ಆ ಉಪಕರಣಗಳನ್ನ ಇನ್ನೆಲ್ಲಿ ಬಿಸಾಡುತ್ತಾರೋ?- ನಿರ್ದೇಶಕರ ಸಂಘಕ್ಕಾದ ಘಟನೆಗೆ ಸಾಧು ಬೇಸರ

 

ಸಂಘವನ್ನು ಕೆಳಮಟ್ಟಕ್ಕೆ ತಂದಿದ್ದು ನೋವಾಗಿದೆ

ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ ಬೀದಿಗೆ ಬಿದ್ದ ಸುದ್ದಿಯನ್ನು ಮೊದಲು ಬ್ರೇಕ್‌ ಮಾಡಿದ್ದು “ಸಿನಿ ಲಹರಿ” ಸುದ್ದಿ ಹರಡುತ್ತಿದ್ದಂತೆಯೇ ಅನೇಕ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಚಿತ್ರರಂಗದ ಹಲವು ಗಣ್ಯರು ಬೇಸರ ಹೊರಹಾಕಿದ್ದುಂಟು. ನಟ ಕಮ್‌ ನಿರ್ದೇಶಕ ಸಾಧುಕೋಕಿಲ ಅವರೂ ಸಹ ನಿರ್ದೇಶಕರ ಸಂಘಕ್ಕೆ ಬಂದ ಪರಿಸ್ಥಿತಿ ಕುರಿತು ತೀವ್ರ ಬೇಸರ ಹೊರಹಾಕಿದ್ದಾರೆ. ಹೌದು, ಅವರು ನಿರ್ದೇಶಕ ನಾಗೇಂದ್ರ ಅರಸ್‌ ಅವರಿಗೆ ಕಳುಹಿಸಿರುವ ಆಡಿಯೋವೊಂದು ಜೋರಾಗಿಯೇ ಹರಿದಾಡುತ್ತಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಒಂದಷ್ಟು ಬೇಸರ ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಮಾತನಾಡಿರುವ ಸಂಕ್ಷಿಪ್ತ ವಿವರ ಇಲ್ಲಿದೆ.


“ನಾಗೇಂದ್ರ ಅರಸ್‌, ಚಿತ್ರರಂಗದ ಮಾನ ಮರ್ಯಾದೆ ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕಚೇರಿಯೊಳಗಿದ್ದ ಎಲ್ಲಾ ಪೀಠೋಪಕರಣಗಳನ್ನು ರೋಡ್‌ಗೆ ಹಾಕಲಾಗಿದೆ. ಇದಕ್ಕಿಂತ ದೊಡ್ಡ ಅವಮಾನವಿಲಲ್.‌ ದೊಡ್ಡ ದೊಡ್ಡ ನಿರ್ದೇಶಕರು ಕಟ್ಟಿದ, ಪಾಲಿಸಿದ ಸಂಘ ಇಂದು ಬೀದಿಗೆ ಬಂದಿದೆಯೆಂದರೆ ಹೇಗೆ? ಯಾರೋ ಬಾಡಿಗೆ ಕಟ್ಟದಿದ್ದರಿಂದ ಆ ಬಾಡಿಗೆ ಮನೆ ಓನರ್‌ ನಿರ್ದೇಶಕರ ಸಂಘದ ಉಪಕರಣಗಳನ್ನೆಲ್ಲಾ ರೋಡ್‌ಗೆ ಬೀಸಾಕುತ್ತಾರೆ ಅಂದರೆ ಏನರ್ಥ. ಅಲ್ಲಿ ನಾಲ್ಕೈದು ಜನ ಹುಡುಗರು ನಿಂತು ಬಾಯಿ ಬಡ್ಕೋತ್ತಾ ಇದಾರೆ. ವಿ.ನಾಗೇಂದ್ರ ಪ್ರಸಾದ್‌ ಮುಂಬೈನಲ್ಲಿದ್ದಾರಂತೆ. ಟೇಶಿ ವೆಂಕಟೇಶ್‌ ಏನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಇನ್ನು, ಆ ಸಾಮಾನುಗಳನ್ನು ಎಲ್ಲಿ ಬಿಸಾಕುತ್ತಾರೋ, ನಿರ್ದೇಶಕರ ಸಂಘವನ್ನು ಈ ಕೆಳಮಟ್ಟಕ್ಕೆ ತಂದು ಬಿಸಾಡಿದ್ರಲ್ಲ ಛೇ…” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಾಧು.


2018 ರಲ್ಲಷ್ಟೇ ವಿಜಯನಗರದಿಂದ ನಾಗರಬಾವಿಗೆ ಸ್ಥಳಾಂತರವಾಗಿದ್ದ ಸಂಘದ ಕಚೇರಿಯ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಲ್ಲದೆ, ಕಚೇರಿಯಲ್ಲಿನ‌ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಜವಾಗಿಯೇ ಈ ಘಟನೆ ಸಂಘದ ಹಲವು ಪದಾಧಿಕಾರಿಗಳಲ್ಲಿ ತೀವ್ರ ಬೇಸರ ತರಿಸಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು‌ ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಕಳೆದ‌ ಡಿಸೆಂಬರ್ ತಿಂಗಳಿನಿಂದಲೇ ಇದೆ ಎನ್ನಲಾಗಿದೆ. ಕೊರೋನಾ ಸಮಸ್ಯೆ ನಿರ್ದೇಶಕರು ಸೇರಿದಂತೆ ಇಡೀ‌ ಚಿತ್ರೋದ್ಯಮವನ್ನು ತೀವ್ರವಾಗಿ ಕಾಡಿದ್ದು ಸುಳ್ಳಲ್ಲ. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ‌ ನಿಂತುಕೊಂಡಿತು. ಈ ಬೆಳವಣಿಗೆ ಸಂಘದ ಆರ್ಥಿಕ‌ ಮುಗ್ಗಟ್ಟುಗೆ ಕಾರಣ ಎನ್ನಲಾಗಿದೆ.

 

Related Posts

error: Content is protected !!