ಚಿಂದಿ ಆಯುವ ಹುಡುಗಿ ಡಿಸಿ ಆದಾಗ…
ಕನ್ನಡದಲ್ಲೀಗ ಸಿನಿಮಾಗಳ ಕಲರವ. ಹೌದು, ಕೊರೊನಾ ಹಾವಳಿಯ ಬಳಿಕ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಮೆಲ್ಲನೆ, ಒಂದೊಂದೇ ಚಿತ್ರಗಳು ತೆರೆಗೆ ಬರುತ್ತಿವೆ. ಈಗ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪಾರು” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಚಿತ್ರ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಬಡತನದ ಬೇಗೆಯಲ್ಲೇ ದಿನದೂಡಿ ಬದುಕುವ ಫ್ಯಾಮಿಲಿಯಲ್ಲಿ ನಾಲ್ವರು ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ, ಜಿಲ್ಲಾಧಿಕಾರಿಯಾಗುತ್ತಾಳೆ. ಆದೇ ಚಿತ್ರದ ಕಥಾಹಂದರ. ಹನುಮಂತ್ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಹಾಗು ಛಾಯಾಗ್ರಹಣದ ಜವಾಬ್ದಾರಿಯೂ ಹನುಮಂತ್ ಪೂಜಾರ್ ಅವರಿಗಿದೆ. ಇನ್ನು, ನೀನಾಸಂ ನಂಟು ಇರುವ ಹನುಮಂತ್ ಪೂಜಾರ್, “ಬುದ್ದಿವಂತ”, “ಅಯೋಗ್ಯ”, “ದೋಬಿಘಾಟ್” ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಹನುಮಂತ್ ಪೂಜಾರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಸಿ.ಎನ್.ಗೌರಮ್ಮ ಅವರ ಸಹ ನಿರ್ಮಾಣವಿದೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತವಿದೆ. ಶಿವಕುಮಾರ್ ಸ್ವಾಮಿ ಸಂಕಲನ ಮಾಡಿದ್ದಾರೆ. “ಪಾರು” ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಮ್ ಕುಮಾರ್ ಇತರರು ಇದ್ದಾರೆ. ದಾವಣಗೆರೆ, ಬೆಂಗಳೂರು, ಹಾವೇರಿ ಇನ್ನಿತರೆ ಕಡೆ ಚಿತ್ರೀಕರಣ ನಡೆದಿದೆ.