ನಮಗಿಲ್ಲದ ಧೈರ್ಯ, ತಮಿಳು ಸಿನ್ಮಾ ಮಂದಿಗೆ  ಬಂದಿದ್ದಾರೂ  ಹೇಗೆ   ?

ಪೊಂಗಲ್‌ ಗೆ ಮಾಸ್ಟರ್‌ ಎಂಟ್ರಿ, ಇದು ಸಿಹಿಯೋ, ಕಾರವೋ…..

ಕನ್ನಡದ ಸ್ಟಾರ್‌ ಸಿನಿಮಾಗಳು ಈಗಲೂ ಚಿತ್ರಮಂದಿರಕ್ಕೆ ಬರಲು ಮೀನಾಮೇಷ ಎಣಿಸುತ್ತಿವೆ. ಕೊರೋನಾ ಆತಂಕದಿಂದ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೋ, ಇಲ್ಲವೋ ಎನ್ನುವ ಭಯ ಕನ್ನಡದ ನಿರ್ಮಾಪಕರನ್ನು ಕಾಡುತ್ತಿದೆ. ಸ್ಟಾರ್‌ ನಟರು ಕೂಡ ಅದೇ ಆತಂಕದಲ್ಲಿದ್ದಾರೆ. ಆದರೆ, ನೆರೆ ರಾಜ್ಯಗಳ ಸ್ಟಾರ್‌ ಸಿನಿಮಾಗಳು ಈಗ ಕನ್ನಡದ ಪ್ರೇಕ್ಷಕರನ್ನು ಭರಪೂರ ರಂಜಿಸಲು ಚಿತ್ರಮಂದಿರಕ್ಕೆ ಲಗ್ಗೆ ಹಾಕುತ್ತಿವೆ. ಇದೇ ಸಂಕ್ರಾಂತಿಗೆ ತಮಿಳಿನ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ಅಭಿನಯದ ʼಮಾಸ್ಟರ್‌ʼ ಕನ್ನಡದಲ್ಲೂ ತೆರೆ ಕಾಣುತ್ತಿದೆ.

ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ವರ್ಷನ್‌ ಜತೆಗೆ ಇದು ಕನ್ನಡಕ್ಕೂ ಡಬ್‌ ಆಗಿದೆ. ರಾಜ್ಯದಲ್ಲಿ ಇದರ ವಿತರಣೆಯ ಹಕ್ಕನ್ನು ಧೀರಜ್‌ ಎಂಟರ್‌ ಪ್ರೈಸಸ್‌ ಪಡೆದಿದೆ. ತಮಿಳುನಾಡು ಮಾದರಿಯಲ್ಲೇ, ಈ ಚಿತ್ರದ ಪ್ರದರ್ಶನಕ್ಕೆ ಬೆಂಗಳೂರಿನಲ್ಲೂ ನಾಳೆ (ಜ.6)ಯಿಂದಲೇ ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರ ಮಂದಿರಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗಲಿದೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಚಿತ್ರವು ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುವುದು ಗ್ಯಾರಂಟಿ ಆಗಿದೆ. ಇಲ್ಲಿ ಮೂಡುವುದು ಒಂದೇ ಪ್ರಶ್ನೆ, ಕನ್ನಡ ಸಿನಿಮಾ ಮಂದಿಗೆ ಇಲ್ಲದ ಧೈರ್ಯ, ತಮಿಳು ಸಿನಿಮಾ ಮಂದಿಗೆ ಹೇಗೆ ಬಂತು ಅಂತ.

ಅದು ಬಿಡಿ, ” ಮಾಸ್ಟರ್‌ʼ ಸಿನಿಮಾದ ಮಾದರಿಯಲ್ಲೇ ಅನ್ಯ ಭಾಷೆಯ ಸ್ಟಾರ್‌ ಸಿನಿಮಾಗಳೆಲ್ಲ ಬ್ಯಾಕ್‌ ಟು ಬ್ಯಾಕ್ ಹೀಗೆಯೇ ಡಬ್‌ ಆಗಿ ಕನ್ನಡಕ್ಕೆ ಬರುತ್ತಿದ್ದರೆ, ಕನ್ನಡ ಚಿತ್ರೋದ್ಯಮದ ಪರಿಸ್ಥಿತಿ ಹೇಗಾಗಬಹುದು ? ಹತ್ತಾರು ಕೋಟಿ ಸಂಭಾವನೆ ಪಡೆದು ವರ್ಷಕ್ಕೆ ಒಂದೋ, ಎರಡೋ ಅಂತ ಸಿನಿಮಾ ಮಾಡಿಕೊಂಡು ಕೂರುವ ಸ್ಟಾರ್ಸ್‌ ಗತಿ ಏನಾಗಬಹುದು ? ಕನ್ನಡ ಚಿತ್ರರಂಗ ಅದೆಷ್ಟರ ಮಟ್ಟಿಗೆ ಗಮನಿಸಿದೆಯೋ ಗೊತ್ತಿಲ್ಲ, ಡಬ್ಬಿಂಗ್‌ ಹಾಗೂ ಕೊರೋನಾ ಕಾರಣದ ಲಾಕ್‌ಡೌನ್‌ ನಂತರ ಮನರಂಜನಾ ಉದ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗಿವೆ.

ಈ ಹಿಂದಿನಂತೆ ಈಗ ಕನ್ನಡದ ಪ್ರೇಕ್ಷಕರಿಗೆ ಪರಭಾಷೆಗಳ ಸಿನಿಮಾ ನೋಡಲು ಭಾಷೆಯ ತೊಂದರೆ ಇಲ್ಲ. ಅಲ್ಲಿನ ಸೂಪರ್‌ ಸ್ಟಾರ್‌ ಸಿನಿಮಾಗಳೆಲ್ಲ ಕನ್ನಡಕ್ಕೆ ಡಬ್‌ ಆಗಿ ಬರುತ್ತಿವೆ. ಸಹಜವಾಗಿಯೇ ಅಲ್ಲಿನ ಸ್ಟಾರ್‌ಗಳೆಲ್ಲ ಇಲ್ಲಿನವರಿಗೂ ಪರಿಚಯ ಇರೋದ್ರಿಂದ ಅವರ ಸಿನಿಮಾ ಕನ್ನಡದ ಪ್ರೇಕ್ಷಕರಿಗೂ ತಲುಪುವುದರಲ್ಲಿ ಅನುಮಾನ ಇಲ್ಲ. ಡಬ್ಬಿಂಗ್‌ ಸಿನಿಮಾ ಕನ್ನಡದಲ್ಲಿ ಇದುವರೆಗೂ ಗೆದ್ದಿಲ್ಲ ಅಂತೆನ್ನುವ ಜಂಭ ಇಲ್ಲಿನ ನಿರ್ಮಾಪಕರು ಹಾಗೂ ಸ್ಟಾರ್‌ಗಳಿಗಿದೆ. ಆದರೆ ಕೊರೋನಾ ನಂತರದ ಪರಿಣಾಮ ಬೇರೆಯೇ ಆಗಲಿದೆ. ಅದು ವಿಜಯ್‌ ಅಭಿನಯದʼ ಮಾಸ್ಟರ್‌ʼ ಮೂಲಕ ಗೊತ್ತಾಗಲಿದೆ. ಇದು ಗೆದ್ದರೆ ಕನ್ನಡಕ್ಕೆ ನಿಜಕ್ಕೂ ಮಾಸ್ಟರ್‌ ಸ್ಟ್ರೋಕ್!

ಇನ್ನು ಕನ್ನಡದ ಸ್ಟಾರ್‌ಗಳೆಲ್ಲ ಹಿಂದಿನ ದಿನಗಳ ಮೂಡ್‌ನಲ್ಲಿಯೇ ಇದ್ದಾರೆ. ಕೊರೋನಾ ಮಾಯವಾಗಿ, ಮತ್ತೆ ಚಿತ್ರಮಂದಿರಗಳು ತೆರೆದುಕೊಂಡರೆ ಹಿಂದಿನ ಹಾಗೆಯೇ ಚಿತ್ರಮಂದಿರಗಳಲ್ಲಿ ತಮ್ಮ ಕಟೌಟ್‌ ಗಳಿಗೆ ಅಭಿಮಾನಿಗಳಿಂದ ಹಾರ, ತೂರಾಯಿಗಳು ಬೀಳುತ್ತವೆ. ಸಿನಿಮಾ ಹೇಗಿದ್ರೂ ಸರಿಯೇ ಚಿತ್ರ ಮಂದಿರಗಳು ತುಂಬಿಕೊಳ್ಳುತ್ತವೆ, ಕಲೆಕ್ಷನ್‌ ಜೋರಾಗಿರುತ್ತೆ ಅಂತಲೇ ಭಾವಿಸಿಕೊಂಡಂತಿದೆ. ಅದೇ ಕಾರಣಕ್ಕೆ ಸ್ಟಾರ್‌ ಸಿನಿಮಾಗಳನ್ನು ನಿರ್ಮಾಪಕರು ತಮ್ಮ ತಿಜೂರಿಗಳಲ್ಲಿ ಭದ್ರವಾಗಿಟ್ಟುಕೊಂಡಿದ್ದಾರೆ. ಕೊರೋನಾ ಆತಂಕ ದೂರವಾದ ತಕ್ಷಣವೇ ತೆರೆಗೆ ತರೋಣ ಅಂತ ಹೇಳುತ್ತಿದ್ದಾರೆ. ಆದರೆ ಲೆಕ್ಕಾಚಾರ ಹಾಗೆಯೇ ಇರುತ್ತಾ ?

ಸದ್ಯಕ್ಕೆ ಕನ್ನಡದ ಪ್ರೇಕ್ಷಕನ ಮನರಂಜನೆಯ ಅಭಿರುಚಿ ಈಗ ಈ ಹಿಂದೆ ಇದ್ದಂತೆ ಇಲ್ಲ. ಚಿತ್ರಮಂದಿರಗಳು ಬಂದ್‌ ಆಗಿ, ಸಿನಿಮಾ ಬಿಡುಗಡೆಯಾಗದೆ ಇಷ್ಟು ದಿನವಾದರೂ, ಕನ್ನಡ ಸಿನಿಮಾ‌ ಬಿಡುಗಡೆ ಆಗುತ್ತಿಲ್ಲ, ಸ್ಟಾರ್ ಸಿನಿಮಾ ಬರುತ್ತಿಲ್ಲ ಅಂತ‌ ಪ್ರೇಕ್ಷಕರಾರು ಸ್ಟಾರ್ ನಟರ ಮನೆ ಬಾಗಿಲಿಗೆ ಬಂದು‌ ಧರಣಿ ಕುಳಿತಿಲ್ಲ. ಬದಲಿಗೆ, ಮನರಂಜನೆ ಎನ್ನುವುದಕ್ಕೆ ಆತನಿಗೀಗ ಹಲವು ಮಾರ್ಗಗಳು ಲಭ್ಯ ಇವೆ. ಹಾಗಾಗಿ ಚಿತ್ರಮಂದಿರ ಎನ್ನುವುದು ಇನ್ನು ಮುಂದೆ ಆತನಿಗೆ ಕೊನೆಯ ಆಪ್ಸೆನ್ ಕೂಡ ಆಗಬಹುದು.‌

 

ಬರಬೇಕಾದವರು ಇವರು..

ಕನ್ನಡದಲ್ಲೀಗ ಬಹುನಿರೀಕ್ಷಿತ ಸ್ಟಾರ್‌ ಸಿನಿಮಾಗಳದ್ದು ದೊಡ್ಡ ಪಟ್ಟಿ ಇದೆ. ದರ್ಶನ್‌ ಅಭಿನಯದ “ರಾಬರ್ಟ್‌ʼ, ಪುನೀತ್‌  ಅಭಿನಯದ “ಯುವರತ್ನʼ, ಧ್ರುವಸರ್ಜಾ ಅಭಿನಯದ “ ಪೊಗರುʼ, ಸುದೀಪ್‌ ಅಭಿನಯದ “ಕೋಟಿಗೊಬ್ಬ 3ʼ , ಶಿವರಾಜ್‌ ಕುಮಾರ್‌ ಅಭಿನಯದʼ ಭಜರಂಗಿ 2ʼ ಯಶ್‌ ಅಭಿನಯದ ʼಕೆಜಿಎಫ್‌ 2ʼ ತೆರೆ ಕಾಣಬೇಕಿದೆ. ಕನ್ನಡ ಸಿನಿಮಾ ಪ್ರೇಕ್ಷಕ ಈ ಸಿನಿಮಾಗಳ ರಿಲೀಸ್‌ಗೆ ಕಾಯುತ್ತಿದ್ದಾರೆ. ಆದರೆ ಇವೆಲ್ಲ ಬರುವುದು ಯಾವಾಗ?

ಅದರಲ್ಲೂ ಲಾಕ್‌ಡೌನ್‌ ದಿನಗಳಿಂದ ಒಟಿಟಿ ಪ್ಲಾಟ್‌ ಫಾರ್ಮ್‌ ಎನ್ನುವುದು ಸಿನಿಮಾಸಕ್ತರ ತಾಣವಾಗಿದೆ. ಅಲ್ಲಿಯೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅಮೆಜಾನ್‌, ನೆಟ್‌ಫ್ಲಿಕ್ಸ್ ಸೇರಿದಂತೆ ಒಟಿಟಿ ಆಪ್‌ಗಳು ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇವೆ. ಅಲ್ಲಿಯೇ ಈಗ ಒಳ್ಳೆಯ ಸಿನಿಮಾ ಸಿಗುವಾಗ ಇನ್ಯಾಕೆ ಚಿತ್ರಮಂದಿರ ಅಂದೊಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಲಾಕ್‌ಡೌನ್‌ ನಂತರ ಈ ಸಂಖ್ಯೆ ದುಪ್ಪಟ್ಟು ಆಗಿದೆ ಎನ್ನುತ್ತಿವೆ ಮೂಲಗಳು.

ಹಾಗೆಯೇ ಭಾಷೆ ಯಾವುದಾದರೇನು ಮನರಂಜನೆ ಸಿಕ್ಕರೆ ಸಾಕು ಎನ್ನುವರೂ ಹೆಚ್ಚಾಗುತ್ತಿದ್ದಾರೆ. ಇದಿಷ್ಟರ ನಡುವೆ ನಮ್ಮ ಸ್ಟಾರ್‌ಗಳು, ನಮ್ಮದೇ ಭಾಷೆ ಅಂತೆಲ್ಲ ಅಭಿಮಾನ ಇಟ್ಟುಕೊಂಡವರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತರಬೇಕಾದ್ರೆ, ಎಲ್ಲಾ ರೀತಿಯಲ್ಲೂ ಗುಣಮಟ್ಟದ ಸಿನಿಮಾಗಳು ಬರಬೇಕು. ಜತೆಗೆ ಆದಷ್ಟು ಬೇಗ ಸ್ಟಾರ್‌ ಸಿನಿಮಾಗಳು ತೆರೆ ಕಾಣಬೇಕಿದೆ ಎನ್ನುವ ಮಾತು ಸಿನಿಮಾ ತಜ್ಣರಿಂದಲೇ ಕೇಳಿಬರುತ್ತಿದೆ. ಅದರ ಜತೆಗೆಯೇ ಈಗ ಪರಭಾಷೆಯ ಸ್ಟಾರ್‌ ಸಿನಿಮಾಗಳಿಗೆ ಪೈಪೋಟಿಯಾಗಿ ಕನ್ನಡ ಸಿನಿಮಾಗಳು ಬರಬೇಕಿದೆ. ಸ್ಟಾರ್‌ಗಳು ಕೂಡ ತಾವು ಕೋಟಿ ಸಂಭಾವನೆಯ ಶೂರರು ಎನ್ನುವ ಜಂಭ ಬಿಟ್ಟು, ವರ್ಷಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಂಟೆಂಟ್‌ ಆಧರಿತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಆಗ ಮಾತ್ರ, ಕನ್ನಡ ಚಿತ್ರೋದ್ಯಮ ಉಳಿಯುತ್ತೆ, ಕನ್ನಡದ ಪ್ರೇಕ್ಷಕ ಇರುತ್ತಾನೆ.  ಅದು ʼಮಾಸ್ಟರ್‌ʼ ನಂತಹ ಪರಭಾಷೆಯ ಸಿನಿಮಾದೆದುರು ಕೂಡ.

Related Posts

error: Content is protected !!