ಹೊಸ ವರ್ಷಕ್ಕೆ ಬಿಡುಗಡೆ ತಯಾರಿ
ಕನ್ನಡದಲ್ಲಿ ಹೊಸಬರ ಕಲರವ ಕೊಂಚ ಹೆಚ್ಚೇ ಆಗುತ್ತಿದೆ. ಸದ್ಯಕ್ಕೆ ಹೊಸಬರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲು ತಯಾರಾಗಿವೆ. ಅವುಗಳ ಸಾಲಿಗೆ “ಖೇಲ್” ಎಂಬ ಸಿನಿಮಾವೂ ಇದೆ.
ಹೌದು, ಖೇಲ್ ಇದು ಹೊಸಬರ ಸಿನಿಮಾ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ತುಂಬಿವೆ.
ಚಿತ್ರವನ್ನು ರಾಜೀವ್ ನಾಯಕ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಸತೀಶ್ ಎಚ್. ನಿರ್ಮಾಣ ಮಾಡಿದ್ದಾರೆ.
ದಿಲೀಪ್ ಪಿರಿಲಿಯಾ ಕ್ಯಾಮೆರಾ ಹಿಡಿದರೆ, ಬ್ಲೂ ಸ್ಟಾರ್ ಸಂತೋಷ್ ಅವರ ಸಾಹಸವಿದೆ. ಗಣೇಶ್ ಭಗವತ್ ಅವರು ಸಂಗೀತ ನೀಡಿದ್ದಾರೆ.
ಇದೊಂದು ಮೈಂಡ್ ಗೇಮ್ ಕುರಿತ ಸಿನಿಮಾ. ಇಲ್ಲಿ ನಾಯಕ, ನಾಯಕಿ ಮತ್ತು ವಿಲನ್ ನಡುವಿನ ಮೈಂಡ್ ಗೇಮ್ ಕಥೆ ಇದೆ.
ಇಲ್ಲಿ ಹೀರೋಗಿರುವಷ್ಟೇ ಜಾಗ ವಿಲನ್ ಗೂ ಇದೆ. ಚಿತ್ರದಲ್ಲಿ ಖಳನಾಯಕರಾಗಿ ಪೃಥ್ವಿ ನಟಿಸಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಹೇಳುವ ಪೃಥ್ವಿ, “ಇದೊಂದು ಮೈಂಡ್ ಗೇಮ್ ಸಿನಿಮಾ. ಒಂದು ವಸ್ತು ಮೂಲಕ ಕಥೆ ಶುರುವಾಗುತ್ತೆ. ಇಡೀ ಸಿನಿಮಾದಲ್ಲೇ ಆ ವಸ್ತು ಹೈಲೈಟ್. ಅದನ್ನು ಈಗಲೇ ರಿವೀಲ್ ಮಾಡಿದರೆ ಕಥೆ ಓಪನ್ ಆಗುತ್ತೆ. ಒಟ್ಟಾರೆ, ಇದೊಂದು ಯೂಥ್ ಕಾನ್ಸೆಪ್ಟ್ ಸಿನಿಮಾ.
ಇಲ್ಲಿ “ಖೇಲ್” ಅನ್ನೋದು ಮೂರು ಪಾತ್ರಗಳ ಕಥೆಯಲ್ಲಿ ಬರುವ ಪ್ರಮುಖ ಆಟ. ಕನ್ನಡದಲ್ಲಿ “ಆಟ” ಅಂತ ಹೆಸರಿಡಬಹುದಾಗಿತ್ತು. ಆದರೆ, ಆ ಶೀರ್ಷಿಕೆ ಇದ್ದುದರಿಂದ ಕಥೆಗೆ ಪೂರಕವಾಗಿ ಇರುತ್ತೆ ಎಂಬ ಕಾರಣಕ್ಕೆ “ಖೇಲ್” ಶೀರ್ಷಿಕೆ ಇಡಲಾಗಿದೆ. ಸಿನಿಮಾ ನೋಡಿದವರಿಗೆ ಶೀರ್ಷಿಕೆ ಪಕ್ಕಾ ಎನಿಸುತ್ತದೆ ಎನ್ನುತ್ತಾರೆ ಪೃಥ್ವಿ.
ಚಿತ್ರದಲ್ಲಿ ಅರವಿಂದ್, ಹಿಮಾ ಮೋಹನ್ ನಾಯಕ, ನಾಯಕಿಯಾದರೆ, ಪೃಥ್ವಿ ವಿಲನ್. ಪೃಥ್ವಿ ಈಗಾಗಲೇ ಕನ್ನಡದಲ್ಲಿ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈ ” ಖೇಲ್” ಚಿತ್ರದಲ್ಲಿ ಪ್ರಮುಖ ಖಳನಾಯಕರಾಗಿದ್ದಾರೆ.
ಉಳಿದಂತೆ ಗೌತಮ್ ರೈ, ಶಿವರಾಜ್, ಸಂತೋಷ್, ರಾಜೇಶ್ ಇತರರು ಇದ್ದಾರೆ.
ಈಗಾಗಲೇ ಚಿತ್ರದ ಹಾಡುಗಳು ಹೊರಬಂದಿವೆ. ಇತ್ತೀಚೆಗೆ ಪುನೀತ್ ಅವರು ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಎರಡನೇ ಲುಕ್ ಗೆ ನಿರ್ದೇಶಕ ಶಿವಗಣೇಶ್ ಮಾಡಿ ಶುಭ ಹಾರೈಸಿದ್ದಾರೆ.
ಚಿಂತಾಮಣಿ ಸುತ್ತಮುತ್ತಲಿನ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಸದ್ಯಕ್ಕೆ ರಿಲೀಸ್ ಆಗಲು ತಯಾರಾಗಿದೆ. ಜನವರಿಯಲ್ಲಿ ಪ್ರೇಕ್ಷಕರ ಮುದೆ ತರುವ ಯೋಚನೆ ನಿರ್ದೇಶಕರದ್ದು.