ಕನ್ನಡದ ನಕ್ಷತ್ರಗಳಿಗೆ ಈ ಸತ್ಯ ದರ್ಶನವಾಗಲಿ. ಚಂದನವನ ಬಾಯಿತೆರೆಯಲಿ- ಚಕ್ರವರ್ತಿ ಚಂದ್ರಚೂಡ್
ಒಟಿಟಿ ಮಾಫಿಯಾ ಕುರಿತು ಭಾನುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ದರ್ಶನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದು, ಮನುಷ್ಯರನ್ನ ಜಾತ್ರೆಗಳು ಹಬ್ಬಗಳು ಉತ್ಸವಗಳ ನಂತರ ದೇವರಷ್ಟೇ ಬಲವಾಗಿ ಒಗ್ಗೂಡಿಸಿ ಹೇಳಬೇಕಾದ್ದನ್ನ ಹೇಳಿದವುಗಳಲ್ಲಿ ರಂಗಭೂಮಿ ಮತ್ತು ಚಲನಚಿತ್ರಗಳು .ಅವು ಉಳಿಯಬೇಕು ಎಂದವರು ವಿನಂತಿಸಿಕೊಂಡಿದ್ದಾರೆ. ಅವರು ಹೇಳಿರುವ ಮಾತುಗಳು ಇಲ್ಲಿವೆ…
‘ ಕನ್ನಡದ ಖ್ಯಾತ ನಟರಾದ ದರ್ಶನ್ ತಮ್ಮ ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿರುವಾಗ ಒಟಿಟಿ ಮಾಫಿಯಾದ ವಿರುದ್ಧ,ಅದರ ಹಿಂದಿನ ಕಾರ್ಪೋರೇಟ್ ತಂತ್ರಗಾರಿಕೆಯ ವಿರುದ್ಧ ಮಾತನಾಡಿದ್ದಾರೆ.ಹಿಂದೆಯೂ ಕೂಡ ಹೀಗೇ ನೇರಾನೇರ ಮಾತನಾಡಿದವರು ದರ್ಶನ್…
ಆದರೆ ಯಾರದೇ ಉತ್ತಮ ಪ್ರಯೋಗಗಳಿಗೆ – ಕನ್ನಡ ಸಿನಿಮಾಗಳಿಗೆ ಕುಂದುಂಟುಮಾಡುವ ಮಾಫಿಯಾ ಲಾಭಿಗಳ ವಿರುದ್ಧ ದನಿಯುಳ್ಳ ಸ್ಟಾರ್ ಗಳೆಲ್ಲ ಮಾತನಾಡುವಂತಹ “ಸಿನಿಮಾ ಎಲ್ಲರಿಗಿಂತ ದೊಡ್ಡದು” ಎಂಬ ಒಗ್ಗಟ್ಟಿನ ಶಕ್ತಿ ಚಂದನವನಕ್ಕೆ ದಕ್ಕಲಿ.
ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಮಾತ್ರ ಒಟಿಟಿ ಮಾಫಿಯಾ ಕೆಲಸ ಮಾಡುತ್ತಿಲ್ಲ.ಯಾವಾಗ ಡಿಟಿಎಚ್ ಕಲ್ಚರ್ ಶುರುವಾಯಿತೋ, ಆದನ್ನ ಜಾರಿಗೆ ತರಲು ವ್ಯವಸ್ಥೆ ಯಾಗಲಿಲ್ಲವೋ ಆಗಲೇ ಒಟಿಟಿ ಮಾಫಿಯಾ ಎದ್ದು ನಿಂತಿತು.ಈ ನೆಟ್ ವರ್ಕಿಂಗ್ – ಡಿಜಿಟಲ್ ಮಾಫಿಯಾ ಥಿಯೇಟರ್ ವಹಿವಾಟನ್ನ ಸಮಾಪ್ತಿ ಮಾಡದೇ ಸುಮ್ಮನಿರುವುದಿಲ್ಲ.ಅದು ನಿರಂತರವಾಗಿ ಕೆಲಸ ಮಾಡುತ್ತಿದೆ. ಮನುಷ್ಯರನ್ನ ಜಾತ್ರೆಗಳು ಹಬ್ಬಗಳು ಉತ್ಸವಗಳ ನಂತರ ದೇವರಷ್ಟೇ ಬಲವಾಗಿ ಒಗ್ಗೂಡಿಸಿ ಹೇಳಬೇಕಾದ್ದನ್ನ ಹೇಳಿದವುಗಳಲ್ಲಿ ರಂಗಭೂಮಿ ಮತ್ತು ಚಲನಚಿತ್ರಗಳು .ಅವು ಉಳಿಯಬೇಕು.ಅದು ಭಾರತದಂತಹ ದೇಶಗಳ ಐಕ್ಯತೆಯ ಒಂದು ಭಾಗ.ಡಿ ಟಿ ಎಚ್ ಹಿಂದೆ ನಿಂತು ಜಗತ್ತನ್ನೇ ತಲುಪುವ ಆಸೆ ತೋರಿಸಿ ಸಿನಿಮೋದ್ಯಮದ ಮೂಗಿಗೆ ತುಪ್ಪ ಸವರಿ ಜಾಗತೀಕರಣದಂತೆಯೇ ಕುಶಲ ವ್ಯವಹಾರಗಳ ಕೌಶಲ್ಯಗಳನ್ನು ನಿರ್ನಾಮ ಮಾಡುತ್ತದೆ.
ಅಂದಹಾಗೆ ದರ್ಶನ್ ಅವರಿಗೆ ಎಲ್ಲರೂ ದನಿಗೂಡಿಸಲಿ. ರಾಜಕಾರಣಿಗಳ ಜನಜಾತ್ರೆಗೆ ಧಾರ್ಮಿಕ ಸಂತೆಗಳಿಗೆ ಜನಸಾಮಾನ್ಯರ ಕಣ್ಣಿಗೇ ಬೀಳದ ಅಸಲಿ ವ್ಯವಹಾರಗಳಿಗೆ ಇಲ್ಲದ ಕೋವಿಡ್ ಭಯದ ಮಾಫಿಯಾ ಥಿಯೆಟರ್ ಗಳಿಗೆ ಯಾಕೆ? ಕನ್ನಡದ ನಕ್ಷತ್ರಗಳಿಗೆ ಈ ಸತ್ಯ ದರ್ಶನವಾಗಲಿ. ಚಂದನವನ ಬಾಯಿತೆರೆಯಲಿ.ಒಟಿಟಿ ಬಾವಿಯಿಂದ ತಪ್ಪಿಸಿಕೊಳ್ಳಲಿ.