ಅರ್ಜುನನ ಪುತ್ರನ ಅವತಾರ ಹೊತ್ತ ಕಾರ್ತಿಕ್ ಜಯರಾಂ, ಐದು ಭಾಷೆಗಳಲ್ಲಿ ಐರಾವನ್
ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಂ ಈಗಾದ್ರೂ ಇನ್ನೊಂದು ಲೆವೆಲ್‌ಗೆ ಹೋಗ್ತಾರಾ? ಗೊತ್ತಿಲ್ಲ, ಅದರೆ ಅವರ ಫ್ಯಾನ್ಸ್ ಜತೆಗೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಹಾಗೊಂದು ಕುತೂಹಲ ಈಗ ಶುರುವಾಗಿದೆ. ಅದಕ್ಕೆ ಕಾರಣ ʼಐರಾವನ್ʼ ಚಿತ್ರ. ಒಂದಷ್ಟು ಗ್ಯಾಪ್ ನಂತರ ನಟ ಕಾರ್ತಿಕ್ ಜಯರಾಂ ಸಾಕಷ್ಟು ತಾಳ್ಮೆ ಮತ್ತು ಸಿದ್ದತೆಯೊಂದಿಗೆ ಮಾಡಿದ ಚಿತ್ರ ಇದು. ಚಿತ್ರದ ಶೀರ್ಷಿಕೆಯೇ ಇಲ್ಲಿ ವಿಭಿನ್ನ ಮತ್ತು ವಿಶೇಷ. ಐರಾವನ್ ಅಂದ್ರೇನು? ಇದು ಕನ್ನಡದ ಸಿನಿ ಪ್ರೇಕ್ಷಕರಿಗೆ ಇರುವ ಪ್ರಶ್ನೆ.
ಚಿತ್ರ ತಂಡ ಹೇಳುವ ಪ್ರಕಾರ ʼಐರಾವನ್ʼ ಅಂದ್ರೆ ಅರ್ಜುನನ ಪುತ್ರನ ಹೆಸರಂತೆ. ಅದನ್ನೇ ಚಿತ್ರ ತಂಡ ಯಾಕೆ ಟೈಟಲ್ ಆಗಿಸಿಕೊಂಡಿದೆ ಎನ್ನುವ ಕುತೂಹಲದ ಪ್ರಶ್ನೆಗೆ ಅದು ಕತೆಯೊಳಗಿನ ಸಸ್ಪೆನ್ಸ್ ಎನ್ನುತ್ತಿದೆ ಚಿತ್ರ ತಂಡ. ಅದರೆ ಅದನ್ನೇ ಯಾಕೆ ಟೈಟಲ್ ಆಗಿಸಿಕೊಂಡಿದ್ದು ಎನ್ನುವುದಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದು ಕಾರಣವಂತೆ.
ಹೌದು, ಈ ಚಿತ್ರ ಕನ್ನಡ, ತಮಿಳು, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಅಷ್ಟು ಭಾಷೆಗಳಿಗೂ ಕನೆಕ್ಟ್ ಆಗಲಿ ಅಂತಲೇ ಚಿತ್ರತಂಡ ಸಾಕಷ್ಟು ರಿಸರ್ಚ್ ಮಾಡಿ, ಆಲೋಚಿಸಿ, ಐರಾವನ್ ಎನ್ನುವ ಪದವನ್ನೆ, ಟೈಟಲ್ ಅಗಿಸಿಕೊಂಡಿದೆಯಂತೆ. ಅದೆನೇ ಇರಲಿ, ʼಐರಾವನ್ʼಮೂಲಕ ಈಗ ಜೆಕೆ ಬಹುಭಾಷೆಗಳಲ್ಲೂ ಹೀರೋ ಆಗಿ ಎಂಟ್ರಿಯಾಗುತ್ತಿರುವುದು ವಿಶೇಷ.
ಹಾಗಂತ ಜೆಕೆಗೆ ಬಹುಭಾಷೆಗಳ ಬಣ್ಣದ ಜಗತ್ತು ಹೊಸದಲ್ಲ. ಹಾಗೆ ನೋಡಿದರೆ, ನಟ ಕಾರ್ತಿಕ್ ಜಯರಾಂ ಅವರಿಗೆ ಕನ್ನಡಕ್ಕಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದ್ದೇ ಹಿಂದಿ ಕಿರುತೆರೆಯ ಮೂಲಕ. ” ಸೀ ಯಾ ಕೆ ರಾಮ್ʼ ಧಾರಾವಾಹಿ ದೊಡ್ಡ ಗೆಲುವು ಕಂಡ ನಂತರ ಜೆಕೆ, ಹಿಂದಿ ಕಿರುತೆರೆಯಲ್ಲಿ ಮನೆ ಮಾತಾದರು. ಆಗಲೇ ಕನ್ನಡದ ಸಿನಮಾ ಮಂದಿ ಜೆಕೆ ಅವರತ್ತ ತಿರುಗಿ ನೋಡಿದರು. ಹಾಗಂತ ಕನ್ನಡದ ಸಿನಿಮಾ ನಿರ್ಮಾಪಕರು ಅವರಿಗೆ ರೆಡ್ ಕಾರ್ಪೆಟ್ ಹಾಕಿ ಕರೆದರು ಅಂತಲ್ಲ. ಒಂದಷ್ಟು ಆವಕಾಶ ಬರುವಂತೆ ಅಯಿತು. ಅದರೂ ಸಕ್ಸಸ್ ಸಿನಿಮಾದಲ್ಲಿ ದೊಡ್ಡ ಸಕ್ಸಸ್ ಕಾಣದೆ ಒಂಥರ ನೋವಿನ ಭಾವದಲ್ಲಿದ್ದ ಜೆಕೆ ಈಗ ಗಾಯಗೊಂಡ ಹುಲಿಯಂತೆ ಘರ್ಜಿಸಲು ರೆಡಿ ಅಗಿದ್ದಾರೆ. ಸೋಮವಾರವಷ್ಟೇ ಲಾಂಚ್ ಅಗಿರುವ ಟೀಸರ್ ನೋಡಿದರೆ ಜೆಕೆ, ಕಿರುತೆರೆಯ ಹಾಗೆಯೇ ಸಿನಿಮಾದಲ್ಲೂ ದೊಡ್ಡ ಹವಾ ಸೃಷ್ಟಿಸುವುದು ಗ್ಯಾರಂಟಿ ಎನಿಸಿದೆ.
ಐರಾವನ್ ಟೀಸರ್ ಮೇಕಿಂಗ್ ನಲ್ಲಿ ಗ್ರಾಂಡ್ ಆಗಿದೆ. ಹಾಗೆಯೇ ಲುಕ್‌ನಲ್ಲಿ ಜಬರ್‌ದಸ್ತ್ ಆಗಿದೆ. ಜೆಕೆ ಡಿಫೆರೆಂಟ್ ಗೆಟಪ್‌ನಲ್ಲಿ ಅಬ್ಬರಿಸಿದ್ದಾರೆ. ಟೀಸರ್ ನಲ್ಲಿನ ಅವರ ಎಂಟ್ರಿಯೇ ಜೋರಾಗಿದೆ. ಕತೆ ಸಸ್ಪೆನ್ಸ್, ಥ್ರಿಲ್ಲರ್
ಎನ್ನುವುದನ್ನು ಟೀಸರ್ ಹೇಳುತ್ತದೆ. ಜೆಕೆ ರಗಡ್ ಲುಕ್ ನೋಡಿದರೆ, ಐರಾವನ್ ಜೆಕೆಗೆ ಬ್ರೇಕ್ ನೀಡುವುದು ಗ್ಯಾರಂಟಿ ಎನಿಸುತ್ತದೆ. ಸಿನಿಮಾ ಜತೆಗೆ ಟೀಸರ್ ಕುರಿತು ಮಾತನಾಡುವ ನಟ ಜೆಕೆ, ತಮ್ಮ ನೆಚ್ಚಿನ ನಟ ಸುದೀಪ್ ಅವರು ಟೀಸರ್ ಲಾಂಚ್ ಮಾಡಿದಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರದ ಬಗ್ಗೆ ಅತೀವ ವಿಶ್ವಾಸ ವ್ಯಕ್ತಪಡಿಸಿದರು.
” ಇದೊಂದು ಕಠಿಣ ಪ್ರಯತ್ನದ ಫಲ. ಸಾಕಷ್ಟು ಶ್ರಮ ವಹಿಸಿ ಈ ಸಿನಿಮಾ ಮಾಡಿದ್ದೇವೆ. ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ಟೀಮ್ ವರ್ಕ್ ಅತ್ಯಾದ್ಭುತವಾಗಿದೆ. ಅವರೆಲ್ಲರ ಶ್ರಮದಿಂದಲೇ ಸಿನಿಮಾ ರಿಚ್ ಅಗಿ ಬಂದಿದೆʼ ಎನ್ನುವ ಮೂಲಕ ಕುತೂಹಲ ಮೂಡಿಸಿದರು.
ನಿರಂತರ ಪ್ರೋಡಕ್ಷನ್ ಮೂಲಕ ನಿರ್ಮಾಣವಾದ ಸಿನಿಮಾ ಇದು. ಯುವ ನಿರ್ದೇಶಕ ರಾಮ್ ರಂಗ, ಕತೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಎಸ್. ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಇದೆ. ದೇವೇಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಕುಂಗ್ಪು ಚಂದ್ರು ಸಾಹಸವಿದೆ. ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್ ನೀಡಿರುವುದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲವಾಗಿದೆ.