13 ನೇ ಚಿತ್ರೋತ್ಸವ ಅನುಮತಿಗೆ ಮನವಿ ಅಕಾಡೆಮಿ ಸದಸ್ಯರ ನಿಯೋಗದಿಂದ ಸಿಎಂ ಭೇಟಿ

2021 ರ ಫೆಬ್ರವರಿಯಲ್ಲಿ ಚಿತ್ರೋತ್ಸವ ಸಾಧ್ಯತೆ- ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ

ಈ ಬಾರಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ಕೋರಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಮ್ಮ ಅಕಾಡೆಮಿಯ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೊರೊನಾ ಹಾವಳಿಯಿಂದ ಚಿತ್ರರಂಗ ಸಂಪೂರ್ಣ ಸೊರಗಿದೆ. ಈಗಷ್ಟೇ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಚಿತ್ರರಂಗ ಇನ್ನಷ್ಟು ವೇಗವಾಗಲು, ಪ್ರೇಕ್ಷಕರನ್ನು ಪುನಃ ಚಿತ್ರಮಂದಿರಗಳತ್ತ ಸೆಳೆಯಲು 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅನುಮತಿ ಕೊಟ್ಟು, ಅದಕ್ಕೆ ಬೇಕಾದ ಪೂರಕ ವಾತಾವರಣ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ನೀಡಲಾಗಿದೆ. ೨೦೨೧ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವಂತೆ ಅಕಾಡಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅವರ ನೇತೃತ್ವದ ನಿಯೋಗ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದಾರೆ ಎನ್ನಲಾಗಿದೆ.


ಕಳೆದ 12  ವರ್ಷಗಳಿಂದಲೂ ನಡೆದು ಬಂದಿರುವ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಯಶಸ್ವಿ ಕಂಡಿದೆ. ಜಗತ್ತಿನಾದ್ಯಂತ ಸುಮಾರು 5000 ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆ ಪೈಕಿ ಕೇವಲ 45 ಚಿತ್ರೋತ್ಸವಗಳಿಗೆ ಮಾತ್ರ ಅಂತಾರಾಷ್ಟ್ರೀಯ ಮನ್ನಣೆ ಸಿಕಿದೆ. ನಮಗೂ ಈ ಮನ್ನಣೆ ಸಿಗಬೇಕಾದರೆ, ಚಿತ್ರೋತ್ಸವ ಆಯೋಜಿಸಬೇಕಿದೆ. ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆ ಮಾನ್ಯತೆ ದೊರೆಯುವ ಸಾಧ್ಯತೆಯೂ ಇದೆ. ಹಾಗೊಂದು ವೇಳೆ ಈ ಮಾನ್ಯತೆ ಏನಾದರೂ ಸಿಕ್ಕರೆ, ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಹಾಗಾಗಿ 13 ನೇಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆಗೆ ಅನುಮತಿ ನೀಡುವುದರ ಜೊತೆಯಲ್ಲಿ ಆ ಚಿತ್ರೋತ್ಸವಕ್ಕೆ ಬೇಕಾಗುವ ಅಗತ್ಯ ಅನುದಾನ ಕಲ್ಪಿಸಿಕೊಡಬೇಕು ಎಂದು ನಿಯೋಗ ಮನವಿ ಮಾಡಿದೆ.


ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಮಾತ್ರ ಚಿತ್ರೋತ್ಸವ ನಡೆಯಲಿದೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸಿದರೆ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ವಿಷಯವನ್ನು ಈ ವೇಳೆ ಸಿಎಂ ಬಳಿ ಚರ್ಚಿಸಲಾಗಿದೆ.
ಅಂದಹಾಗೆ, ಈ ನಿಯೋಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಎನ್. ವಿದ್ಯಾಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ನಟಿ ಶ್ರುತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ರಿಜಿಸ್ಟ್ರಾರ್ ಜಿ.ಹಿಮಂತರಾಜು ಇದ್ದರು. ಅವರು ಈ ನಿಯೋಗದಲ್ಲಿದ್ದರು.

Related Posts

error: Content is protected !!