ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕಿಳಿದ ಯುವ ಪಡೆ
ಯುವ ನಟ ಲಿಖಿತ್ ಸೂರ್ಯ ಅಭಿನಯದ “ರೂಮ್ ಬಾಯ್ʼ ಚಿತ್ರ ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಗಣೇಶ್ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಮಹೂರ್ತ ಮುಗಿಸಿಕೊಂಡು, ಚಿತ್ರೀಕರಣ ಶುರುಮಾಡಿದೆ. ಐ ಕ್ಯಾನ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಟ ಲಿಖಿತ್ ಸೂರ್ಯ ನಿರ್ಮಾಪಕ ಕಮ್ ನಾಯಕ ನಟ.
ಇದು ಲಿಖಿತ್ ಸೂರ್ಯ ಅಭಿನಯದ ನಾಲ್ಕನೇ ಸಿನಿಮಾ. “ಲೈಫ್ ಸೂಪರ್ʼ, ʼಆಪರೇಷನ್ ನಕ್ಷತ್ರʼ ಹಾಗೂ ʼಗ್ರಾಮʼ ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಈಗಾಗಲೇ ಲೈಫ್ ಸೂಪರ್ ಹಾಗೂʼ ಆಪರೇಷನ್ ನಕ್ಷತ್ರʼ ತೆರೆ ಕಂಡಿವೆ. “ಗ್ರಾಮʼಬಿಡುಗಡೆಗೆ ಸಜ್ಜಾಗಿದೆ. ಇದೇ ಚಿತ್ರ ” ರಾಮಪುರಂʼ ಹೆಸರಲ್ಲಿ ತೆಲುಗಿನಲ್ಲೂ ನಿರ್ಮಾಣವಾಗಿದೆ. ಅದರಲ್ಲೂ ಲಿಖಿತ್ ಸೂರ್ಯ ನಾಯಕ ನಟ. ಅದರಾಚೆ ಈಗ ರೂಮ್ ಬಾಯ್ ಎನ್ನುವುದು ಹೊಸ ಅವತಾರ. ಈ ಚಿತ್ರಕ್ಕೆ ಲಿಖಿತ್ ಸೂರ್ಯ ನಾಯಕ ಕಮ್ ನಿರ್ಮಾಪಕ. ಸಿನಿ ಪಯಣದಲ್ಲಿ ನಟನೆಯಾಚೆ ಅವರಿಗಿದು ನಿರ್ಮಾಣದ ಹೊಸ ಸಾಹಸ.
ತಾರಾಗಣದಲ್ಲಿ ಲಿಖಿತ್ ಅವರೊಂದಿಗೆ ಚಿತ್ರದಲ್ಲಿ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ವಜರಂಗ್ ಶೆಟ್ಟಿ ಹಾಗೂ ರೋಶನ್ ಕೊಡಗು ಸೇರಿದಂತೆ ರಜನಿ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ ನಾಯಕಿರಾಗಿ ಅಭಿನಯಿಸುತ್ತಿದ್ದಾರೆ. ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಕತೆ ಇದು. ಯುವ ಪ್ರತಿಭೆ ರವಿ ನಾಗಡದಿನ್ನಿ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಸಿನಿಮಾ ಮೇಲಿನ ಪ್ರೀತಿ, ಮೋಹ ಮತ್ತು ಆಸಕ್ತಿಗೆ ಎಂಜಿನಿಯರ್ ವೃತ್ತಿಯನ್ನೇ ಬಿಟ್ಟು ಬಂದು ನಿರ್ದೇಶಕ ಹ್ಯಾಟ್ ಹಾಕಿಕೊಂಡಿದ್ದಾರೆ.
ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಾಯಕ ನಟ ಲಿಖಿತ್ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ ʼರೂಮ್ ಬಾಯ್ʼ ಚಿತ್ರ ಶುರು ಮಾಡಿದೆ. ಈ ಜೋಡಿಯ ಸಾಹಸಕ್ಕೆ ಸಂಕಲನಕಾರಾಗಿ ಕಿರಣ ಕುಮಾರ್, ಛಾಯಾಗ್ರಾಹಕರಾಗಿ ಧನ್ಪಾಲ್ , ಸಂಗೀತ ನಿರ್ದೇಶಕರಾಗಿ ರೋಣದ ಬಕ್ಕೇಶ್ ಸಾಥ್ ನೀಡಿದ್ದಾರೆ. ವಿಶೇಷ ಅಂದ್ರೆ ಈ ತಂಡಕ್ಕೆ ʼಸಿನಿ ಲಹರಿʼ ಕೂಡ ಕೈ ಜೋಡಿಸಿದೆ.
ಜ. 8 ರಿಂದಲೇ ಚಿತ್ರೀಕರಣ ಶುರುವಾಗಿದೆ. ನಂದಿಬೆಟ್ಟದ ಬಳಿಯ ರೆಸಾರ್ಟ್ ವೊಂದರಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಜ. 13 ರವರೆಗೂ ಅಲ್ಲಿಯೇ ಚಿತ್ರೀಕರಣ ನಡೆಯಲಿದೆಂತೆ. ಆ ನಂತರ ಎರಡನೇ ಹಂತದ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ನಡೆಸಲು ಪ್ಲಾನ್ ಹಾಕಿಕೊಂಡಿದೆ. ಇನ್ನು ರೂಮ್ ಬಾಯ್ ಎನ್ನುವ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ. ಉಳಿದಂತೆ ಚಿತ್ರದ ಕತೆ ಹೇಗೆ ಎನ್ನುವುದರ ಕುರಿತು ನಿರ್ದೇಶಕ ರವಿ ನೀಡುವ ವಿವರಣೆ ಏನು? ” ಇದೊಂದು ಸೈಕಾಲಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಸಾಮಾನ್ಯವಾಗಿ ರೂಮ್ ಬಾಯ್ ಅಂದ್ರೆ ಒಂದು ಹೊಟೇಲ್ ಅಥವಾ ರೆಸಾರ್ಟ್ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಆ ಪ್ರಕಾರ ಇಲ್ಲೊಂದು ರೆಸಾರ್ಟ್ ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು, ರೂಮ್ ಬಾಯ್ಗೂ ಅದಕ್ಕೂ ಕನೆಕ್ಷನ್ ಎಂತಹದು ಎನ್ನುವುದೇ ಈ ಚಿತ್ರ. ಸೈಕಾಲಜಿಕಲ್ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಇದರ ವಿಶೇಷ ಎನ್ನುತ್ತಾರೆ ನಿರ್ದೇಶಕ ರವಿ.