ಲೋಹಿತ್‌ಗೆ ಸಿಕ್ಕ ನಿಧಿ! ನಾಯಕಿ ಪ್ರಧಾನ ಚಿತ್ರದಲ್ಲಿ ಪಂಚರಂಗಿ ಬೆಡಗಿ

ಜನವರಿಯಲ್ಲಿ ಚಿತ್ರಕ್ಕೆ ಚಾಲನೆ…

 

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಅಂದಾಕ್ಷಣ ನೆನಪಾಗೋದೇ ಒಂದೇ ಉಸಿರಲ್ಲಿ ಪಟಪಟ ಮಾತಾಡುವ “ಪಂಚರಂಗಿ”ಯ ಮಾತಿನ ಮಲ್ಲಿಯ ಪಾತ್ರ. ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿರುವ ನಿಧಿ ಸುಬ್ಬಯ್ಯ, ಬಾಲಿವುಡ್‌ ಅಂಗಳಕ್ಕೂ ಜಿಗಿದಿದ್ದೂ ಗೊತ್ತೇ ಇದೆ. ಅಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದ್ದೊಂದು ಠಸ್ಸೇ ಹೊತ್ತಿದ ನಿಧಿ ಸುಬ್ಬಯ್ಯ ಬಹಳ ವರ್ಷಗಳ ಬಳಿಕ ಪುನಃ ಕನ್ನಡಕ್ಕೆ ವಾಪಾಸ್ಸಾಗಿದ್ದು ಗೊತ್ತೇ ಇದೆ. ಈಗ ಮತ್ತೊಂದು ವಿಭಿನ್ನ ಕಥಾಹಂದರ ಇರುವ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರ ನಾಯಕಿ ಪ್ರಧಾನವಾದದ್ದು. ಈ ಸಿನಿಮಾ ಮೂಲಕ ಪವನ್‌ ಮತ್ತು ಪ್ರಸಾದ್‌ ನಿರ್ದೇಶನದ ಪಟ್‌ ಅಲಂಕರಿಸುತ್ತಿದ್ದಾರೆ. ಇನ್ನು, ಕಿಶೋರ್‌ ನರಸಿಂಹಯ್ಯ, ಚೇತನ್‌ ಕೃಷ್ಣ ಮತ್ತು ಬಿ.ಜಿ. ಅರುಣ್ ಅವರು ಜೊತೆಗೂಡಿ ಈ ಚಿತ್ರವನನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು “ಮಮ್ಮಿ” ಖ್ಯಾತಿಯ ಲೋಹಿತ್‌ ಎಚ್.‌ ಅರ್ಪಿಸುತ್ತಿದ್ದಾರೆ. ಅವರ ಫ್ರೈಡೇ ಫಿಲ್ಮ್ಸ್‌ ಸಹಯೋಗದೊಂದಿಗೆ ಸಿಲ್ವರ್‌ ಟ್ರೈನ್‌ ಇಂಟರ್ನ್ಯಾಷನಲ್‌ ಮತ್ತು ಸಿ.ಕೆ.ಸಿನಿ ಕ್ರಿಯೇಷನ್‌ ಜೊತೆಯಲ್ಲಿ ತಯಾರಾಗುತ್ತಿರುವುದು ವಿಶೇಷ.


ಈ ನಾಯಕಿ ಪ್ರಧಾನ ಚಿತ್ರಕ್ಕಿನ್ನೂ ಯಾವುದೇ ನಾಮಕರಣ ಮಾಡಿಲ್ಲ. ತಮ್ಮ ಹೊಸ ಚಿತ್ರದ ಬಗ್ಗೆ ನಾಯಕಿ ನಿಧಿ ಸುಬ್ಬಯ್ಯ ಸಾಕಷ್ಟು ಥ್ರಿಲ್‌ ಆಗಿದ್ದಾರೆ. ಆ ಬಗ್ಗೆ ನಿಧಿ ಸುಬ್ಬಯ್ಯ ಹೇಳುವುದಿಷ್ಟು. “ಸಿನಿಮಾದ ಕಥೆ ಕೇಳಿದಾಕ್ಷಣ, ನಾನು ನಿಜಕ್ಕೂ ಥ್ರಿಲ್ ಆದೆ. ಅದರಲ್ಲೂ ನಾನು ಇದೇ ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದೊಂದು ಹೊಸ ಕತೆ, ಪಾತ್ರ ಇರುವಂತಹ ಸಿನಿಮಾ ಆಗಲಿದೆ. ಅಷ್ಟೇ ಅಲ್ಲ, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಚಿತ್ರದ ಕಥೆ ಇಷ್ಟವಾಗುತ್ತೆ ಎಂಬ ನಂಬಿಕೆ ನನಗಿದೆ. ನಾನು ಈವರೆಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಿದ್ದೇನೆ. ಇದು ನನಗೆ ಹೊಸ ರೀತಿಯ ಪಾತ್ರ ಕೊಡುತ್ತಿರುವ ಚಿತ್ರ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುವ ಖುಷಿ ಇದೆ” ಎಂಬುದು ನಿಧಿ ಮಾತು.


ಸದ್ಯಕ್ಕೆ ಈ ಚಿತ್ರಕ್ಕೆ ತಾಂತ್ರಿಕ ವರ್ಗ, ಕಲಾವಿದರು, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ಯಾರೆಲ್ಲಾ ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹೊಸ ವರ್ಷಕ್ಕೆ ಹೊಸತನದೊಂದಿಗೆ ಈ ಚಿತ್ರ ಶುರುವಾಗಲಿದೆ ಎಂಬುದು ಲೋಹಿತ್‌ ಅವರ ಮಾತು. ಲೋಹಿತ್‌ ಅವರು ಈ ಹಿಂದೆ “ಮಮ್ಮಿ” ಮೂಲಕ ಜೋರು ಸುದ್ದಿಯಾಗಿದ್ದರು.

ಆ ಬಳಿಕ ಅವರು “ದೇವಕಿ” ಚಿತ್ರ ಮಾಡಿಯೂ ಗೆಲುವು ಕಂಡರು. ಆ ಬಳಿಕ ಅವರು ಸಮಾನ ಮನಸ್ಕರ ಜೊತೆ ಸೇರಿ ತಮ್ಮದ್ದೊಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ “ಲೈಫ್‌ ಈಸ್‌ ಬ್ಯೂಟಿಫುಲ್‌” ಚಿತ್ರ ಶುರು ಮಾಡಿ, ಅದನ್ನೂ ಮುಗಿಸಿದ್ದಾರೆ. ಆ ಚಿತ್ರ ಈಗ ಡಬ್ಬಿಂಗ್‌ ಹಂತದಲ್ಲಿದೆ. ಈಗ ನಾಯಕಿ ಪ್ರಧಾನ ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಈ ಹೊಸ ಪ್ರಯತ್ನಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.

Related Posts

error: Content is protected !!