ವಿಷ್ಣು ಸರ್ ಬಗ್ಗೆ ಮಾತಾಡಿದ್ದು ಬೇಸರ ತಂದಿದೆ
ಕನ್ನಡ ಚಿತ್ರರಂಗದ ಮೇರು ನಟ
ಡಾ.ವಿಷ್ಣುವರ್ಧನ್ ಅವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡ ಚಿತ್ರರಂಗವೇ ಕಿಡಿಕಾರಿದೆ. ಜಗ್ಗೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್ ಸೇರಿದಂತೆ ಹಲವರು ಟ್ವೀಟ್ ಮೂಲಕ ವಿಜಯ್ ರಂಗರಾಜು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಅಭಿಮಾನಿಗಳು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟ ಶ್ರೀಮರಳಿ ಕೂಡ ಟ್ವೀಟ್ ಮೂಲಕ ‘ಆ ನಟ ಕ್ಷಮೆ ಕೇಳಬೇಕು’ ಎಂದಿದ್ದಾರೆ.
ತಮ್ಮ ಟ್ವೀಟ್ ಖಾತೆಯಲ್ಲಿ ಶ್ರೀಮುರಳಿ ‘ಯಾವುದೇ ಭಾಷೆಯ ಕಲಾವಿದ ಇರಲಿ. ಅವರು ಕಲಾವಿದರೇ. ಕಲೆಗೆ ಭಾಷೆಯ ಬೇಧ ಭಾವ ಇಲ್ಲ. ಎಲ್ಲರೂ ಕಲೆಯನ್ನು ಪ್ರೀತಿಸುವ ಮನಸ್ಸುಳ್ಳವೆರೆ. ನಮ್ಮ ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣು ಸರ್ ಬಗ್ಗೆ ಆ ಭಾಷೆಯ ಕಲಾವಿದ ಹಾಗೆಲ್ಲ ಮಾತನಾಡಿದ್ದು ಬೇಸರ ತಂದಿದೆ. ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ‘ಎಂದು ಹೇಳಿದ್ದಾರೆ.
ಹಲವು ವರ್ಷಗಳ ಹಿಂದೆ ಪ್ರಭಾಕರ್ ಅಭಿನಯದ ‘ ‘ಮುತ್ತೈದೆ ಭಾಗ್ಯ’ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರು ಅತಿಥಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ತೆಲುಗು ನಟ ವಿಜಯ್ ರಂಗರಾಜು ಕೂಡ ನಟಿಸಿದ್ದರು. ಚಿತ್ರೀಕರಣ ವೇಳೆ, ನಡೆದ ಒಂದು ಘಟನೆ ಬಗ್ಗೆ, ಇತ್ತೀಚೆಗೆ ಮಾತಾಡಿದ್ದರು. ವಿಷ್ಣುವರ್ಧನ್ ಅವರ ಕುರಿತು ಅವಹೇಳನವಾಗಿ ಮಾತಾಡಿದ್ದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕ್ರಮಕ್ಕೂ ಒತ್ತಾಯಿಸಲಾಗಿದೆ.