ಟಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬಳು ಕನ್ನಡತಿ,’ ಭರಾಟೆ’ ಬೆಡಗಿ ಶ್ರೀಲೀಲಾಗೆ ಸಿಕ್ತು ಬಂಪರ್‌ ಆಫರ್‌!

“ಪೆಳ್ಳಿ ಸಂದಡಿ’ಯಲ್ಲಿ ನಟ ಶ್ರೀಕಾಂತ್‌ ಪುತ್ರ ರೋಷನ್ ಗೆ ಜೋಡಿಯಾದ ʼಕಿಸ್‌ʼ ಖ್ಯಾತಿಯ ಸುಂದರಿ

ಟಾಲಿವುಡ್ ಅಂಗಳದಲ್ಲಿ ಕನ್ನಡದ ನಟಿಯರಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ‘ಕಿರಿಕ್ ಪಾರ್ಟಿ’ ಚಿತ್ರದ ಖ್ಯಾತಿಯ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಲ್ಲಿ ಮನೆ ಮಾತಾಗಿರುವ ಬೆನ್ನಲೇ ‘ವಜ್ರಕಾಯ’ ಚಿತ್ರದ ಖ್ಯಾತಿಯ ನಟಿ ನಭಾ ನಟೇಶ್ ಕೂಡ ಅಲ್ಲಿ ಕನ್ನಡದ ಬ್ಯುಸಿ ನಟಿ. ಈಗ ಆ ಸಾಲಿಗೆ ಹೊಸ ಸೇರ್ಪಡೆ ‘ಕಿಸ್’ ಖ್ಯಾತಿಯ ಚೆಲುವೆ ಶ್ರೀಲೀಲಾ. ಮೂಲತಃ ಕನ್ನಡದವರೇ ಆದ ಟಾಲಿವುಡ್ ನ ಹೆಸರಾಂತ ನಟ ಶ್ರೀಕಾಂತ್ ಪುತ್ರ ರೋಷನ್ ಅಭಿನಯದ ಹೊಸ ಚಿತ್ರಕ್ಕೆ ಶ್ರೀ ಲೀಲಾ ನಾಯಕಿ ಆಗಿ ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ಇದು ಶ್ರೀಲೀಲಾ ಆಭಿನಯದ ಚೊಚ್ಚಲ ಚಿತ್ರ. ಇದೇ ತಿಂಗಳು ಅದಕ್ಕೆ ಚಿತ್ರೀಕರಣ ಕೂಡ ಆರಂಭ.

‘ಪೆಳ್ಳಿ ಸಂದಡಿ’ ಎನ್ನುವುದು ಈ ಚಿತ್ರದ ಹೆಸರು. ರೋಷನ್ ಹಾಗೂ ಶ್ರೀಲೀಲಾ ಇಲ್ಲಿ ಜೋಡಿ. ಇದು ಶ್ರೀಕಾಂತ್ ಅಭಿನಯಿಸಿದ್ದ ಚಿತ್ರದ ಹೆಸರು ಕೂಡ. 1996 ರಲ್ಲಿ ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರ ತೆರೆಗೆ ಬಂದಿತ್ತು. ಆ ಕಾಲಕ್ಕೆ ಇದು ಸೂಪರ್ ಡೂಪರ್ ಹಿಟ್ ಚಿತ್ರ. ತೆಲುಗು ಚಿತ್ರರಂಗದಲ್ಲಿ ಶ್ರೀಕಾಂತ್ ದೊಡ್ಡ ಸ್ಟಾರ್ ಆಗಿ ಸಕ್ಸಸ್ ಕಂಡ ಸಿನಿಮಾ. ಅಲ್ಲಿಂದ ಅವರ ತಾರಾ ವರ್ಚಸ್ಸೇ ಬದಲಾಗಿದ್ದು ಇತಿಹಾಸ. ಅದೀಗ ಬಂದು ಹೋಗಿ ಇಲ್ಲಿಗೆ 25 ವರ್ಷ. ಅದೇ ಚಿತ್ರದ ಹೆಸರಲ್ಲಿ ಶ್ರೀಕಾಂತ್ ಪುತ್ರ ಕೂಡ ಅಭಿನಯಿಸುತ್ತಿದ್ದಾರೆ. ಅವರಿಗೆ ಇಲ್ಲಿ ಶ್ರೀಲೀಲಾ ನಾಯಕಿ ಎನ್ನುವುದು ವಿಶೇಷ.

 

” ಸುಮಾರು ಏಳು ತಿಂಗಳ ಹಿಂದೆ ಬಂದ ಆಫರ್ ಇದು. ಅಲ್ಲಿಂದ ಇದು ಮಾತುಕತೆ ಹಂತದಲ್ಲಿತ್ತು. ಕೊನೆಗೊಂದು ದಿನ ಕತೆ ಕೇಳಿ ಓಕೆ ಕೂಡ ಆಯಿತು. ಆದರೆ ಸಿನಿಮಾ ಶುರುವಾಗುವುದಕ್ಕೆ ಕೊರೋನಾ ಆತಂಕ ಇತ್ತಲ್ವಾ,, ಹಾಗಾಗಿ ಒಂದಷ್ಟು ತಡವಾಯಿತು. ಆದರೂ ಚಿತ್ರ ತಂಡ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿತ್ತು. ಈಗ ಎಲ್ಲವೂ ರೆಡಿ. ಇದೇ ತಿಂಗಳಿನಿಂದ ಚಿತ್ರೀಕರಣ ಶುರು. ಫಸ್ಟ್ ಟೈಮ್ ಟಾಲಿವುಡ್ ಗೆ ಎಂಟ್ರಿ ಆಗುತ್ತಿದ್ದೇನೆ. ಖುಷಿ ಆಗುತ್ತಿದೆ. ಹಾಗೆ ಒಂದ್ರೀತಿ ಭಯವೂ ಇದೆ. ಆದರೂ ಒಳ್ಳೆಯ ತಂಡ ಸಿಕ್ಕಿರೋದು ಖುಷಿ ತರಿಸಿದೆ’ ಎನ್ನುವ ಮೂಲಕ ಇದೇ ಮೊದಲು ಕನ್ನಡದಿಂದ ಟಾಲಿವುಡ್ ಗೆ ಹೋಗುತ್ತಿರುವ ಖುಷಿ ಹಂಚಿಕೊಳ್ಳುತ್ತಾರೆ ನಟಿ ಶ್ರೀಲೀಲಾ. ಸದ್ಯಕ್ಕೆ ಶ್ರೀಲೀಲಾ ಕನ್ನಡದಲ್ಲಿ ನಂದ್ ಕಿಶೋರ್ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

 

ಒಂದು ಸಿನಿಮಾದ ಸೆಟ್ ನಲ್ಲಿ ನಟ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದೆ. ಟಾಲಿವುಡ್ ಆಕ್ಟರ್ ಅಲ್ವಾ ಅಂತ ನಾನು ತೆಲುಗಿನಲ್ಲಿ ಮಾತನಾಡಲು ಹೋದ್ರೆ, ಅವರೇ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅವತ್ತಿನಿಂದ ಅವರೊಂದಿಗೆ ಮಾತನಾಡುವುದಕ್ಕೆ ಖುಷಿ ಎನಿಸಿತು. ಕಾಕಕಾಳೀಯ ಎನ್ನುವಂತೆ ಅವರ ಪುತ್ರನ ಸಿನಿಮಾಕ್ಕೆ ನಾಯಕಿ ಆಗುವ ಆಫರ್ ಬಂದಾಗ ನಂಗೆ ಶ್ರೀಕಾಂತ್ ಸರ್ ಜೊತೆ ಮಾತನಾಡಿದ್ದೆ ನೆನಪಾಯಿತು. ಹೈದ್ರಾಬಾದ್ ನಲ್ಲಿ ಅವರನ್ನು ಭೇಟಿಯಾದಾಗ ಅದೇ ಖುಷಿ ಹಂಚಿಕೊಂಡೆ. ಅವರು ಕೂಡ ತುಂಬಾ ಸಂತೋಷ ಪಟ್ಟರು.
-ಶ್ರೀಲೀಲಾ, ನಟಿ

ಶ್ರೀಕಾಂತ್ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರಕ್ಕೆ ತೆಲುಗಿನ ಹೆಸರಾಂತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಆಕ್ಷನ್ ಕಟ್ ಹೇಳಿದ್ದರು. ಅವರೇ ಕತೆ, ಚಿತ್ರಕತೆ ಬರೆದಿದ್ದರು. ಈಗ ಅದೇ ಹೆಸರಿನಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀಕಾಂತ್ ಪುತ್ರನ ಸಿನಿಮಾಕ್ಕೆ ಗೌರಿ ರಣಂಕಿ ಆಕ್ಷನ್ ಕಟ್ ಹೇಳುತ್ತಿದ್ದರೂ, ನಿರ್ದೇಶನದ ಉಸ್ತುವಾರಿ ಕೆ. ರಾಘವೇಂದ್ರ ರಾವ್ ಅವರೇ ವಹಿಸಿಕೊಂಡಿದ್ದಾರಂತೆ. ಪುತ್ರನಿಗೆ ದೊಡ್ಡ ಸಕ್ಸಸ್ ಕೊಡಿಸುವ ಕಾರಣಕ್ಕೆ ಶ್ರೀಕಾಂತ್ ಅವರೇ ರಾಘವೇಂದ್ರ ರಾವ್ ಅವರ ಮೊರೆ ಹೋಗಿದ್ದಾರಂತೆ. ಇನ್ನು ರೋಷನ್ ಗೆ ಇದು ಎರಡನೇ ಚಿತ್ರ. ಮೂರು ವರ್ಷಗಳ ಹಿಂದೆ ‘ನಿರ್ಮಲಾ ಕಾನ್ವೆಂಟ್’  ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಅದೇನು ಅಂತಹ ಸಕ್ಸಸ್ ಕಂಡಿರಲಿಲ್ಲ.

Related Posts

error: Content is protected !!