ಎಕ್ಸ್‌ಕ್ಯೂಸ್‌… ಮಿ ಬಂದು 17 ವರ್ಷ! ಸ್ಟಾರ್ ಗಿರಿ ಮೇಲೆ ನಂಬಿಕೆ ಇಲ್ಲ- ಅಜೇಯ್‌ರಾವ್

excuseme_17-years_ajayrao_prem

ಕಷ್ಟ ಮರೆಯಲ್ಲ, ಸಾಧನೆ ಬಿಡಲ್ಲ…

ಡಿಸೆಂಬರ್‌, 5, 2003
– ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಸಿನಿಮಾವೊಂದು ಬಿಡುಗಡೆಯಾದ ದಿನ. ಹೌದು, ಪ್ರೇಮ್‌ ನಿರ್ದೇಶನದ ಅಜೇಯ್‌ ರಾವ್ , ರಮ್ಯಾ ಹಾಗೂ ಸುನೀಲ್‌ ರಾವ್‌ ಅಭಿನಯದ “ಎಕ್ಸ್‌ ಕ್ಯೂಸ್‌.. ಮಿ” ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಹದಿನೇಳು ವರ್ಷಗಳು ಸಂದಿವೆ. ಎನ್‌.ಎಂ.ಸುರೇಶ್‌ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್‌ ಸಂಗೀತ ನೀಡಿದ್ದರು. ಇಂದಿಗೂ ಈ “ಎಕ್ಸ್‌ ಕ್ಯೂಸ್‌ …ಮಿ” ಎವರ್‌ಗ್ರೀನ್.‌ ಒಂದಷ್ಟು ಸಿನಿಮಾಗಳು ಪದೇ ಪದೇ ಕಾಡುವುದಕ್ಕೆ ಕಾರಣ, ಆ ಚಿತ್ರದಲ್ಲಿದ್ದ ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಕಲಾವಿದರ ಅಭಿನಯ. ಅಷ್ಟಕ್ಕೂ ಈ ಚಿತ್ರದ ಬಗ್ಗೆ ಇಷ್ಟೊಂದು ಹೇಳುವುದಕ್ಕೆ ಕಾರಣವಿಷ್ಟೇ. ಈ ಚಿತ್ರವನ್ನು ಅಜೇಯ್‌ರಾವ್‌ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಯಶಸ್ಸು ತಂದುಕೊಟ್ಟ “ಎಕ್ಸ್‌ ಕ್ಯೂಸ್‌…ಮಿ” ಚಿತ್ರ ಅವರಿಗೊಂದು ಐಡೆಂಟಿಟಿ ತಂದುಕೊಟ್ಟಿದೆ ಅನ್ನುವುದು ಸತ್ಯ. ಹೀರೋ ಆಗಿ ಯಶಸ್ಸು ಕೊಟ್ಟ ಚಿತ್ರವಿದು. ಹಾಗಾಗಿ ಈ ಹದಿನೇಳು ವರ್ಷಗಳ ಸಿನಿಮಾ ಜರ್ನಿಯಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಆ ಕುರಿತು ಅಜೇಯ್‌ರಾವ್‌ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

ನೋವು-ಸಂಕಟ ಮರೆತಿಲ್ಲ
“ಹಲೋ ಎಕ್ಸ್‌ ಕ್ಯೂಸ್‌… ಮಿ” ಈ ಪದವನ್ನೊಮ್ಮೆ ಕೇಳೋಕೆ ಒಂದು ಖುಷಿ ಎನಿಸುತ್ತೆ. ಯಾಕೆಂದರೆ, ನಾನು “ಎಕ್ಸ್‌ ಕ್ಯೂಸ್‌… ಮಿ” ಸಿನಿಮಾ ಮೂಲಕ ಹೀರೋ ಆದವನು. ನನ್ನನ್ನು ಹೀರೋ ಅಂತ ಗುರುತಿಸಿಕೊಟ್ಟ ಸಿನಿಮಾವದು. ದೊಡ್ಡ ಯಶಸ್ಸು ಕೊಟ್ಟ ಚಿತ್ರವದು. ನನ್ನ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟ, ನನ್ನೊಳಗಿನ ಬಯಕೆಯನ್ನು ಈಡೇರಿಸಿದ ಮತ್ತು ಎಂದೆಂದಿಗೂ ಮರೆಯಲಾರದ ಚಿತ್ರವದು. ನಾನು ಯಾರು ಅಂತ ಗೊತ್ತಿಲ್ಲದ ದಿನದಲ್ಲೇ ಆ ಚಿತ್ರ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿದ ಚಿತ್ರವದು. ಹಾಗಾಗಿ, ನನಗೆ ಆ ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ.


ಈ ಹದಿನೇಳು ವರ್ಷಗಳು ಸುದೀರ್ಘ ಪಯಣದಲ್ಲಿ ಸಕ್ಸಸ್‌ ನೋಡಿದ್ದೇನೆ. ಫೇಲ್ಯೂರ್‌ ಕೂಡ ಕಂಡಿದ್ದೇನೆ. ಈ ಎರಡನ್ನೂ ನಾನು ಹತ್ತಿರದಿಂದಲೇ ನೋಡಿದವನು. ಒಂದೊಂದೇ ಮೆಟ್ಟಿಲನ್ನು ತುಂಬಾ ಕಷ್ಟಪಟ್ಟು ಹತ್ತಿ ಬಂದಿದ್ದೇನೆ. ಹತ್ತುವಾಗ ಎಡವಿದ್ದೇನೆ, ನೋವು ಅನುಭವಿಸಿದ್ದೇನೆ. ಒಮ್ಮೊಮ್ಮೆ ಆ ಮೆಟ್ಟಿಲ ಮೇಲೆ ನಿಂತು ಖುಷಿಪಟ್ಟಿದ್ದೇನೆ. ಆದರೆ, ನಾನು ಯಾವುದನ್ನೂ ಮರೆತಿಲ್ಲ ಎಂಬುದೊಂದೇ ಸತ್ಯ. ಯಾಕೆಂದರೆ, ಮನುಷ್ಯ ಎಷ್ಟೇ ಮೇಲೆ ಬಂದರೂ, ಎಷ್ಟೇ ಗಳಿಸಿದರೂ, ಹಿಂದಿನ ನೆನಪು, ಆ ಕಷ್ಟ, ನೋವು, ಸಂಕಟ ಮರೆಯಬಾರದು. ನಾನು ಈ ಎಲ್ಲವನ್ನೂ ಅನುಭವಿಸಿದ್ದರಿಂದ ಪದೇ ಪದೇ ಎಲ್ಲವೂ ನೆನಪಾಗುತ್ತಲೇ ಇರುತ್ತದೆ. ಹಾಗಾಗಿಯೇ ನಾನು ಸದಾ ಕೇವಲ ಒಬ್ಬ ನಟನಾಗಿ ಇರಲು ಇಷ್ಟಪಡ್ತೀನಿ.

 

ಸ್ಟಾರ್‌ ಅನ್ನೋದು ಮಿಂಚಿ ಮರೆಯಾಗುತ್ತೆ…
ಕ್ಯಾಮೆರಾ ಮುಂದೆ ನಾನು ಒಬ್ಬ ಆರ್ಟಿಸ್ಟ್‌ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡ್ತೀನಿ. ಯಾಕೆಂದರೆ, ನಟನಾಗಿರುವುದೇ ಶಾಶ್ವತ. ನನಗೆ ಸ್ಟಾರ್‌ ಪಟ್ಟ ಬೇಡವೇ ಬೇಡ. ಅದೊಂದು ರೀತಿ ಸ್ವಿಚ್‌ ಆನ್‌ ಅಂಡ್‌ ಆಫ್‌ ಇದ್ದಂತೆ. ಆಗಾಗ ಸಕ್ಸಸ್‌, ಫೇಲ್ಯೂರ್‌ ಇದ್ದಂಗೆ. ಹಾಗಾಗಿ ನಾನು ಸ್ಟಾರ್‌ಗಿಂತ ಒಬ್ಬ ನಟನಾಗಿ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ. ಒಬ್ಬ ನಿರ್ದೇಶಕನ ಕಲ್ಪನೆ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನಾಗಬೇಕು ಎಂಬುದು ನನ್ನ ಉದ್ದೇಶ. ನಾವು ಅಣ್ಣಾವ್ರು ಅವರನ್ನು ನೆನಪಿಸಿಕೊಂಡರೆ, ಅವರು ಮಾಡಿದ ಕೆಲಸಗಳು, ಪಾತ್ರಗಳು, ಚಿತ್ರಗಳು ಕಣ್ಣೆದುರು ಬರುತ್ತವೆ. ಅದಷ್ಟೇ ಶಾಶ್ವತ. ಹಾಗಾಗಿ ನಾವು ತೆರೆಯ ಮೇಲೆ ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಬೇಕಾದರೆ, ಶ್ರದ್ಧೆ, ಭಕ್ತಿ,ಪ್ರಾಮಾಣಿಕತೆಯಿಂದ ಮಾಡಬೇಕು.

ನಟನಿಗೆ ಸ್ಟಾರ್‌ ಭ್ರಮೆ ಇರಬಾರದು
ನನಗೆ ಈ ಸ್ಟಾರ್‌ಡಮ್‌ ಮೇಲೆ ನಂಬಿಕೆ ಇಲ್ಲ. ಸ್ಟಾರ್‌ ಪಟ್ಟ ಅನ್ನೋದು ಶಾಶ್ವತವೂ ಅಲ್ಲ. ನಟನಾದವನು ಆ ಭ್ರಮೆಯಲ್ಲಿ ಇರಬಾರದು. ಕಲಾವಿದರ ಬದುಕಲ್ಲಿ ಸೋಲು-ಗೆಲುವು ಕಾಮನ್.‌ ನಿರ್ಮಾಪಕ ಇರಲಿ, ನಿರ್ದೇಶಕ ಇರಲಿ, ನಟನೇ ಇರಲಿ ತನ್ನ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮಾತ್ರ ಎಲ್ಲವೂ ಶಾಶ್ವತವಾಗಿರುತ್ತೆ. ಎಲ್ಲರ ಮನಸ್ಸಲ್ಲಿ ಕೊನೆಗೆ ಉಳಿಯೋದು ಮಾಡಿದ ಕೆಲಸವಷ್ಟೇ. ಅದೆಷ್ಟೋ ಸಿನಿಮಾಗಳು ಫ್ಲಾಪ್‌ ಆಗಿದ್ದರೂ, ಇವತ್ತಿಗೂ ಆ ಸಿನಿಮಾಗಳನ್ನು ನೋಡಿದಾಗ, ಎಂಥಾ ಕ್ಲಾಸಿಕ್‌ ಸಿನಿಮಾ ಮಾಡಿದ್ದಾರೆ ಅನ್ಸುತ್ತೆ. ಇವತ್ತು ಮಾರ್ಕೆಟ್‌ ಅನ್ನೋದು ಕೂಡ ಶಾಶ್ವತವಲ್ಲ. ನಾಳೆ ನಾವೇ ಇರ್ತೀವೋ ಇಲ್ಲವೋ ಅನ್ನೋದು ಶಾಶ್ವತವಲ್ಲ. ಆದರೆ, ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯೋದು ಎಂಬುದು ಅವರ ಮಾತು.

ನಿರ್ದೇಶನದ ಆಸೆಯೂ ಇದೆ
ಅಂದಹಾಗೆ, ಅಜೇಯ್‌ರಾವ್‌ ಈ ಹದಿನೇಳು ವರ್ಷಗಳಲ್ಲಿ ಗೆದ್ದಿದ್ದಾರೆ, ಬಿದ್ದಿದ್ದಾರೆ, ನಿರ್ಮಾಪಕರಾಗಿದ್ದಾರೆ, ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ನಿರ್ದೇಶನದ ಮೇಲೆ ಆಸೆ ಇಲ್ಲವೇ? ಈ ಬಗ್ಗೆ ಮಾತನಾಡುವ ಅಜೇಯ್‌ರಾವ್‌, ನನಗೂ ನಿರ್ದೇಶನದ ಮೇಲೆ ಪ್ರೀತಿ ಇದೆ. ಆದರೆ, ಮೊದಲ ಆದ್ಯತೆ ನಟನೆಗೆ ಕೊಡ್ತೀನಿ. ಅದು ನನ್ನ ಪ್ಯಾಷನ್‌ ಕೂಡ. ಮೊದಲು ನನ್ನೊಂದಿಗೆ ಸಿನಿಮಾ ಮಾಡೋಕೆ ಬರೋರನ್ನು ಗೌರವಿಸುತ್ತೇನೆ. ಅಂಥವರಿಗೆ ಸಿನಿಮಾ ಮೇಲೆ ಪ್ರೀತಿ ಇರಬೇಕು. ಗೆಲ್ಲುವ ಛಲ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ತಾಳ್ಮೆ ಇರಬೇಕು. ಇಂದು ನನಗೆ ಆ ತಾಳ್ಮೆ ಇದ್ದುದರಿಂದಲೇ ಎಲ್ಲವನ್ನೂ ಕಂಡುಕೊಳ್ಳಲು ಸಾಧ್ಯವಾಗಿದೆ ಎಂಬುದು ಅವರ ಮಾತು.

ಸಾಧಿಸುವುದಿನ್ನೂ ಇದೆ…
ಸದ್ಯ ಅಜೇಯ್‌ ರಾವ್‌ ಅವರ “ಕೃಷ್ಣ ಟಾಕೀಸ್‌” ಸೆನ್ಸಾರ್‌ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಉಳಿದಂತೆ “ಶೋಕಿವಾಲ” ಕೂಡ ರೆಡಿ. ಇವುಗಳ ಜೊತೆಗೆ ನಿರ್ದೇಶಕರಾದ ಮಂಜು ಸ್ವರಾಜ್‌ ಮತ್ತು ಗುರುದೇಶಪಾಂಡೆ ಜೊತೆ ಸಿನಿಮಾ ಮಾಡಬೇಕಿದೆ. ಇದರ ನಡುವೆಯೇ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆಯಂತೆ. ಅದೇನೆ ಇರಲಿ, ಅಜೇಯ್‌ ರಾವ್‌ “ಎಕ್ಸ್‌ ಕ್ಯೂಸ್‌… ಮಿ”ಗೆ ಹದಿನೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಅಜೇಯ್‌ರಾವ್‌ ಎಲ್ಲಾ ಪಾಠ ಕಲಿತಿದ್ದಾರೆ. ಒಮ್ಮೆ ತಿರುಗಿ ನೋಡಿದಾಗ ಸಾಧನೆ ಮಾಡುವುದು ಇನ್ನೂ ಇದೆ ಎಂದೆನಿಸದಿರದು.

Related Posts

error: Content is protected !!