ಮೂರು ಅವತಾರದಲ್ಲಿ ಎದುರಾಳಿ ಸಂಹಾರ
ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಚಿತ್ರ “ವೀರಂ” ಇತ್ತೀಚೆಗಷ್ಟೇ ಶುರುವಾಗಿದೆ. ಅದಕ್ಕೂ ಮುನ್ನ ಶುರುವಾಗಿದ್ದ ಅವರ ಹೊಸ ಚಿತ್ರ “ಅಬ್ಬರ” ಈಗ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಶೇ.೭೦ರಷ್ಟು ಚಿತ್ರೀಕರಣ ಮುಗಿಸಿರುವ “ಅಬ್ಬರ” ಇನ್ನುಳಿದ ಚಿತ್ರೀಕರಣ ಪೂರೈಸಿದರೆ ಪ್ರೇಕ್ಷಕರ ಮುಂದೆ ಬರಲು ರೆಡಿ. ಇತ್ತೀಚೆಗೆ ಚಿತ್ರತಂಡದ ಜೊತೆ ಆಗಮಿಸಿದ್ದ ನಿರ್ದೇಶಕ ರಾಮ್ನಾರಾಯಣ್, ತಮ್ಮ “ಅಬ್ಬರ” ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು ಹೀಗೆ.
“ನಾನು ಈಗಾಗಾಲೇ ದೇವರಾಜ್ ಸರ್ ಜೊತೆ, ಪ್ರಣವ್ ಅವರ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಪ್ರಜ್ವಲ್ ದೇವರಾಜ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅದು “ಅಬ್ಬರ” ಮೂಲಕ ಸಿಕ್ಕಿದೆ. ಈ ಸಿನಿಮಾದ ಕಥೆ ಹೇಳಬೇಕು ಅಂತ ಫೋನ್ ಮಾಡಿದಾಗ, ಪ್ರಜ್ವಲ್ ಅವರು, ಒಪ್ಪಿ, ಕಥೆ ಹೇಳೋಕೆ ಕರೆದರು. ಹೋಗಿ ಕಥೆ ಹೇಳಿದೆ. ನಾನು ಇಷ್ಟು ವರ್ಷಗಳ ಅನುಭವದಲ್ಲಿ ಸಾಕಷ್ಟು ಹೀರೋಗಳಿಗೆ ಕಥೆ ಹೇಳಿದ್ದೇನೆ. ಆದರೆ, ಪ್ರಜ್ವಲ್ ಅವರಿಗೆ ಹೇಳಿದ ಅನುಭವ ಮರೆಯಲಾರೆ. ಯಾಕೆಂದರೆ, ಅವರು ತುಂಬಾ ಆಸಕ್ತಿಯಿಂದ, ಶ್ರದ್ಧೆಯಿಂದ ಕಥೆ ಕೇಳಿದ್ದಲ್ಲದೆ, ಒಮ್ಮೆಲೇ ಈ ಸಿನಿಮಾ ಮಾಡೋಣ ಎಂದು ಗ್ರೀನ್ಸಿಗ್ನಲ್ ಕೊಟ್ಟರು. ಹಾಗಾಗಿ ಈ “ಅಬ್ಬರ” ಶುರುವಾಯ್ತು.
ಅಪ್ಪ ಮಗನ ಬಾಂಧವ್ಯ ಹೈಲೆಟ್
ಇಲ್ಲಿ ಮೂವರು ನಾಯಕಿಯರು ಇದ್ದಾರೆ. ಕಥೆಯಲ್ಲಿ ಸಸ್ಪೆನ್ಸ್ ಇದೆ. ರಾಜ್ಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಾಕರ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರಿಗಿಲ್ಲಿ ಮೂರು ವಿಭಿನ್ನ ಶೇಡ್ ಇರುವ ಪಾತ್ರವಿದೆ. ಶೂಟಿಂಗ್ ವೇಳೆ ಒಂದೇ ದಿನ ಮೂರು ಶೇಡ್ ಇರುವ ಪಾತ್ರ ಮಾಡಿದ್ದು ವಿಶೇಷ. ಒಂದು ಶಾಟ್ ಆದ ಕೂಡಲೇ, ಇನ್ನೊಂದು ಶೇಡ್ ಪಾತ್ರಕ್ಕೆ ರೆಡಿಯಾಗಿ ಬರುತ್ತಿದ್ದರು. ಎಲ್ಲೂ ಸಮಯ ತೆಗೆದುಕೊಳ್ಳದೆ, ತುಂಬಾ ಸ್ಪೀಡ್ ಆಗಿಯೇ ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರ ಶ್ರದ್ಧೆ ನನಗೆ ಇಷ್ಟವಾಯಿತು. ಚೆನ್ನೈ ಮೂಲದ ಜಿ.ಕೆ.ಗಣೇಶ್ ಕ್ಯಾಮೆರಾ ಹಿಡಿದಿದ್ದಾರೆ.
ಹೈವೋಲ್ಟೇಜ್ ಸ್ಟಂಟ್ಸ್
ಚಾಲೆಂಜಿಂಗ್ ಸೀನ್ಗಳನ್ನು ತುಂಬಾನೇ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಎಂದಿನಂತೆ ನನ್ನ ಜೊತೆ ವೆಂಕಟೇಶ್ ಯುಡಿವಿ ಸಂಕಲನ ಮಾಡಿದ್ದಾರೆ. ರವಿಬಸ್ರೂರು ಅವರ ಅದ್ಭುತ ಸಂಗೀತವಿದೆ. ಯೋಗರಾಜ್ಭಟ್, ವಿಜಯ್ ಭರಮಸಾಗರ ಸಾಹಿತ್ಯವಿದೆ. ನಾನೂ ಒಂದು ಹಾಡು ಬರೆದಿದ್ದೇನೆ. ಚಿತ್ರದಲ್ಲಿ ಸ್ಟಂಟ್ಸ್ ಕೂಡ ಹೈಲೈಟ್. ವಿನೋದ್, ಪಳನಿರಾಜ್, ಡಿಫರೆಂಟ್ ಡ್ಯಾನಿ ಮತ್ತು ಮಾಸ್ಮಾದ ಒಂದೊಂದು ಫೈಟ್ ಸಂಯೋಜಿಸಿದ್ದಾರೆ. ಸದ್ಯಕ್ಕೆ ಹಿನ್ನೆಲೆ ಸಂಗೀತ ಬಾಕಿ ಇದೆ. ಇಷ್ಟೊತ್ತಿಗಾಗಲೇ ಚಿತ್ರೀಕರಣ ಮುಗಿಯಬೇಕಿತ್ತು. ಕೊರೊನಾ ಸಮಸ್ಯೆಯಿಂದ ತಡವಾಗಿದೆ” ಎಂದು ವಿವರ ಕೊಟ್ಟ ರಾಮ್ನಾರಾಯಣ್, ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ದುಷ್ಟನ ಸಂಹಾರ ಮಾಡಲು ಭಗವಂತ ಹೇಗೆ ಹಲವು ಅವತಾರ ಎತ್ತುತ್ತಾನೋ, ಹಾಗೆ ನಮ್ಮ ಚಿತ್ರದ ಹೀರೋ ಹಲವು ಅವತಾರಗಳನ್ನು ತಾಳಿ ಎದುರಾಳಿಯನ್ನು ಸಂಹರಿಸುತ್ತಾನೆ. ತಂದೆ ಮೇಲೆ ಮಗನಿಗಿರುವ ಗೌರವ, ಪ್ರೀತಿಸಿದ ಹುಡುಗಿಯನ್ನೇ ತನ್ನ ಪ್ರತೀಕಾರಕ್ಕೆ ಬಳಸಿಕೊಳ್ಳುವಂತಹ ಸಂದರ್ಭ ಬಂದಾಗ ಮಾಡುವ ಕೆಲಸ, ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಮಾಡುವಂತಹ ತ್ಯಾಗ, ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ನಿಭಾಹಿಸುವ ಕರ್ತವ್ಯದಲ್ಲಿ ಹೀರೋ ಹೇಗೆಲ್ಲಾ ವರ್ತಿಸುತ್ತಾನೆ ಅನ್ನೋದು ಕಥೆ ಎನ್ನುತ್ತಾರೆ ಅವರು.
ಕಥೆಯಲ್ಲೊಂದು ವಿಶೇಷತೆ ಇದೆ
ಪ್ರಜ್ವಲ್ ದೇವರಾಜ್ ಅವರಿಗೆ ಈ ಚಿತ್ರ ಮಾಡಬೇಕೆನಿಸಿದ್ದು, ಕಥೆ ಮತ್ತು ಪಾತ್ರವಂತೆ. ಅದರ ಜೊತೆಗೆ ನಿರ್ದೇಶಕ ರಾಮ್ನಾರಾಯಣ್ ಅವರು ಕಮರ್ಷಿಯಲ್ ನಿರ್ದೇಶಕರು ಎಂಬ ಕಾರಣವೂ ಕೂಡ. “ಕಥೆ ಕೇಳಿದಾಗ, ಅದರಲ್ಲೊಂದು ವಿಶೇಷತೆ ಇತ್ತು. ಮೂರು ಶೇಡ್ ಪಾತ್ರ ಇದ್ದುದರಿಂದ ನನಗೂ ಚಾಲೆಂಜ್ ಎನಿಸಿತ್ತು. ರಾಮ್ನಾರಾಯನ್ ಹೆಣೆದ ಕಥೆಯೊಳಗೆ ಗಟ್ಟಿತನವಿತ್ತು. ಹಾಗಾಗಿ ಅವರೊಂದಿಗೆ ಕೆಲಸ ಮಾಡಲೇಬೇಕು ಎನಿಸಿ ಈ ಚಿತ್ರ ಒಪ್ಪಿದೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿಯೇ ಸಿನಿಮಾ ಮಾಡಿದ್ದಾರೆ. ರಾಮ್ನಾರಾಯಣ್ ಒಮ್ಮ ಕಮರ್ಷಿಯಲ್ ನಿರ್ದೇಶಕರ ಜೊತೆಗೆ ಒಳ್ಳೆಯ ಮನುಷ್ಯ. ಹಾಗಾಗಿಯೇ ಈ ಚಿತ್ರ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ನಾನು ಮೂರು ವಿಭಿನ್ನ ಶೇಡ್ ಇರುವ ಪಾತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದೇನೋ ಗೊತ್ತಿಲ್ಲ. ಆದರೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಇನ್ನು, ನಿರ್ಮಾಪಕ ಬಸವರಾಜ್ ಅವರು ಸಾಕಷ್ಟು ಖರ್ಚು ಮಾಡಿದ್ದಾರೆ. “ಅಬ್ಬರ” ಅಂದಾಕ್ಷಣ, ಎಲ್ಲವೂ ಅಬ್ಬರವಾಗಿರಬೇಕು. ಅದು ತೆರೆಯ ಮೇಲೆ ನೋಡಿದರೆ, ಅಷ್ಟೊಂದು ಅಬ್ಬರ ಅಂತ ಗೊತ್ತಾಗುತ್ತೆ. ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಕೊಟ್ಟಿದ್ದಾರೆ. ಸಿನಿಮಾ ಅಬ್ಬರವಾಗಿದೆʼ ಎನ್ನುತ್ತಾರೆ ಪ್ರಜ್ವಲ್ ದೇವರಾಜ್.
ಮೂವರ ಬೆಡಗಿಯರ ಜೊತೆ ಡಿಂಗು ಡಾಂಗು
ನಾಯಕಿ ನಿಮಿಕಾ ರತ್ನಾಕರ್ ಅವರಿಗೆ ಇಲ್ಲಿ ಒಂದು ರೀತಿಯ ಬಜಾರಿ ಪಾತ್ರವಂತೆ. ಪ್ರಜ್ವಲ್ ಅವರ ಜೊತೆ ಕೆಲಸ ಮಾಡಿದ್ದು ಅವರಿಗೆ ಮರೆಯಲಾರದ ಅನುಭವವಂತೆ. ತುಂಬಾನೇ ಕಂಫರ್ಟಬಲ್ ಟೀಮ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ” ಎಂಬುದು ನಿಮಿಕಾ ಮಾತು. ಇನ್ನು, ರಾಜ್ಶ್ರೀ ಪೊನ್ನಪ್ಪ ಅವರು ಇಷ್ಟು ದಿನ ಮುಂಬೈನ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ, ಕನ್ನಡದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವ ಅವರು, “ಅಬ್ಬರ” ಮೂಲಕ ಎಂಟ್ರಿಯಾಗಿದ್ದೇನೆ. ನಾನಿಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಸಲ ಪ್ರಜ್ವಲ್ ಸರ್ ಜೊತೆ ಕೆಲಸ ಮಾಡಿದ್ದೇನೆ. ಪಾತ್ರದ ಬಗ್ಗೆ ಹೇಳುವುದಾದರೆ, ಅದೊಂದು ಸಿಂಪಲ್ ಹುಡುಗಿಯ ಪಾತ್ರ. ತುಂಬಾನೇ ಮುಗ್ಧತೆ ಇರುವಂಥದ್ದು. ನಿರ್ದೇಶಕ ರಾಮ್ ನಾರಾಯಣ್ ಸರ್, ನನ್ನ ನಂಬಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆಯೂ ಇದೆ. ಇನ್ನು, ನಿರ್ಮಾಪಕ ಬಸವರಾಜ್ ಅವರು, ಯಾವುದಕ್ಕೂ ಕಡಿಮೆ ಮಾಡದೆ, ಅದ್ಧೂರಿಯಾಗಿಯೇ ಸಿನಿಮಾ ಮಾಡಿದ್ದಾರೆ ಎಂದರು ರಾಜ್ಶ್ರೀ ಪೊನ್ನಪ್ಪ. ಲೇಖಾಚಂದ್ರ ಅವರಿಲ್ಲಿ ಡಾಕ್ಟರ್ ಪಾತ್ರ ಮಾಡಿದ್ದು, ಅವರಿಗೇ ಇಲ್ಲೊಂದು ಖಾಯಿಲೆ ಇರುವ ಪಾತ್ರ ಕೊಟ್ಟಿದ್ದಾರಂತೆ. ಅದು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಲೇಖಾಚಂದ್ರ, ಪ್ರಜ್ವಲ್ ಜೊತೆ ರವಿಶಂಕರ್ ಕಾಂಬಿನೇಷನ್ನಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆ ಎನಿಸಿದೆ ಎನ್ನುತ್ತಾರೆ ಅವರು.
ಗೆಳೆಯನಿಗೆ ಮಾಡಿದ ಚಿತ್ರ
ನಿರ್ಮಾಪಕ ಬಸವರಾಜ್ ಮಂಚಯ್ಯ (ಹಿತ್ತಲಪುರ) ಅವರು ಈ ಹಿಂದೆ “ಬಿ೩” ಸಿನಿಮಾ ಮಾಡಿದ್ದರು. ನಿರ್ದೇಶಕ ರಾಮ್ನಾರಾಯಣ್ ಮತ್ತು ನಿರ್ಮಾಪಕ ಬಸವರಾಜ್ ಕಳೆದ ಹತ್ತು ವರ್ಷಗಳ ಗೆಳೆಯರಂತೆ. ಹತ್ತು ವರ್ಷದ ಹಿಂದೆ ಒಂದು ಸಿನಿಮಾ ಮಾಡೋಣ ಅಂತ ನಿರ್ಮಾಪಕರು ಹೇಳಿದ್ದರಂತೆ. ಆದರೆ, ಕಾಲ ಕೂಡಿ ಬಂದಿರಲಿಲ್ಲವಂತೆ. ಈಗ “ಅಬ್ಬರ” ಮೂಲಕ ಅದು ಸಾಧ್ಯವಾಗಿದೆ. ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿ ನನಗಿದೆ” ಎನ್ನುತ್ತಾರೆ ಬಸವರಾಜ್ ಮಂಚಯ್ಯ.