಲಿನ ಗಣಿ ಧೂಳು ಹಾರುವಂತೆ ಖಡಕ್ ಡೈಲಾಗ್ ಪೊಣಿಸಿ, ಜಬರ್ದಸ್ತ್ ಆಗಿಯೇ ಟ್ರೈಲರ್ ಕಟ್ ಮಾಡಿಸಿದೆ ಚಿತ್ರ ತಂಡ. ರೌಡಿಸಂ, ಗೂಡಾಯಿಸಂ, ದಾದಾಗಿರಿ… ಎನ್ನುವ ಮೂರು ಪದಗಳ ಅರ್ಥ ಒಂದೆ, ನಾನು ಎನ್ನುವ ಸ್ವಾರ್ಥ, ಅಹಂ ಎನ್ನುವ ಖಡಕ್ ಡೈಲಾಗ್ ಮೂಲಕ ಟ್ರೈಲರ್ ನಲ್ಲಿ ಭರ್ಜರಿ ಅಬ್ಬರಿಸಿದ್ದಾರೆ ಚಿತ್ರದ ನಾಯಕ ಸುಭಾಸ್ ಚಂದ್ರ.
ಅಂದ ಹಾಗೆ, “ವೀರಂʼ ಟೆಲಿ ಚಿತ್ರದ ನಾಯಕ ಸುಭಾಷ್ ಚಂದ್ರ ಸೇರಿದಂತೆ ಇದರ ಸೃಷ್ಟಿಕರ್ತರೆಲ್ಲರೂ ಹೊಸಬರು. ಶಿವಚಂದ್ರ ಪ್ರೊಡಕ್ಷನ್ ಮೂಲಕ ನಿರ್ಮಾಣವಾದ ಈ ಟೆಲಿ ಚಿತ್ರಕ್ಕೆ ಶಿವ ಚಂದ್ರ ಹಾಗೂ ಭೀಮನಾಯ್ಕ ಬಂಡಾವಾಳ ಹೂಡಿದ್ದಾರೆ. ಲಕ್ಷ್ಮಣ್ ಕೇಸರಿ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರಾಗಿ ಇವರಿಗೆ ಇದು ಚೊಚ್ಚಲ ಚಿತ್ರ. ಹಾಗಂತ ಬಣ್ಣದ ಲೋಕ ಹೊಸದಲ್ಲ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರದು. ಈಗ ಅಲ್ಲಿಂದ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯಲು ಮುಂದಾಗಿದ್ದಾರೆ. ಅದೇ ಪ್ರಯತ್ನದಲ್ಲೀಗ ʼವೀರಂʼ ಹೆಸರಿನ ಟೆಲಿ ಚಿತ್ರ ನಿರ್ದೇಶಿಸಿ, ರಿಲೀಸ್ ಮಾಡಲು ರೆಡಿ ಆಗಿದ್ದಾರೆ. ಹಾಗಾದ್ರೆ, ಇದರಿಂದ ಅವರಿಗೇನು ಲಾಭ?
” ಕಿರು ಚಿತ್ರ ಅಥವಾ ಟೆಲಿ ಚಿತ್ರಗಳ ನಿರ್ಮಾಣ ಅನ್ನೋದು ಕನ್ನದ ಮಟ್ಟಿಗೆ ಈಗಲೂ ಆದಾಯದ ಮೂಲ ಆಗಿಲ್ಲ. ಸೋಷಲ್ ಮೀಡಿಯಾ ಬಲಿಷ್ಟ ಆದ ನಂತರ ಅಲ್ಲಿ ಇವು ತೆರೆ ಕಂಡರೆ ಲೈಕ್ಸ್ , ಕಾಮೆಂಟ್ ಆಧರಿಸಿ ಒಂದಷ್ಟು ಆದಾಯ ಬರುತ್ತೆ ಎನ್ನುವುದನ್ನು ಬಿಟ್ಟರೆ, ಬಹುತೇಕ ಈ ಪ್ರಯತ್ನಗಳೆಲ್ಲ ನಮ್ಮನ್ನು ನಾವು ಪ್ರದರ್ಶಿಸಿಕೊಳ್ಳುವುದಕ್ಕಾಗಿಯೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ಕೂಡ ಅಂತಹದೇ ಒಂದು ಪ್ರಯತ್ನವೇ ಹೌದು. ಲಾಕ್ ಡೌನ್ ಸಮಯದಲ್ಲಿ ನಾವೆಲ್ಲ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲಿದ್ದಾಗ, ಹೊಸತೇನಾದರೂ ಮಾಡೋಣ ಅಂತ ಯೋಚಿಸಿದೆವು. ಆಗ ಹೊಳೆದಿದ್ದು ವೀರಂ ಟೆಲಿ ಮೂವೀ. ಅವತ್ತು ನಾವು ಅಂದುಕೊಂಡಿದ್ದಕ್ಕಿಂತ ಈಗದು ತೆರೆ ಮೇಲೆ ಚೆನ್ನಾಗಿ ಬಂದಿದೆ. ಯಾವುದೇ ಬಿಗ್ ಬಜೆಟ್ ಸಿನಿಮಾಕ್ಕೂ ಕಮ್ಮಿ ಇಲ್ಲದಂತೆ ಮೂಡಿ ಬಂದಿದೆ ಅಂತ ಟ್ರೈಲರ್ ನೋಡಿದವರು ಹೇಳುತ್ತಿದ್ದಾರೆ. ಇದು ಖುಷಿ ತಂದಿದೆʼ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಣ್ ಕೇಸರಿ.
ಇದು ನಿಜವೂ ಹೌದು. ಟ್ರೈಲರ್ ನೋಡಿದವರಿಗೆ ಅವರ ನಿರ್ದೇಶನದ ಕೌಶಲ್ಯ ಗೊತ್ತಾಗುತ್ತದೆ. ಲಾಂಚ್ ಆಗಿ ಮೂರ್ನಾಲ್ಕು ದಿನಗಳಲ್ಲಿ ಸೋಷಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ. ವಿಶೇಷ ಅಂದ್ರೆ ಇಷ್ಟು ಗುಣಮಟ್ಟದ ಒಂದು ಟೆಲಿ ಮೂವೀ , ಕೇವಲ ಒಂದು ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಅಂದ್ರೆ ನಿಮಗೂ ಅಚ್ಚರಿ ಆಗಬಹುದು. ಏಳು ದಿನಗಳ ಕಾಲ ಚಿತ್ರೀಕರಣ ನಡೆದಿದೆಯಂತೆ. ತಾರಾಗಣದಲ್ಲಿ ಸುಭಾಷ್ ಚಂದ್ರ ಅವರೊಂದಿಗೆ ವರುಣ್ ವರಧಿ, ಮನೋಹರ್, ಶ್ರೀ ನಿಧಿ, ಟ್ಯಾಟು ಮಂಜು, ಪುರುಷೋತ್ತಮ್ ಸೇರಿದಂತೆ ದೊಡ್ಡ ದಂಡೇ ಇದೆ. ಹಾಗೆಯೇ ನುರಿತ ತಾಂತ್ರಿಕ ವರ್ಗವೇ ಇಲ್ಲಿ ಸಾಥ್ ನೀಡಿದೆ. ನವೀನ್ ನಾಯ್ಡು ಛಾಯಾಗ್ರಹಣ ಮಾಡಿದ್ದರೆ, ಸಾಯಿ ವಂಶಿ ಸಂಗೀತ, ವಿನೋದ್ ಸಂಕಲನ ಮಾಡಿದ್ದು, ರಾ ಲುಕ್ ಗೆ ಹೆಚ್ಚು ಆದ್ಯತೆ ನೀಡಿದೆ. ಇಷ್ಟರಲ್ಲೇ ಇದನ್ನು ಯುಟ್ಯೂಬ್ ಮೂಲಕ ಲಾಂಚ್ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆಯಂತೆ. ಸಿನಿಮಾದತ್ತ ಮುಖ ಮಾಡಿರುವ ಹೊಸಬರ ತಂಡಕ್ಕೆ ಒಳ್ಳೆಯದಾಗಲಿ.