ಖ್ಯಾತ ಛಾಯಾಗ್ರಾಹಕ ಮಹೇನ್ ಸಿಂಹ ಬರೀತಾರೆ…..

ಮಹೇನ್ ಸಿಂಹ, ಕನ್ನಡದ ಚಿತ್ರರಂಗಕ್ಕೆ‌ಚಿರ ಪರಿಚಿತ ಹೆಸರು.‌ಕನ್ನಡಕ್ಕೆ ಮಾತ್ರವಲ್ಲ, ಬಾಲಿವುಡ್ ನಲ್ಲಿ‌ ಮಿಂಚುತ್ತಿರುವ ಹಲವು ಸ್ಟಾರ್ ಗಳು ಮೊದಲು ಫೋಟೋ ಶೂಟ್ ಮಾಡಿಸಿಕೊಂಡಿದ್ದೇ ಮಹೇನ್ ಸಿಂಹ ಅವರ ಕ್ಯಾಮೆರಾ ಕಣ್ಣಲ್ಲಿ. ಒಂದು ಕಾಲಕ್ಕೆ ಸ್ಟಿಲ್ ಫೋಟೋ ಶೂಟ್ ನಲ್ಲಿಯೇ ಹೆಸರು ಮಾಡಿದವರು. ಈಗ ಸಿನಿಮಾ‌ ಛಾಯಾಗ್ರಹಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಸೂರಿ ನಿರ್ದೇಶನ ದ ‘ಟಗರು ‘ಚಿತ್ರ. ಅಲ್ಲಿಂದೀಗ ಸಿನಿಮಾ ಛಾಯಾಗ್ರಹಣ ದಲ್ಲೇ ಹೆಚ್ಚು ಗಮನ ಹರಿಸಿರುವ ಮಹೇನ್, ಸದ್ಯಕ್ಕೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅದರ ಶೂಟಿಂಗ್ ಸೆಟ್ ನ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕೆಳಗಿನದು ಅವರದೇ ಬರಹ‌. ಸಿನಿ ಲಹರಿ ಪ್ರಕಟಿಸಲು ಅಧಿಕೃತ ಒಪ್ಪಿಗೆ ‌ನೀಡಿದ್ದಾರೆ. ಗೆಳೆತನದೊಂದಿಗೆ ಇನ್ನು ಮುಂದೆ ಇಂತಹ ಸಂಗತಿಗಳನ್ನು ಮೊದಲು‌’ಸಿನಿ ಲಹರಿ’ ಯಲ್ಲಿ ಹಂಚಿಕೊಳ್ಳಲಿದ್ದಾರೆ. ಸಿನಿ ಲಹರಿ ಅವರಿಗೆ ಅಭಾರಿಯಾಗಿರಲಿದೆ.

…………………………………

ಪ್ರೇಮ್ ಎಂಬ ಬತ್ತದ ಉತ್ಸಾಹದ ಜತೆಗೆ….

“ಏ ತೆಗೀರಿ…ಇದನ್ನ ತೆಗ್ಯಾಕ್ಕೆ ಇಲ್ಲಿಗ್ ಬರ್ಬೇಕಿತ್ತಾ ನಾನು? ಬೇರೆ ಕೊಡಿ…ಇದು ಚೆನ್ನಾಗಿಲ್ಲ..ಆಗಲೇ ಕೊಟ್ಟಿದ್ರಲ್ಲಾ ಅಂತದ್ದು ಚೆನ್ನಾಗಿರೋ ಫ್ರೇಂ ಕೊಡಿ” ಅಂತ ಸಣ್ಣ ಹುಸಿ ಮುನಿಸು ತೋರಿಸಿಕೊಂಡು…”ಟೀ ಕೊಡ್ರೋ ಟೈಗರ್ಗೆ” ಅಂತ ಪಕ್ಕಕ್ಕೆ ಹೋಗೋರು ಪ್ರೇಂ.

ಯಾವುದೇ ಫ್ರೇಂ ಸಮಾಧಾನ ಆಗೋ ವರೆಗೆ ಒಪ್ಪೋ ಮಾತೇ ಇಲ್ಲ. ನಾವು ಶೂಟ್ ಮಾಡ್ತಿರೋ ಹಾಡಿನ ಪ್ರತಿ ಸೆಕೆಂಡ್ ಕೂಡ ಅವರ ಮನಸಲ್ಲಿ ಇರುತ್ತೆ.ಎಲ್ಲಿ ಎಷ್ಟು ಲಿರಿಕ್ಸ್ ಇದೆ…ಎಲ್ಲಿ ಎಷ್ಟು ಬೀಟ್ ಬರುತ್ತೆ…ಯಾವಾಗ ವೈಯೊಲಿನ್ ಬರುತ್ತೆ ಎಲ್ಲಾ ನೆನಪಿರುತ್ತೆ.

“ಹೆಂಗ್ ಓಪನ್ ಆಗ್ಬೇಕು ಗೊತ್ತಾ. ಎಲ್ ತಗೆದವನೋ ಬಡ್ಡಿ ಮಗಾ ಅಂತ ಜನ ಕೇಳ್ಬೇಕು..ಹಂಗಿರ್ಬೇಕು” ಅಂತ ಸುತ್ತಾ ಇರೋ ಬೆಟ್ಟಗಳನ್ನೋ…ರಾಜಾಸ್ಥಾನದ ಬಟಾ ಬಯಲನ್ನೋ ಒಂದು ಕಡೆ ಇಂದ ಇನ್ನೊಂದ್ ಕಡೆ ವರೆಗೂ ನೋಡಿ ಹೇಳೋರು. ಅಲ್ಲಿಗೆ ನಾನು…’ಬನ್ರೋ..” ಅಂತ ನಮ್ಮ ಹುಡುಗರನ್ನ ಕರ್ಕೊಂಡು..ಕ್ಯಾಮರಾನೂ ಎತ್ಕೊಂಡು..’ಇಷ್ಟು ದಿನ ಇಲ್ಲಿ ಎಷ್ಟು ಭಾಷೆಯವರು ಶೂಟ್ ಮಾಡಿರಬೇಕು…ಅದರಲ್ಲಿ..ಇನ್ನೇನ್ ಹೊಸದು ತೆಗೀ ಬಹುದು?” ಅಂತ ತಲೇ ಕೆರ್ಕೊಂಡು ಹೊರಡ್ತಿದ್ದೆ. ಕಡೇಗೆ ನನಗೆ ಕುಶೀ ಆದ ಒಂದು ಫ್ರೇಂ ಅವರಿಗೂ ಕುಶಿ ಆದರೆ…” ಆಹ..ಇದು ನೋಡಿ….ಶಾಟು…” ಅಂದು …”ಸೌಂಡ್….” ಅಂತ ಪಕ್ಕದಲ್ಲಿ ಬರ್ತಿದ್ರು.

ಪ್ರೇಂ ತಮ್ಮ ಸಿನ್ಮೇಮಾದಲ್ಲಿ ಹಾಡಿನಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಲ್ಲ…ಅವರ ಹಾಡುಗಳು ಸೂಪರ್ ಇರುತ್ತೆ…ಅನ್ನೋ ಮಾತು ಆಗಾಗ ಕೇಳ್ತಾನೇ ಇದ್ದೆ. ಇನ್ ಫ್ಯಾಕ್ಟ್…ಬಾಂಬೇ ಜಯಶ್ರೀ ನನಗೆ ಪರಿಚಯ ಆಗಿದ್ದು..ಪ್ರೇಂ ಸಿನೇಮಾದ ’ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನೂ ಯಾರೋ” ಅನ್ನೋ ಸಾಂಗ್ ನಿಂದ. ಆ ಸಿನೇಮಾ ನೋಡದೇ ಇದ್ರೂ..ಇದ್ಯಾರು..ಕ್ಲಾಸಿಕಲ್ ಸಿಂಗರ್ …ಕಮರ್ಷಿಯಲ್ ಸಿನೇಮಾದಲ್ಲಿ ಇಷ್ಟೋಳ್ಳೇ ಹಾಡು ಹಾಡಿದ್ದಾರೆ ಅಂತ ಅವರ ಬಗ್ಗೆ ಹುಡುಕಿದ್ದೆ.

ಏಕ ಲವ್ ಯಾ ದಲ್ಲಿ ಕೆಲಸ ಮಾಡಲಿಕ್ಕೆ ಶುರುವಾದ ಮೇಲೆ ಹಾಡಿನ ಬಗ್ಗೆ ಅವರು ತಲೇ ಕೆಡಿಸಿಕೊಳ್ಳೋದು ದಿನವೂ ನೋಡಿದ್ದೆ. “ತೀರ ದೊಡ್ಡ ದೊಡ್ಡ ಪದ ಹಾಕಿದ್ರೆ…ಜನಕ್ಕೆ ಹಾಡು ಬಾಯಲ್ಲಿ ನಿಲ್ಲಲ್ಲ ಮಗನೇ..ಎಲ್ಲಾರೂ ಹಾಡೋ ಹಾಗಿರಬೇಕು” ಅಂತ ಅವರು ರೈಟರ್ ಗಳನ್ನ್ ಕೂರಿಸ್ಕೊಂಡು ಪಾಠ ಮಾಡೋದು ನೋಡಿದ್ದೆ.

ಒಂದು ಹಂತಕ್ಕೆ ಹಾಡು ರೂಪು ಗೊಂಡ ಮೇಲೆ ಜನ ಹೇಳೋದು ಸತ್ಯ ಅನ್ನಿಸಿತ್ತು. ತುಂಬಾ ಸರಳವಾದ..ಭಾವಕ್ಕೆ ಹತ್ತಿರವಾದ ಪದಗಳು ಅಷ್ಟೇ ಹಾಂಟಿಂಗ್ ಅನ್ನಿಸೋ ಮೆಲೋಡಿ ಇಷ್ಟರಲ್ಲಿ ಒಳ್ಳೋಳ್ಳೇ ಹಾಡು ಮಾಡಿದ್ರು. ಯಾರೇ ಯಾರೇ ಅನ್ನೋ ಟೈಟಲ್ ಸಾಂಗ್ ಆಗಲೇ ಫೇಮಸ್ ಕೂಡ ಆಗಿದೆ.

ಅದರ ಶೂಟಿಂಗ್ ಗಾಗಿ ನಾವು ಹೊರದೇಶಕ್ಕೆ ಹೋಗೋ ಪ್ಲಾನ್ ಇತ್ತು. “ಆ ಹಾಡು ಹೀಗೆ ಬರಬೇಕು ಹಾಗಿರಬೇಕು” ಅಂತ ಆಗಾಗ ಶೂಟಿಂಗ್ ಸಮಯದಲ್ಲಿ ಹೇಳ್ತಾನೇ ಇರೋರು. ಆದರೆ ಹೊರದೇಶಕ್ಕೆ ಹೋಗಲು ಆಗಲಿಲ್ಲ.

ಆದರೆ ಅವರಿಗೆ ಸಾಮಾನ್ಯ ಲೋಕೇಶನ್ ಗಳು ಒಪ್ಪಿಗೆ ಇರಲಿಲ್ಲ. ಒಂದೊಂದು ಫ್ರೇಂ ಒಂದೊಂದು ಬಣ್ಣ ಇರಬೇಕು…ಅನ್ನೋದು ಅವರ ಆಸೆ. ಕಡೇಗೆ ಎಲ್ಲಾ ಕೂತು..ಕಾಶ್ಮೀರ..ಲೇಹ್ ರಾಜಸ್ತಾನ್..ಹೀಗೆ..ಮಂಜು ಮರಳು…ಉಪ್ಪಿನ ಕಡಲು..ಅಂತ ಒಂದಷ್ಟು ಜಾಗ ಗುಡ್ಡೇ ಹಾಕಿ ಹೊರಟ್ವಿ.

ಸುಮಾರು ಐವತ್ತು ಜನರ ತಂಡ…ಎಲ್ಲಾ ದೇಶದ ಗಡಿ ಭಾಗ..ಅಲ್ಲಿಯ ಪರ್ಮಿಶನ್ ಗಳ ಅಬ್ಬರ..ಇದೆಲ್ಲವನ್ನೂ ನಿಭಾಯಿಸಿ…ಶೂಟಿಂಗ್ ಅಲ್ಲೇ ಮಾಡಬೇಕು ಅಂತ ಹೊರಡಿಸಿದ್ರು ಪ್ರೇಂ.

ಪ್ರಕೃತಿ ಕೂಡ ಒಂದೊಂದು ಕಡೇ ಒಂದೊಂದು ರೀತಿ. ಕಾಶ್ಮೀರ…ಲೇಹ್ ನಲ್ಲಿ -14 ತನಕ ಇಳಿದಿದ್ರೆ…ರಾಜಸ್ಥಾನದಲ್ಲಿ..ನಮಗೇ ನೀರು ಕುಡಿಸೋ ಅಷ್ಟು.

ಹೀಗಿದ್ದರೂ..
ಬೆಳಿಗ್ಗೆ ನಾಲ್ಕಕ್ಕೇ ಎದ್ದು…ಹುಡುಗರನ್ನ ಹುರಿದುಂಬಿಸಿ…ಮೇಕಪ್ ಮಾಡಿಸಿ…ಕಾಸ್ಟ್ಯುಂ ಹೇರ್ಸ್ಟೈಲ್ ತಾವೇ ನೋಡಿ…ಅವರನ್ನ ಜೊತೆಗೇ ಕರಕೊಂಡು…..ಅರವತ್ತೋ ಎಪ್ಪತ್ತೋ ಕಿಲೋಮೀಟರ್ ದೂರದ ಲೊಕೇಶನ್ ಗೆ ಹೋದರೆ…ಇನ್ನೂ ಸೂರ್ಯನೂ ಇಣುಕಿರುತ್ತಿರಲಿಲ್ಲ. ಕೆಲಸದ ವಿಷಯದಲ್ಲಿ ಯಾವಾಗಲೂ ಫಸ್ಟ್.
“ಸಾರ್ ಬೇಗ ಆಗಲಿಲ್ವಾ” ಅಂತ ಚಳಿಯಲ್ಲಿ ನಡುಗಿಕೊಂಡು ನಾನು ಕೇಳಿದ್ರೆ…”ಏ ಇರಲಿ ಬಿಡಿ…ಇಲ್ಲಿ ಬಂದು ನಿಂತ್ಕೊಂಡು ಸೂರ್ಯ ಹುಟ್ಟೋದ್ ನೋಡೋಣ. ಬೆಳಕು ಬಂದಾಗ ಏನಾದ್ರು ಚೆನ್ನಾಗಿ ಕಂಡ್ರೆ ಶೂಟ್ ಮಾಡ್ ಬಹುದು. ಹೋಟ್ಲಲ್ಲಿ ಏನ್ ಮಾಡೋದು?” ಅಂದು..ಆ ಚಳಿಯಲ್ಲೂ..ನಿಂತ ಕಡೆ ನಿಲ್ಲದೇ..ಅದು ಬಂತ ಇದು ಬಂತಾ ಅಂತ ಮ್ಯಾನೇಜರ್ ನ ಕೇಳ್ಕೊಂಡು ಓಡಾಡಿ..ಸೂರ್ಯ ಇಣುಕಿದ ತಕ್ಷಣವೇ…”ಆಂ ರೆಡೀ ಟೈಗರ್ ಬರಲೀ ಕ್ಯಾಮರ…” ಅಂತ ಕರೆದು..ಎದುರಿಗೆ ನಿಲ್ತಾ ಇದ್ರು.

ಆ ಚಳಿಯಲ್ಲಿ ನಮ್ಮ ಹೊಸ ಹೀರೋ ಹೀರೋಯಿನ್ ಬಹಳ ಹುಮ್ಮಸ್ಸಿನಿಂದ ಡಾನ್ಸ್ ಮಾಡ್ತಿದ್ರು. ..ಸ್ಟೆಪ್ ಹಾಕೋರು…ನಾನಾಗಿದ್ರೆ…ಅದೆಂಗಿದ್ರೂ..ಓಕೆ ಅಂತಿದ್ನೇನೋ..ಆದರೆ ಪ್ರೇಂ….ಅದು ಸರಿ ಬರೋ ವರೆಗೂ..ಅವರಿಬ್ಬರಿಗೂ ರಮಿಸಿ…ಪೂಸಿ ಮಾಡಿ..ಅದು ಕೊಡಸ್ತೀನಿ..ಇದು ಕೊಡಸ್ತೀನಿ ಅಂದು…ಆ ಸ್ಟೇಪ್ಸ್ ಮತ್ತು ಅಂದು ಕೊಂಡ ಶಾಟ್ ಸರಿಯಾಗಿ ಬರೋ ವರೆಗೂ ಬಿಡ್ತಾ ಇರಲಿಲ್ಲ.

ಅಲ್ಲೇ ಎಡಿಟಿಂಗ್ ನಲ್ಲಿ ನೋಡಿ ಸಮಾಧಾನ ಆದ ಮೇಲೇ…”ಥ್ಯಾಂಕ್ಯು ವೆರಿ ಮಚ್ ಲವ್ ಯು ಆಲ್” ಅನ್ನೋ ಅವರ ಟ್ರೇಡ್ ಮಾರ್ಕ್ ಡೈಯಲಾಗ್ ಹೇಳಿ..ಮುಂದಕ್ಕೆ ಶಿಫ್ಟ್.

ನಾವು ಹೋಗಿದ್ದದ್ದು ಒಂದು ಒಂದು ಅಸಾಮಾನ್ಯ ಟ್ರಿಪ್ಪು. ಅದೆಷ್ಟು ಫ್ಲೈಟ್ ಹತ್ತಿ ಇಳೆದ್ವೋ…ಅದೆಷ್ಟು ಸೆಕ್ಯುರಿಟಿ ಚೆಕ್ ಆಯ್ತೋ..ಗೊತ್ತಿಲ್ಲ.ಆದರೆ..ಎಲ್ಲಿ ಯಾರಿಗೇ ತೊಂದರೆ ಆಗಲಿ..ತಕ್ಷಣ ಅಲ್ಲಿಗೆ ಬಂದು ಪರಿಸ್ಥಿತಿ ನಿಭಾಯಿಸಿ ಮುಂದಕ್ಕೆ ಹೊರಡಿಸಿದ್ದು ಪ್ರೇಂ
ಅದೆಲ್ಲೋ ಡೆಲ್ಲಿಯಲ್ಲೂ ಅವರ ಅಭಿಮಾನಿಗಳೇ..ಕಾಶ್ಮೀರ..ಲೇಹ್ ನಲ್ಲೂ ಕೂಡ.

ಅಂತೂ ಅಷ್ಟೂ ದಿನದ ಚಿತ್ರ ಯಾತ್ರೆ ಮುಗಿದು… ಬೆಂಗಳೂರು ತಲುಪಿದ್ವಿ. ಅಲ್ಲಿಗೆ ನಮ್ಮ ಸಿನೇಮಾದ ಕೊನೇ ಘಟ್ಟದ ಶೂಟಿಂಗ್ ಮುಗೀತು. ಸಧ್ಯದಲ್ಲೇ ಆಡಿಯೋ ಹೊರ ತರುವ ಕೆಲಸ ಶುರುವಾಗ ಬಹುದು. ಮನೇ ತಲುಪಿದ ಮೇಲೆ..ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಇತ್ತು. “ ಎಲ್ಲಾ ಚೆನ್ನಾಗಾಯ್ತು..ನಾನ್ ಅಂದು ಕೊಂಡದ್ದಕ್ಕಿಂತ ಚೆನ್ನಾಗಿ ಬಂತು ಸಾಂಗ್…ಕೆಲಸ ಚೆನ್ನಾಗಾಯ್ತು..ಎರಡು ದಿನ ಬಿಟ್ಟು ಸಿಕ್ಕೋಣ” ಅಂತ ಪ್ರೇಂ ಮೆಸೇಜ್ ಬಂದಿತ್ತು..ಅಂತೂ ಒಂದು ಒಳ್ಳೇ ಕೆಲಸ ಮಾಡಿ ಮುಗಿಸಿದ ಸಮಾಧಾನ.

ನಾಳೇ…ಆ ಹಾಡು ಮತ್ತು ಅದರ ಚಿತ್ರಣ ನಿಮಿಗೂ ಖುಷಿ ಕೊಟ್ರೆ…ಆ ನಿಮ್ಮ ಆನಂದವನ್ನ..ಪ್ರೇಂ ಅನ್ನೋ ಬತ್ತದ ಉತ್ಸಾಹಕ್ಕೆ ಅರ್ಪಿಸಿ ಬಿಡಿ. ☺️🙏

Related Posts

error: Content is protected !!