ಅಭಿಮಾನಿಗಳಿಂದಲೇ ಅನ್ನದಾನ ಕಾರ್ಯಕ್ರಮ
ಡಾ.ವಿಷ್ಣುವರ್ಧನ್ ಇಂದು ನಮ್ಮೊಂದಿಗಿಲ್ಲವಾದರೂ, ಅವರು ಬಿಟ್ಟು ಹೋದ ಆದರ್ಶಗಳಿವೆ. ನೂರಾರು ಅದ್ಭುತ ಚಿತ್ರಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬ ವರ್ಗ ಡಿಸೆಂಬರ್ 30 ರಂದು ಅವರ 11 ನೇ ಪುಣ್ಯತಿಥಿಯನ್ನು ಆಚರಿಸಿದೆ. ಅವರಿಲ್ಲದ ಈ ಹನ್ನೊಂದು ವರ್ಷಗಳನ್ನು ಊಹಿಸಲೂ ಸಾಧ್ಯವಿಲ್ಲ. 2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ಅಗಲಿದರು. ಅಂದು ಚಿತ್ರರಂಗದ ಪಾಲಿಗೆ ಕರಾಳ ದಿನವೇ ಸರಿ. ಪ್ರತಿ ವರ್ಷವೂ ಅವರ ಅಭಿಮಾನಿಗಳು ಮತ್ತು ಕುಟಂಬ ವರ್ಗ ಅವರ ಪುಣ್ಯಸ್ಮರಣೆ ಮಾಡಿಕೊಂಡು ಬರುತ್ತಿದೆ.
ವಿಷ್ಣುವರ್ಧನ್ ಅವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋಗೆ ತೆರಳಿ ಪ್ರೀತಿಯ ನಟನಿಗೆ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸ್ಮರಿಸಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿ ಕೂಡ ವಿಶೇಷವಾಗಿ ಪೂಜೆ ಸಲ್ಲಿಸಿ, ವಿಷ್ಣುವರ್ಧನ್ ಅವರನ್ನು ಸ್ಮರಿಸಿದೆ.
ಅತ್ತ ಭಾರತಿ ವಿಷ್ಣುವರ್ಧನ್ ಕುಟುಂಬ ಕೂಡ ಮೈಸೂರಿಗೆ ತೆರಳಿ, ಅಲ್ಲಿ ನಡೆಯುತ್ತಿರುವ ಸ್ಮಾರಕಕ್ಕೂ ಪೂಜೆ ಸಲ್ಲಿಸಲಿದ್ದಾರೆ. ಒಂದಷ್ಟು ಅಭಿಮಾನಿಗಳು ಸಹ ಭಾಗಿಯಾಗಿ ಸ್ಮರಿಸಿದ್ದಾರೆ. ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅಭಿಮಾನಿಗಗಳೇ ಅನ್ನದಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.