ಮತ್ತೊಂದು ಸ್ಪಸ್ಪೆನ್ಸ್- ಥ್ರಿಲ್ಲರ್ ಚಿತ್ರ
ಕನ್ನಡ ಚಿತ್ರರಂಗ ಗರಿಗೆದರಿರುವುದಂತೂ ಹೌದು. ದಿನ ಕಳೆದಂತೆ ಹೊಸಬರ ಚಿತ್ರಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ. ಆ ಸಾಲಿಗೆ “ಆ ಒಂದು ಕನಸು” ಚಿತ್ರವೂ ಸೇರಿದೆ. ಹೌದು, ರಂಗು ಕ್ರಿಯೇಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ “ಆ ಒಂದು ಕನಸು” ಚಿತ್ರಕ್ಕೆ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ರಾಜಕುಮಾರ್ ಕ್ಲಾಪ್ ಮಾಡಿ, ಬಾಲಕೃಷ್ಣ ಎಚ್. ಎಂ. ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಮೂಲಕ ವಿಷ್ಣು ನಾಚನೇಕರ್ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ವಿಷ್ಣು ನಾಚನೇಕರ್, ಈಗ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ತಮ್ಮ ಸಿನಿಮಾ ಕುರಿತು ಹೇಳಿಕೊಳ್ಳುವ ಅವರು, ” ಈವರೆಗೆ ನಾನು ಸುಮಾರು 22 ಚಿತ್ರಗಳಿಗೆ ಅಸೋಸಿಯೇಟ್ ಕೆಲಸ ಮಾಡಿದ್ದೇನೆ. ಸಾಕಷ್ಟು ಧಾರಾವಾಹಿಗಳಿಗೆ ನಿರ್ದೇಶಕನಾಗಿ, ಸಂಚಿಕೆ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನ ಮಾಡುವ ಅವಕಾಶ “ಆ ಒಂದು ಕನಸು” ಚಿತ್ರದ ಮೂಲಕ ಸಿಕ್ಕಿದೆ ಎಂದು ಹೇಳಿಕೊಂಡರು ನಿರ್ದೇಶಕ ವಿಷ್ಣು ನಾಚನಕೇರ್.
ಇನ್ನು, ಈ ಚಿತ್ರದ ಹೀರೋ ವಿಶ್ವಾಸ್. ನಾವಿಬ್ಬರೂ ಬಹಳ ದಿನಗಳ ಗೆಳೆಯರು. ಒಟ್ಟಿಗೆ ಒಂದು ಸಿನಿಮಾ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದೆವು. ಆದರೆ, ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಆ ಕನಸು ನಮ್ಮ “ಆ ಒಂದು ಕನಸು” ಈಡೇರುತ್ತಿದೆ. ನಿರ್ಮಾಪಕ ದಿಲೀಪ್ ಅವರ ಉತ್ಸಾಹ ಮತ್ತು ಪ್ರೋತ್ಸಾಹದಿಂದ ಈ ಚಿತ್ರಕ್ಕೆ ನಾನು ನಿರ್ದೇಶಕನಾಗುತ್ತಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಚಿತ್ರ. ಕಮರ್ಷಿಯಲ್ ಅಂಶಗಳೊಂದಿಗೆ ಸಿನಿಮಾ ಸಾಗಲಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನುಳಿದಂತೆ ಸಾಗರ ಹಾಗು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ವಿವರ ಕೊಟ್ಟರು ನಿರ್ದೇಶಕರು.
ಹೀರೋ ವಿಶ್ವಾಸ್ ಅವರಿಗೆ ಈ ಚಿತ್ರದ ಮೇಲೆ ತುಂಬಾನೇ ನಂಬಿಕೆ ಇದೆಯಂತೆ. ಒಂದಷ್ಟು ಕಾರಣಗಳಿಂದಾಗಿ ನಾನು ಕಳೆದ ಐದಾರು ವರ್ಷಗಳಿಂದ ಸಿನಿಮಾ, ಧಾರಾವಾಹಿಗಳಿಂದ ದೂರವಿದ್ದೆ. ಇದೀಗ ಪುನಃ ಎಂಟ್ರಿಯಾಗುತ್ತಿದ್ದೇನೆ. ತಮಿಳಿನ ಉದಯಂ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಥೆಯೇ ಈ ಚಿತ್ರದಲ್ಲಿ ಹೀರೋ. ಇದರಲ್ಲಿ ತುಂಬ ಸಾಫ್ಟ್ ಪಾತ್ರ ನನ್ನದು. ಹಲ್ಲಿ ಕಂಡರೂ ಹೆದರುವಂಥ ಪಾತ್ರವದು ಎಂದು ಹೇಳಿಕೊಂಡರು ವಿಶ್ವಾಸ್.
ನಿರ್ಮಾಪಕ ದಿಲೀಪ್ ಅವರು ಒಬ್ಬ ಉದ್ಯಮಿ. ಅವರಿಗೆ ಸಿನಿಮಾ ಮೇಲೆ ಪ್ರೀತಿ ಇತ್ತು. ಆಸಕ್ತಿಯೂ ಇದ್ದುದರಿಂದ ಒಳ್ಳೆಯ ಕಥೆಯೊಂದಿಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಒಳ್ಳೆಯ ತಂಡ ಸಿಕ್ಕ ಖುಷಿ ಅವರದು.
ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. “ಕನಸು ಕಾಣುವುದು ಮತ್ತು ಕಂಡ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಈ ಸಿನಿಮಾ ಸಾಗುತ್ತದೆ. ಇಲ್ಲಿ ಕನಸು ಕಾಣುವವರಾರು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ” ಎಂದರು ಸಾಯಿಕೃಷ್ಣ. ಧನ್ಯಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅಮಿತ್ ಹಾಸ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಮಾ. ಚಿರಾಯು ಚಕ್ರವರ್ತಿ, ಅಮಿತ್, ಗಿರೀಶ್ ಶಿವಣ್ಣ, ರಮೇಶ್ ಭಟ್, ಗಿರಿಜಾ ಲೋಕೇಶ್ಮ ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾ ರಾವ್ ಮತ್ತು ಜಯಶ್ರೀ ನಟಿಸುತ್ತಿದ್ದಾರೆ. ಅಭಿಷೇಕ್ ಜಿ. ರಾಯ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣವಿದೆ. ಸುಜನ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಹೈಟ್ ಮಂಜು ಮತ್ತು ಸ್ಟಾರ್ ಗಿರಿ ನೃತ್ಯ ನಿರ್ದೇಶನವಿದೆ.