ಸಂಕ್ರಾಂತಿಕ್ಕೆ ಸೆಟ್ಟೇರುತ್ತಿದೆ ಹೊಸ ಸಿನಿಮಾ
ಗಾಜನೂರು ಅಂದಾಕ್ಷಣ ಕನ್ನಡ ಚಿತ್ರರಂಗಕ್ಕೆ ನೆನಪಾಗೋದು ವರನಟ ಡಾ. ರಾಜ್ಕುಮಾರ್ ಅವರ ಹುಟ್ಟೂರು. ಆದರೆ ಅದೇ ಹೆಸರಲ್ಲೊಂದು ಊರು ಶಿವಮೊಗ್ಗ ಜಿಲ್ಲೆಯಲ್ಲೂ ಇದೆ. ಆ ಊರಿನಲ್ಲಿ ನಡೆಯುವ ನೈಜ ಘಟನೆಯೊಂದನ್ನು ಆಧರಿಸಿ, ಅದೇ ಊರಿನ ಹೆಸರಲ್ಲೊಂದು ಸಿನಿಮಾ ಸೆಟ್ಟೇರಲು ರೆಡಿ ಆಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲೇ ಅಂದ್ರೆ ಜ 16 ಕ್ಕೆ ʼಗಾಜನೂರುʼ ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಕೃತಿಕಾ ರಾಮ್ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಲಬುರಗಿ ಮೂಲದ ಅವಿನಾಶ್ ಬಂಡವಾಳ ಹೂಡುತ್ತಿದ್ದಾರೆ. ಇದು ಅವರ ನಿರ್ಮಾಣದ ಚೊಚ್ಚಲ ಚಿತ್ರ. ಯುವ ಪ್ರತಿಭೆ ವಿಜಯ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾದ ಎಸ್.ಮೋಹನ್, ನಂದಕಿಶೋರ್ ನಿರ್ದೇಶಕರ ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದಲ್ಲಿ ವಿಜಯ್, ಈಗ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಕೀರ್ತಿ ಕತೆ, ಚಿತ್ರಕತೆ ಬರೆದಿದ್ದಾರೆ. ಕ್ರಾಂತಿಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರ ತಂಡದ ಪ್ರಕಾರ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಚಿತ್ರ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಾಳ್ಕರ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ತೀರ್ಥಹಳ್ಳಿ, ಬೆಂಗಳೂರಿನಲ್ಲಿ 35 ದಿನಗಳ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್ ಮಾಡಿಕೊಂಡಿದೆ. ಅವತಾರ್, ರವಿಶಂಕರ್, ತಬಲ ನಾಣಿ, ಕುರಿ ಪ್ರತಾಪ್, ಗೋಪಾಲಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ತರಂಗ ವಿಶ್ವ, ವಾಣಿ, ಸಂತು ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚೆಗೆ ಚಿತ್ರ ತಂಡವು ಎಡಿಜಿಪಿ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿ, ಚಿತ್ರಕ್ಕೆ ಆಶೀರ್ವಾದ ಪಡೆಯಿತು.