ಇದು ಪಶ್ಚಾತಾಪವೋ, ಪುನರ್ ಅವಲೋಕನವೋ ….
ಇದು ಅವರ ಸೋಲಿನ ಪಯಣದ ಪಶ್ಚಾತಾಪವೋ ಅಥವಾ ಪುನರ್ ಅವಲೋಕನವೋ ಗೊತ್ತಿಲ್ಲ, ಅದರೆ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನುರಂಜನ್, ಇದುವರೆಗಿನ ತಮ್ಮ ಸಿನಿ ಪಯಣದಲ್ಲಾದ ಕಹಿ ಅನುಭವದ ಕುರಿತು ಮಾತನಾಡುವಾಗ, “ರಣಧೀರʼ ಚಿತ್ರ ಬಂದಿದ್ದರೆ ಇಷ್ಟು ಹೊತ್ತಿಗೆ ನಾನು ಸ್ಟಾರ್ ಆಗಿರುತ್ತಿದ್ದೆ ಎನ್ನುವ ಮಾತುಗಳನ್ನು ಅತ್ಯಂತ ನೋವಿನಿಂದಲೇ ಹೇಳಿಕೊಂಡರು.
ಹೊಸ ವರ್ಷದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಮಾಧ್ಯಮದವರ ಮುಂದೆ ಹಾಜರಾಗಿದ್ದ ಅವರು, ಲಾಕ್ ಡೌನ್ ದಿನಗಳು, ಆನಂತರದ ಜರ್ನಿಯ ಜತೆಗೆ ಮುಂದೆ ಯೋಚಿಸಿರುವ ಪ್ಲಾನ್ ಗಳ ಬಗ್ಗೆ ಮಾತನಾಡಿದರು. ಹಾಗೆ ಮಾತನಾಡುವಾಗ ʼಬೃಹಸ್ಪತಿʼ ಚಿತ್ರದ ಸೋಲಿನ ನಂತರ ತಮ್ಮ ಬದುಕಿನಲ್ಲಾದ ಕಹಿ ಘಟನೆಗಳನ್ನು ನೆನಪಿಸಿಕೊಂಡು, ರಣಧೀರ ಬಂದಿದ್ದರೆ ಹೀಗಾಗುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನಾನು ಸ್ಟಾರ್ ಆಗಿರುತ್ತಿದೆʼ ಎನ್ನುತ್ತಾ ಬೇಸರ ಹೊರ ಹಾಕಿದರು.
ʼರಣಧೀರʼ ರವಿಚಂದ್ರನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ. ಅದೇ ಹೆಸರಲ್ಲಿ ಮತ್ತೊಂದು ಚಿತ್ರ ಮಾಡುವ ಪ್ಲಾನ್ ರವಿಚಂದ್ರನ್ ಅವರಿಗಿತ್ತು. ಆ ಚಿತ್ರದೊಂದಿಗೆ ಹಿರಿಯ ಪುತ್ರ ಮನುರಂಜನ್ ಅವರನ್ನು ಬೆಳ್ಳಿ ತೆರೆಗೆ ಪರಿಚಯಿಸುವುದಕ್ಕೂ ಸಿದ್ದತೆ ನಡೆದಿತ್ತು. ಆದರೆ ಅದು ಕಾರಣಾಂತರಗಳಿಂದ ಅದು ಅಲ್ಲಿಗೇ ನಿಂತು ಹೋಯಿತು. ಹಾಗಾಗಿ ಮನುರಂಜನ್ ಅವರು, ರಣಧೀರ ಚಿತ್ರದ ಬದಲಿಗೆ ʼಸಾಹೇಬʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಆನಂತರ ರಾಕ್ ಲೈನ್ ಪ್ರೊಡಕ್ಷನ್ ಮೂಲಕ ತಮಿಳಿನ ʼವಿಐಪಿʼ ಚಿತ್ರ ʼಬೃಹಸ್ಪತಿʼಯಾಗಿ ಕನ್ನಡಕ್ಕೆ ಬಂತು. ಅದರಲ್ಲಿ ಮನು ರಂಜನ್ ನಾಯಕರಾಗಿ ಕಾಣಸಿಕೊಂಡರು. ಇದು ಅವರ ಎರಡನೇ ಚಿತ್ರ. ಅವೆರೆಡು ಚಿತ್ರಗಳೂ ನಿರೀಕ್ಷಿತ ಗೆಲವು ಕಾಣಲಿಲ್ಲ. ಹಾಗಾಗಿ ಆ ಚಿತ್ರಗಳ ಸೋಲಿನ ಬಗ್ಗೆ ಮಾತನಾಡುವಾಗ ʼರಣಧೀರʼ ಚಿತ್ರ ನೆನಪಿಸಿಕೊಂಡರು.
ಅಲ್ಲಿಂದ ಮುಂದೆ ಮುಕ್ತ ಮಾತುಕತೆ. ಇದೇ ಮೊದಲ ಬಾರಿಗೆ ಆಫ್ ದಿ ರೆಕಾರ್ಡ್ ಎನ್ನುವ ಸಂಗತಿಗಳನ್ನು ಬಿಚ್ಚಿಟ್ಟರು. ಎಲ್ಲವನ್ನು ಅವರು ಮನದಾಳದಿಂದಲೇ ಹಂಚಿಕೊಂಡರು “ನಾನು ತುಂಬಾ ರಿಜ್ವರ್ಡ್ ಪರ್ಸನ್. ಅದೇ ನಂಗೆ ಒಂಥರ ಪ್ಲಸ್ ಆಗಿದೆ, ಹಾಗೆಯೇ ನೆಗೆಟಿವ್ ಕೂಡ ಆಗಿದೆ. ಆದರೆ ಮಾಧ್ಯಮದ ಮುಂದೆ ನಾನಿನ್ನು ಮಾತನಾಡಲೇಬೇಕಿದೆ. ಹೆಚ್ಚೆಚ್ಚು ಮಾತನಾಡುತ್ತೇನೆ. ಉಳಿದಂತೆ ಪಾರ್ಟಿ- ಗಿರ್ಟಿ ಇತ್ಯಾದಿ ವಿಷಯಗಳಲ್ಲಿ ಮೊದಲಿನ ಹಾಗೆಯೇ. ಯಾಕಂದ್ರೆ , ನಮ್ಮ ಅಪ್ಪ ಇರೋದೆ ಹಾಗೆ. ಅವರಿಗೆ ಇದೆಲ್ಲ ಇಷ್ಟ ಇಲ್ಲ. ಅವರಿಗೆ ವಿರುದ್ಧವಾಗಿ ನಾನು ನಡೆದುಕೊಳ್ಳುವುದಿಲ್ಲ. ಅದು ನನ್ನ ಪಾಲಿಸಿ. ಅದಕ್ಕಾಗಿಯೇ ನನ್ನ ಮೇಲೆ, ಆತ ಯಾರನ್ನು ಮಾತನಾಡಿಸೋದಿಲ್ಲ, ತುಂಬಾ ರಿಜ್ವರ್ಡ್ ಎನ್ನುವ ಆರೋಪ ಇದೆ. ಅದೇನಾದ್ರೂ, ಇರಲಿ, ಅದಕ್ಕೆ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ. ಅದರಾಚೆ, ಮಾಧ್ಯಮದವರು ನಮ್ಮನ್ನು ಬೆಳೆಸುವವರು. ಅವರ ಜತೆಗೆ ನಮ್ಮ ಮಾತುಕತೆ ಇದ್ದೇ ಇರುತ್ತದೆ. ಇನ್ನು ಮುಂದೆ ತುಸು ಹೆಚ್ಚಾಗಿಯೇ ಇರುತ್ತದೆʼ ಅಂತ ನಗು ಬೀರಿದರು.