ನಾಯಿ ಬೊಗಳಿದರೆ ದೇವಲೋಕ ಹಾಳಾಗದು- ನಟಿ ಸುಮಲತಾ ಕೆಂಡಾಮಂಡಲ

ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಬೇಡಿ ಎಂದು ರಂಗರಾಜುಗೆ ಖಡಕ್ ವಾರ್ನಿಂಗ್ ಕೊಟ್ಟ ಸಂಸದೆ

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಹೇಳಿಕೆ ವಿರುದ್ಧ ಇಡೀ ಸ್ಯಾಂಡಲ್ ವುಡ್ ರೊಚ್ಚಿಗೆದ್ದಿದೆ. ವಿಜಯ್ ರಂಗರಾಜು ವಿರುದ್ಧ ಶನಿವಾರ ನಟ ಕಿಚ್ಚ ಸುದೀಪ್, ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್ ಕಿಡಿಕಾರಿ ,ಖಡಕ್ ವಾರ್ನಿಂಗ್ ನೀಡಿದ ಬೆನ್ನಲೇ ಭಾನುವಾರ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಕಟುವಾದ ಮಾತುಗಳ ಮೂಲಕ ರಂಗರಾಜು ಅವರನ್ನು ತರಾಟಗೆ ತೆಗೆದುಕೊಂಡಿದ್ದಾರೆ.ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ ಅಂತ ಎಚ್ಚರಿಸಿದ್ದಾರೆ‌. ‘ಸಿನಿ ಲಹರಿ’ ಗೆ ಲಭ್ಯವಾದ ಅವರ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ.

” ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ.
ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು. ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೆ ಅದಕ್ಕೆ ಸಾಕ್ಷಿ.

ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು!

ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ.

ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯು ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ.

ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು.
ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು”
ಸುಮಲತಾ ಅಂಬರೀಶ್, ಸಂಸದೆ


ಈ ಹೇಳಿಕೆಯ ಮೂಲಕ ವಿಷ್ಣು ವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸುನ್ನು ಸ್ಮರಿಸಿಕೊಂಡಿರುವ ಸುಮಲತಾ ಅಂಬರೀಶ್ ಅವರು, ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಇಂತಹ ಪ್ರಯತ್ನ ಹೇಡಿತನದಿಂದ ಕೂಡಿದ್ದು ಅಂತ ರಂಗರಾಜು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

Related Posts

error: Content is protected !!