ಲವ್ ಮೂಡಲ್ಲಿ ಶಶಿಕುಮಾರ್  ಪುತ್ರ! ಓ ಮೈ ಲವ್ ಅಂತಾರೆ ಅಕ್ಷಿತ್

ಸ್ಮೈಲ್ ಶ್ರೀನುಗೆ ಹೊಸ ಪ್ರೇಮ ಭಾಷ್ಯ ಬರೆಯೋ ಉತ್ಸಾಹ…

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ ಇತ್ತೀಚೆಗಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ‘ಓ ಮೈ ಲವ್’ ಎಂಬ ಹೆಸರಿಡಲಾಗಿದೆ.

ಸ್ಮೈಲ್ ಶ್ರೀನು, ನಿರ್ದೇಶಕ

ಈ ಚಿತ್ರಕ್ಕೆ  ಸ್ಮೈಲ್ ಶ್ರೀನು ನಿರ್ದೇಶಕರು. ಈ ಹಿಂದೆ ” ತೂಫಾನ್”, “ಬಳ್ಳಾರಿ ದರ್ಬಾರ್” ಹಾಗೂ “18 ಟು 25” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.

ಇದೊಂದು ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತ ಅಂಶಗಳು ಇಲ್ಲಿರಲಿವೆ.

ಇನ್ನು ನಿರ್ದೇಶಕ ಸ್ಮೈಲ್‍ ಶ್ರೀನು  ಈ ಬಾರಿ ರೆಗ್ಯುಲರ್ ಪ್ಯಾಟ್ರನ್ ಬಿಟ್ಟು ಬೇರೆ ಥರದ ನಿರೂಪಣೆಯೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ಜಿಸಿಬಿ ರಾಮಾಂಜಿನಿ ಅವರು ಕಥೆ ಬರೆದು ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ನಿರ್ದೇಶಕ ಶ್ರೀನು, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ಸ್ ಮತ್ತು ಹಾಸ್ಯ ಮಿಶ್ರಣಗೊಂಡಿದೆ.

ಒಂದೊಳ್ಳೆಯ ಲವ್ ಸ್ಟೋರಿ ಇದಾಗಿದ್ದು, ಈ ಚಿತ್ರದ ಮೂಲಕ ಹೊಸ ಪ್ರೇಮ ಭಾಷ್ಯ ಬರೆಯುವ ಉತ್ಸಾಹದಲ್ಲಿದ್ದಾರೆ. ಇದೊಂದು ಬಿಗ್‍ ಬಜೆಟ್ ಸಿನಿಮಾ. ಎಲ್ಲಾ ವಿಷಯದಲ್ಲೂ ಅದ್ಧೂರಿತನ ಇರಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ  ನಟಿಸಲಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತವಿದೆ.

ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ  ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Related Posts

error: Content is protected !!