ಅಬ್ಬಕ್ಕ ನ ಮೇಲೆ ಮಂಸೋರೆ ಮನಸು !

ಆಕ್ಟ್ 1978′ ಸಕ್ಸಸ್ ಬೆನ್ನಲೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ ಕ್ರಿಯೇಟಿವ್ ಡೈರೆಕ್ಟರ್, ನಾಲ್ಕನೇ ಸಿನಿಮಾಕ್ಕೆ ಮಂಸೋರೆ ಅವರದ್ದು ಹೊಸ ವರಸೆ

‘ಆಕ್ಟ್ 1978 ‘ಚಿತ್ರಕ್ಕೆ ಸಿಕ್ಕ ಅಭೂತ ಪೂರ್ವ ಬೆಂಬಲದ ಬೆನ್ನಲೇ ನಿರ್ದೇಶಕ ಮಂಸೋರೆ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳ್ಳಂಬೆಳಗ್ಗೆಯೇ ಐತಿಹಾಸಿಕ ಸಿನಿಮಾದ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿ, ಸಿನಿಮಾ‌ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದಿನ ಮೂರು ಚಿತ್ರಗಳ ಕತೆಗಳಿಗೆ ಹೋಲಿಸಿದರೆ ಇದು ತೀರಾ ಭಿನ್ನ. ಅವಗಳದ್ದೇ ಒಂದು ಕತೆಯಾದರೆ ಇದು ಅದಕ್ಕೆ ತದ್ವಿರುದ್ಧ. ಇದೇ ಮೊದಲ ಬಾರಿಗೆ ಐತಿಹಾಸಿಕ ಕತೆಗೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ ಮಂಸೋರೆ. ನಿನ್ನೆಯೇ ಘೋಷಣೆ ಮಾಡಿದ್ದ ಹಾಗೆಯೇ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅವರ ಹೊಸ ಪ್ರಾಜೆಕ್ಟ್ ಪ್ರಕಟಿಸಿದ್ದು, ಕರಾವಳಿ ನಾಡಿನ ಚರಿತಾರ್ಹ ನಾಯಕಿ ರಾಣಿ ಅಬ್ಬಕ್ಕ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಚಿತ್ರಕ್ಕೆ ಅಬ್ಬಕ್ಕ ಅಂತಲೇ ಹೆಸರಿಟ್ಟಿದ್ದಾರೆ. ಅದರ ಮೊದಲ ಪೋಸ್ಟರ್ ಕೂಡ ಇಂದೇ ರಿವೀಲ್ ಆಗಿದೆ.

ಅಬ್ಬಕ್ಕ ಎನ್ನುವ ಚಿತ್ರದ ಟೈಟಲ್ ಗೆ ‘ ಅರಬೀ ಸಮುದ್ರದ ಅಭಯರಾಣಿ ‘ ಅಂತ ಸಬ್ ಟೈಟಲ್ ಇಟ್ಟಿದ್ದಾರೆ ಮಂಸೋರೆ. ವಿಶೇಷ ಅಂದ್ರೆ ಈ ಚಿತ್ರವು ಕನ್ನಡದ ಜತೆಗೆ ತುಳು, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ನಿರ್ಮಾಣ ವಾಗಲಿದೆ ಎನ್ನುವುದು ಮಂಸೋರೆ ಪಾಲಿಗೆ ಭಾರೀ ವಿಶೇಷ. ಇನ್ನು ಚಿತ್ರದ ಕತೆಯಂತೂ ಭಾರೀ ಕುತೂಹಲವೇ. ಯಾಕಂದ್ರೆ, ರಾಣಿ ಅಬ್ಬಕ್ಕ ಕನ್ನಡ ನಾಡಿನ ವಿರೋಚಿತ ಹೋರಾಟದ ನಾಯಕಿ. ಅದರಲ್ಲೂ ಕರಾವಳಿ ತೀರದಲ್ಲಿ ಅಬ್ಬಕ್ಕ ಮನೆ ಮಾತಾದ ಹೆಸರು. ಆಕೆಯ ಹೆಸರಲ್ಲಿ ಚಿತ್ರ ಮಾಡಲು ಹೊರಟ ಮಂಸೋರೆ ಅವರ ಪ್ರಯತ್ನವೇ ಈಗ ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಹಿಂದಿನ ಅವರ ಮೂರು ಸಿನಿಮಾ ನೋಡಿದವರಿಗೆ ಅವೆಲ್ಲ ವಿಭಿನ್ನ ಕಥಾ ಹಂದರ ಪ್ರಯೋಗಾತ್ಮಕ ಚಿತ್ರಗಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.

ಅದು ಬಿಟ್ಟು ಐತಿಹಾಸಿಕ ಕತೆಗೆ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವುದು ಇದೇ ಮೊದಲು. ಹಾಗಾಗಿ ಹೇಗಿರುತ್ತೆ ಅವರ ಕೈ ಚಳಕ ಅನ್ನೋದು ಅವರ ನಿರ್ದೇಶನದ ಬಗೆಗಿರುವ ಮತ್ತೊಂದು ಕುತೂಹಲ. ಸದ್ಯಕ್ಕೆ‌ಇದರ ಕಲಾವಿದರ ವಿವರ ನಿಗೂಢವಾಗಿದೆ. ಅದು ಬಿಟ್ಟರೆ, ಸತ್ಯ ಹೆಗಡೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಹಾಗೆಯೇ ಮಹಾವೀರ್ ಸಾಬಣ್ಣರ್, ಸಂತೋಷ್ ಪಾಂಜಾಲ್ ಹಾಗೂ ವಿರೇಂದ್ರ ಮಲ್ಲಣ್ಣ ಸೇರಿದಂತೆ ಮಂಸೋರೆ ಅವರ ಟೀಮ್ ಇಲ್ಲೂ ಮುಂದುವರೆದಿದೆ. ಇದೆಲ್ಲ ಓಕೆ, ಮಂಸೋರೆ ಅವರ ಇಷ್ಟು ದೊಡ್ಡ ಪ್ರಾಜೆಕ್ಟ್ ಗೆ ಬಂಡವಾಳ ಹಾಕುತ್ತಿರುವ ನಿರ್ಮಾಪಕ ಯಾರು ? ಸದ್ಯಕ್ಕೆ ಅದು ನಿಗೂಢ. ಆ‌ಬಗ್ಗೆ ನಿರ್ದೇಶಕ ಮಂಸೋರೆ ಅವರನ್ನು ಕೇಳಿದರೆ, ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳೇ ಆಸಕ್ತಿ ವಹಿಸಿವೆ. ಇಷ್ಟರಲ್ಲಿಯೇ ಅದು ರಿವೀಲ್ ಆಗಲಿದೆ ಎನ್ನುತ್ತಾರೆ. ಹಾಗೆಯೇ ಕಲಾವಿದರ ಬಗೆಗಿನ ಕುತೂಹಲಕ್ಕೂ ಅವರು ಹಾಗೆಯೇ ಹೇಳುತ್ತಾರೆ. ಏನೇ ಆಗಲಿ ಮಂಸೋರೆ ಅವರ ಇಷ್ಟು ದೊಡ್ಡ ಪ್ರಯತ್ನಕ್ಕೆ ಸಿನಿ‌ಲಹರಿ‌ಕಡೆಯಿಂದ ಆಲ್ ದಿ ಬೆಸ್ಟ್.

ಮೋಡಗಳೆಲ್ಲಾ ರಕ್ತವರ್ಣ.. ಸಮುದ್ರವೆಲ್ಲ ಅಗ್ನಿಕುಂಡ.. ಭೂಭಾಗದ ತುಂಬೆಲ್ಲಾ ಅಧಿಕಾರದ ದಾಹ, ಸ್ವಾರ್ಥದ ವಿಷದುಸಿರು.. ಬೆನ್ನ ಹಿಂದೆ ಇರಿಯುವ, ಕಣ್ಣ ಮುಂದೆಯೂ ಗುಂಡಿಕ್ಕುವ ಶತ್ರುಗಳು…! ತಾಯಿನಾಡು, ತಮ್ಮತನ, ತನ್ನವರಿಗಾಗಿ ಉಪ್ಪಿನ ಹಬೆಯಲ್ಲಿ ಬಿಸಿನೆತ್ತರ ಹರಿಸಿ ಹೋರಾಡಿ ಇತಿಹಾಸದ ಪುಟಗಳಲ್ಲಿ ಕಂಡು ಕಾಣದಂತೆ ಉಳಿದುಹೋದ ವೀರಚರಿತ್ರೆ – ಅರಬ್ಬೀ ಸಮುದ್ರದ ಅಭಯರಾಣಿ ಅಬ್ಬಕ್ಕ..!!” ನಿಮ್ಮೆಲ್ಲರ ಪ್ರೀತಿ, ಬೆಂಬಲ, ಪ್ರೋತ್ಸಾಹ ಈ ಹೊಸ ಸಾಹಸಕ್ಕೆ ಪ್ರೇರೇಪಿಸಿದೆ. ಎಂದಿನಂತೆ ನಿಮ್ಮ ಆಶೀರ್ವಾದ ಬೆಂಬಲ ನಮ್ಮ ತಂಡದ ಮೇಲಿರಲಿ 

– ಮಂಸೋರೆ, ನಿರ್ದೇಶಕ

Related Posts

error: Content is protected !!