ಇಂದ್ರಜಿತ್ ಚಿತ್ರಕ್ಕೆ ಸಮರ್ಥ ಸಂಗೀತ
ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಲಾವಿದನಿರಲಿ, ತಾಂತ್ರಿಕ ವರ್ಗದವರಿರಲಿ ನಾನು ಗುರುತಿಸಿಕೊಳ್ಳಬೇಕು, ಸಾಧಿಸಬೇಕು ಎಂಬ ಅಸೆ ಇದ್ದೇ ಇರುತ್ತೆ. ಕೆಲವರು ಆ ಆಸೆಯ ಬೆನ್ನತ್ತಿ ಹೋಗಿದ್ದಾರೆ, ಇನ್ನೂ ಕೆಲವರು ಹೋಗಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವರು ಗೆದ್ದಿದ್ದಾರೆ, ಕೆಲವರೂ ಗೆಲ್ಲಲಾಗದೆ ಸುಮ್ಮನಾಗಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಒಂದು ಜಾಗ ಮಾಡಿಕೊಂಡಿರುವ ಸಂಗೀತ ನಿರ್ದೇಶಕ ವೀರ್ ಸಮರ್ಥ್. ಹೌದು, ವೀರ್ಸಮರ್ಥ್ ಈಗಾಗಲೇ ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸೂಪರ್ ಹಿಟ್ ಸಾಂಗ್ ಕೊಟ್ಟಿದ್ದಾರೆ. ಅನೇಕ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರೀಗ ಬಾಲಿವುಡ್ಗೆ ಕಾಲಿಟ್ಟಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.
1998 ರಲ್ಲಿ ವೀರ್ ಗಾಯಕ ಸುರೇಶ್ ವಾಡ್ಕರ್ ಬಳಿ ಸಂಗೀತ ಕಲಿತರು. ಅದಕ್ಕೂ ಮೊದಲು ಬೀದರ್ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದರು. ಸುರೇಶ್ ವಾಡ್ಕರ್ ಬಳಿ ಆಡಿಷನ್ ಮೂಲಕ ಆಯ್ಕೆಯಾದರು. ಅವರ ಹಾಡು ಕೇಳಿದ ಅವರು, ಹಾಡು ಕಲಿಸಿದರು. ನಂತರ ಅಲ್ಲೇ ಕೆಲಸ ಶುರುಮಾಡಿದರು. 1998 ರಲ್ಲಿ ವೀರ್ ಅವರಿಗೆ ವಿಜಯಪ್ರಕಾಶ್ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್ ಬಳಿ ಐದು ವರ್ಷ ಜೊತೆಗಿದ್ದರು. ಆ ಬಳಿಕ ಹಿಂದಿಯಲ್ಲಿ ಹಿಟ್ ಎನಿಸಿಕೊಂಡ “ಕಭೀ ಖುಷ್ ಕಭೀ ಗಮ್” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್ ಶಾಂಡಿಲ್ಯ ಅವರ ಹಾಡೊಂದರಲ್ಲಿ ಕೋರಸ್ ಹಾಡುವ ಅವಕಾಶ ಗಿಟ್ಟಿಸಿಕೊಂಡು, ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್ ಹಾಕುವ ಅವಕಾಶವೂ ಅವರದಾಗಿತ್ತು
ವೀರ್ ಸಮರ್ಥ್ ಹಿಂದಿ ಸಿನಿಮಾಗೆ ಸಂಗೀತ ನೀಡಿದ್ದಾರೆಂಬುದೇ ವಿಶೇಷ. ಅದು “ಶಕೀಲಾ” ಸಿನಿಮಾಗೆ. ಶಕೀಲಾ ಅಂದಾಕ್ಷಣ, ಪಡ್ಡೆಗಳಿಗೆ ಬಿಡಿಸಿ ಹೇಳಬೇಕಿಲ್ಲ. ಯುವಕರೂ ಸೇರಿದಂತೆ ವಯಸ್ಕರನ್ನೂ ನಿದ್ದೆಗೆಡಿಸಿದ ಶಕೀಲಾ ಅವರ ಬಯೋಗ್ರಫಿ ಚಿತ್ರವೇ “ಶಕೀಲಾ”. ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶಕರು. ಈ ಚಿತ್ರವೀಗ ಡಿಸೆಂಬರ್ ೨೫ರ ಕ್ರಿಸ್ಮಸ್ಗೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಬಾಲಿವುಡ್ ಚಿತ್ರವೊಂದಕ್ಕೆ ಸಂಗೀತ ನೀಡಿರುವ ವೀರ್ಸಮರ್ಥ್, ತಮ್ಮ ಬಾಲಿವುಡ್ ಪಯಣ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.
ಓವರ್ ಟು ವೀರ್…
“ನನಗೆ ಬಾಲಿವುಡ್ ಹೊಸದೇನಲ್ಲ. ಹಾಗೆ ಹೇಳುವುದಾದರೆ, 1998 ರಲ್ಲಿ ನಾನು ಹೆಸರಾಂತ ಗಾಯಕ ಸುರೇಶ್ ವಾಡ್ಕರ್ ಬಳಿ ಸಂಗೀತ ಕಲಿಯೋಕೆ ಸೇರಿಕೊಂಡೆ. ಅದಕ್ಕೂ ಮೊದಲು ಬೀದರ್ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದೆ. ಸುರೇಶ್ ವಾಡೇಕರ್ ಬಳಿ ಆಡಿಷನ್ ಮೂಲಕ ಆಯ್ಕೆಯಾದೆ. ನನ್ನ ಹಾಡು ಕೇಳಿದ ಅವರು, ಕಲಿಸ್ತೀನಿ ಅಂದ್ರು. ಅಲ್ಲೇ ಕೆಲಸ ಶುರುಮಾಡಿದೆ. 1998 ರಲ್ಲಿ ವಿಜಯಪ್ರಕಾಶ್ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್ ಬಳಿ ಐದು ವರ್ಷ ಜೊತೆಗಿದ್ದು ಕೆಲಸವನ್ನೂ ಕಲಿತೆ. ಆ ಬಳಿಕ ಹಿಂದಿಯಲ್ಲಿ ಹಿಟ್ ಎನಿಸಿಕೊಂಡ “ಕಭೀ ಖುಷ್ ಕಭೀ ಗಮ್” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್ ಶಾಂಡಿಲ್ಯ ಅವರು, ಹಾಡೊಂದರಲ್ಲಿ ಕೋರಸ್ ಹಾಡುವ ಅವಕಾಶ ಕೊಟ್ಟರು. ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್ ಹಾಕುವ ಅವಕಾಶವೂ ನನ್ನದಾಗಿತ್ತು.
ಆ ಸಿನಿಮಾದಲ್ಲಿ ನನ್ನದೂ ಒಂದು ವಾಯ್ಸ್ ಇದೆ ಅನ್ನೋದೇ ಖುಷಿ. ಅದಾದ ಮೇಲೆ, ಹಿಂದಿಯ ಸುಮಾರು ಸಿನಿಮಾಗಳಲ್ಲಿ ಕೋರಸ್ ಹಾಡಿದ್ದೂ ಉಂಟು. ಅನೇಕ ಹಿಂದಿ ಆಲ್ಬಂಗಳಲ್ಲೂ ಕೆಲಸ ಮಾಡಿದ್ದೇನೆ. ನನ್ನ ಗುರುಗಳಾದ ರವೀಂದ್ರ ಜೈನ್ ಜೊತೆ ಸಾಕಷ್ಟು ಸ್ಟೇಜ್ ಶೋ ಕೊಟ್ಟಿದ್ದೂ ಇದೆ. ಇವೆಲ್ಲದರ ಜೊತೆಯಲ್ಲಿ ನಾನು ಭೀಮ್ಸೇನ್ ಜೋಶಿ ಅವರ ಬಳಿ ಕೆಲಸ ಮಾಡುವ ಅವಕಾಶವೂ ಪಡೆದುಕೊಂಡೆ. ದೊಡ್ಡ ಲೆಜೆಂಡರಿ ಜೊತೆ ಇದ್ದೆ ಅನ್ನೋದು ಹೆಮ್ಮೆಯ ವಿಷಯ. ಕ್ಲಾಸಿಕಲ್ ಮತ್ತು ಸಿನಿಮಾ ಈ ಎರಡೂ ಕಡೆ ಕೆಲಸ ಮಾಡಿದ ಅನುಭವ ಅನನ್ಯ. ಬಾಲಿವುಡ್ನಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಕಳೆದ ಐದಾರು ವರ್ಷಗಳಿಂದಲೂ ಇತ್ತು. ಅದಕ್ಕಾಗಿಯೇ ನಾನು ಮಹೇಶ್ ಭಟ್, ವಿಕ್ರಮ್ ಭಟ್, “ಹಮ್ ಆಪ್ಕೆ ಹೈ ಕೌನ್” ನಿರ್ದೇಶಕ ಸೂರಜ್ ಬರ್ಜಾತ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೂ ಆಗಿತ್ತು. ಆದರೆ, ಮಾತುಕತೆ ನಡೆದಿತ್ತಾದರೂ ಕೆಲ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆ ಪ್ರಯತ್ನದಲ್ಲಿದ್ದ ನನಗೆ “ಶಕೀಲಾ” ಅಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ” ಎಂದು ವಿವರ ಕೊಡುತ್ತಾರೆ ವೀರ್ ಸಮರ್ಥ್.
ಮಜಾ ಕೊಟ್ಟ ಅವಕಾಶ..
ಈ ಪ್ರಯತ್ನದ ನಡುವೆಯೇ ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್” ಚಿತ್ರಕ್ಕೆ ಸಂಗೀತ ನೀಡಿದ್ದೆ. ಅದರಲ್ಲೊಂದು ಅರೇಬಿಕ್ ಶೈಲಿಯ ಸಂಗೀತ ಸ್ಪರ್ಶಿಸಿ ಹಾಡೊಂದನ್ನು ಮಾಡಿದ್ದೆ. ಆ ಹಾಡು ಹಿಟ್ ಆಗಿತ್ತು. ಜೊತೆಗೆ “ಮಜಾ ಟಾಕೀಸ್” ವೇದಿಕೆಯಲ್ಲಿ ಪ್ರಚಾರಕ್ಕಾಗಿ ಹೋಗಿದ್ದಾಗ, ಆ ಶೋನಲ್ಲಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ವೇದಿಕೆ ಮೇಲೇರಿ ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ, ಸಾಂಗ್ ಕುರಿತು ಮಾತಾಡಿದ್ದರು. ಚೆನ್ನಾಗಿ ಕಂಪೋಸ್ ಮಾಡಿದ್ದೀರಿ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ನನ್ನ ಫೋನ್ ನಂಬರ್ ಪಡೆದಿದ್ದರು. ಕೆಲ ತಿಂಗಳ ಬಳಿಕ ನಿರ್ದೇಶಕ ಮೋಹನ್ಗೆ ಕಾಲ್ ಮಾಡಿದ ಇಂದ್ರಜಿತ್ ಲಂಕೇಶ್ ಅವರು, ವೀರ್ಸಮರ್ಥ್ ಅವರಿಗೆ ಕಾಲ್ ಮಾಡಲು ಹೇಳು ಎಂದಿದ್ದರು. ಆಗ ಮೋಹನ್ ಅವರ “ಡಬಲ್ ಎಂಜಿನ್” ಚಿತ್ರಕ್ಕೆ ನಾನು ಸಂಗೀತ ನೀಡುತ್ತಿದ್ದೆ. ಅಲ್ಲೇ ಜೊತೆಗಿದ್ದ ಮೋಹನ್, ವಿಷಯ ತಿಳಿಸಿದರು.
ಇಂದ್ರಜಿತ್ ಸ್ಟೈಲಿಶ್ ಸಿನ್ಮಾ ಮೇಕರ್
ನಾನು ಸಂಜೆ ಇಂದ್ರಜಿತ್ ಅವರಿಗೆ ಕಾಲ್ ಮಾಡಿ ಮಾತಾಡಿದೆ. ಇವತ್ತು ಸಿಕ್ಕು ಮಾತಾಡೋಣ ಅಂತ ಕೋರಮಂಗಲ ಬಳಿಯ ಹೋಟೇಲ್ವೊಂದಕ್ಕೆ ಆಹ್ವಾನಿಸಿದ್ದರು. ಹೊಸ ಕನ್ನಡ ಸಿನಿಮಾ ಮಾಡುತ್ತಿರಬಹುದೆಂದು ಭಾವಿಸಿ ಹೋದೆ. ಹೋದವನಿಗೆ ಒಂದು ಸರ್ಪ್ರೈಸ್ ಕಾದಿತ್ತು. ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಅದು “ಶಕೀಲಾ” ಬಯೋಗ್ರಫಿ. ನೀವೇ ಸಂಗೀತ ಕೊಡಬೇಕು ಅಂದರು. ನನ್ನೊಳಗಿದ್ದ ಆಸೆಗೂ ಜೀವ ಬಂತು. ಇಂದ್ರಜಿತ್ ಅವರ ಜೊತೆ ಕೆಲಸ ಮಾಡಿದೆ. ಅವರೊಬ್ಬ ಸ್ಟೈಲಿಶ್ ಸಿನಿಮಾ ಮೇಕರ್ ಅಷ್ಟೇ ಅಲ್ಲ, ಅವರೊಳಗೊಬ್ಬ ಸಂಗೀತ ಪ್ರೇಮಿಯೂ ಇದ್ದಾರೆ. ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅವರು, ನನ್ನಿಂದ ಕೆಲಸ ತೆಗೆಸಿದರು. ಒಂದು ಅರೇಬಿಕ್ ಸಾಂಗ್ ಬಂತು. ಮೆಲೋಡಿ ಹಾಡು ಕೊಟ್ಟೆ. ಮತ್ತೊಂದು ಆಪ್ಷನ್ ಇಲ್ಲದೆ ಓಕೆ ಮಾಡಿದರು. ಅವರ ಟೇಸ್ಟ್ಗೆ, ಸಿನಿಮಾ ಕಥೆಯ ಕಲ್ಪನೆಗೆ ಸಂಗೀತ ಮಾಡಿದೆ. ಒಳ್ಳೆಯ ಹಾಡುಗಳು ಮೂಡಿಬಂದವು. ಹಿನ್ನೆಲೆ ಸಂಗೀತ ಕೂಡ ಅಷ್ಟೇ ಅದ್ಭುತವಾಗಿ ಮೂಡಲು ಕಾರಣ, ಮತ್ತದೇ ಇಂದ್ರಜಿತ್ ಲಂಕೇಶ್. ಚಿತ್ರದಲ್ಲಿ ಮೀಟ್ ಬ್ರದರ್ಸ್ ಕೂಡ ಒಂದು ಪ್ರಮೋಷನಲ್ ಸಾಂಗ್ ಮಾಡಿದ್ದಾರೆ.
ಬಾಲಿವುಡ್ ಮಂದಿಯ ಮೆಚ್ಚುಗೆ ಸುಲಭವಲ್ಲ
ಸದ್ಯ ಈಗ ಸಿನಿಮಾದ ಹಾಡುಗಳ ತುಣುಕು ರಿಲೀಸ್ ಆಗಿದೆ. ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ. ಒಬ್ಬ ಸಂಗೀತ ನಿರ್ದೇಶಕನಿಗೆ ತಾನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಕ್ಕರೆ ಅದು ದೊಡ್ಡ ಪ್ರಶಸ್ತಿ ಸಿಕ್ಕಂತೆ. ಅಲ್ಲದೆ, ಬಾಲಿವುಡ್ ಮಂದಿಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ. ಹಿಂದಿಯಲ್ಲಿ ವಿಶಾಲ್ ಮಿಶ್ರ ನನ್ನ ಸಾಂಗ್ ಹಾಡಿದ್ದು ವಿಶೇಷತೆಗಳಲ್ಲೊಂದು. ವಿಶಾಲ್ ಮಿಶ್ರ ಸಲ್ಮಾನ್ ಖಾನ್ ಅವರ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ, ಹಾಡಿದ್ದಾರೆ. ನನ್ನ ಹಾಡನ್ನು ಯಾರಿಂದ ಹಾಡಿಸಬೇಕು ಎಂಬ ಯೋಚನೆ ಬಂತು. ಅದರಲ್ಲೂ ಕುಮಾರ್ ಅವರ ಎಲ್ಲಾ ಹಾಡಿಗೂ ಸಾಹಿತ್ಯವಿತ್ತು. ಕುಮಾರ್ ಅವರು ಬಾಲಿವುಡ್ನ ಲೀಡಿಂಗ್ ಗೀತ ಸಾಹಿತಿಯರ ಪೈಕಿ ಟಾಪ್ ಫೈವ್ನಲ್ಲಿದ್ದಾರೆ.
ಅವರ ಒಳ್ಳೆಯ ಸಾಹಿತ್ಯಕ್ಕೆ ವಿಶಾಲ್ ಮಿಶ್ರ ಅವರ ವಾಯ್ಸ್ ಇದ್ದರೆ ಚೆನ್ನಾಗಿರುತ್ತೆ ಅಂತ ಯೋಚಿಸಿ ಅವರನ್ನು ಫೋನ್ನಲ್ಲಿ ಮಾತಾಡಿಸಿದೆ. ಸಾಂಗ್ ಹಾಡಬೇಕು ಅಂದಾಗ, ಟ್ಯೂನ್ ಕಳಿಸಿ ಅಂದ್ರು. ಕೇಳಿದ ಕೂಡಲೇ ಫೋನ್ ಮಾಡಿ, ಸಾಂಗ್ ಕಂಪೋಸ್ ಚೆನ್ನಾಗಿದೆ ಹಾಡ್ತೀನಿ ಅಂದ್ರು. ಆದರೆ, ತುಂಬಾ ದುಬಾರಿನಾ ಎಂಬ ಕಾರಣಕ್ಕೆ ಪೇಮೆಂಟ್ ಹೇಳಿ ಸರ್ ಅಂದೆ, ನೀವು ಎಷ್ಟಾದರೂ ಕೊಡಿ ತಕರಾರು ಇಲ್ಲ. ಸಾಂಗ್ ಚೆನ್ನಾಗಿದೆ ಹಾಡಬೇಕಷ್ಟೇ ಅಂದ್ರು. ಆಗ ಮುಂಬೈಗೆ ಹೋಗಿ “ಓ ಲಮ್ಹಾ..” ಸಾಂಗ್ ಹಾಡಿಸಿದೆ. ಹಾಡು ಹಾಡಿದ ಅವರು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಇಂದ್ರಜಿತ್ ಲಂಕೇಶ್ ಅವರೂ ನನ್ನ ಕೆಲಸ ಕೊಂಡಾಡಿ ತಬ್ಬಿಕೊಂಡರು.
ಬಾಲಿವುಡ್ ಸಿನಿಮಾ ಕೆಲಸ ತೃಪ್ತಿ ಕೊಡ್ತು ಎಂಬ ಖುಷಿ ನನ್ನದಾಯ್ತು. ಇನ್ನು, ಕನ್ನಡದಲ್ಲಿ “ಹವಾಮಾನಕೆ ಏನಾಗಿದೆ…” ಎಂಬ ಅದೇ ರಾಗಕ್ಕೆ ಜಯಂತ್ ಕಾಯ್ಕಿಣಿ ಅವರು ಹಾಡು ಬರೆದಿದ್ದಾರೆ. ಆ ಹಾಡನ್ನು ಕೇಶವ ಕುಮಾರ್ ಹಾಡಿದ್ದಾರೆ. ಕನ್ನಡದ ಈ ಹುಡುಗ ಮುಂಬೈನಲ್ಲಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಹೇಳುವ ವೀರ್ ಸಮರ್ಥ್, “ಶಕೀಲಾʼ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಸಿನಿಮಾ ಅದು ಅನ್ನೋದು ಅವರ ಮಾತು.