ತನಿಖೆಗೆ ಬಂದ ವಸಿಷ್ಠ -ಕಿಶೋರ್‌ ಜೊತೆ ಹೊಸ ಚಿತ್ರ

ವೃತ್ತಿ ಬದುಕಿನ ಜವಾಬ್ದಾರಿ ಕುರಿತ ಚಿತ್ರಣ

ಕನ್ನಡ ಚಿತ್ರರಂಗದಲ್ಲಿ ಈಗ ವಸಿಷ್ಠ ಸಿಂಹ ಫುಲ್‌ ಬಿಝಿ. ಒಂದು ರೌಂಡ್‌ ಸೌತ್‌ ಇಂಡಿಯಾ ರೌಂಡ್‌ ಹೊಡೆದಿರುವ ವಸಿಷ್ಠ ಸದ್ಯಕ್ಕಂತೂ ಕನ್ನಡದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲೂ ಅವರು ನಟಿಸುತ್ತಿರುವುದು ಖುಷಿಯ ವಿಷಯ. ಹೊಸ ಬಗೆಯ ಕಥೆ ಮತ್ತು ಪಾತ್ರಕ್ಕೆ ಸದಾ ಹಾತೊರೆಯುವ ಒಬ್ಬ ಅದ್ಭುತ ನಟ ವಸಿಷ್ಠ ಸಿಂಹ. ಈಗ ವಸಿಷ್ಠ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರೊಂದಿಗೆ ಮತ್ತೊಬ್ಬ ನಟ ಕಿಶೋರ್‌ ಕೂಡ ಸಾಥ್‌ ನೀಡುತ್ತಿದ್ದಾರೆ. ಈ ಇಬ್ಬರೂ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದಮೇಲೆ, ಅದೊಂದು ಹೊಸ ಬಗೆಯ ಚಿತ್ರ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ವಸಿಷ್ಠ ಸಿಂಹ, ನಟ

ಹೌದು, ವಸಿಷ್ಠ ಸಿಂಹ ಹಾಗೂ ಕಿಶೋರ್‌ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರದ ಮೂಲಕ ವಚನ್‌ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕುರಿತು ಮಾಧ್ಯಮ ಎದುರು ಒಂದಷ್ಟು ವಿವರ ಹಂಚಿಕೊಂಡಿದ್ದು ಹೀಗೆ.

ವಚನ್‌, ನಿರ್ದೇಶಕ

“ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ನಾನು “ಲೂಸಿಯಾʼ ಪವನ್‌ ಕುಮಾರ್‌ ಅವರ “ಯು ಟರ್ನ್‌” ಸಿನಿಮಾದಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದೆ. ಹೈದರಾಬಾದ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲೇ ಈ ಚಿತ್ರದ ಒನ್‌ಲೈನ್‌ ಹೊಳೆದಿತ್ತು. ಅಲ್ಲಿಂದ ಬೆಂಗಳೂರಿಗೆ ಬಂದವನೆ, ಡಿಓಪಿ ನವೀನ್‌ಕುಮಾರ್‌ ಅವರೊಂದಿಗೆ ಚರ್ಚೆ ಮಾಡಿದೆ. ಅವರು ಕಥೆ ಕೇಳಿದ ಕೂಡಲೇ ಇಷ್ಟಪಟ್ಟು, ಈ ಚಿತ್ರದ ಹೀರೋ ವಸಿಷ್ಠ ಸಿಂಹ ಹಾಗೂ ನಿರ್ಮಾಪಕ ಜನಾರ್ದನ್‌ ಅವರನ್ನು ಪರಿಚಯಿಸಿದರು. ಅಲ್ಲಿಂದ ಈ ಚಿತ್ರಕ್ಕೆ ಸುಮಾರು ಒಂಬತ್ತು ತಿಂಗಳ ಕಾಲ ಸ್ಕ್ರಿಪ್ಟ್‌ ಕೆಲಸ ನಡೆಯಿತು. ಇನ್ನೇನು ಸಿನಿಮಾ ಶುರು ಮಾಡಬೇಕು ಅಂತ ಹೊರಡುವಾಗಲೇ, ಕೊರೊನಾ ಸಮಸ್ಯೆ ತಲೆದೋರಿತು. ಆ ಬಳಿಕ ಇಷ್ಟ ತಿಂಗಳು ಕಾದು ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ ಎಂದು ತಮ್ಮ ಕಥೆ ಕುರಿತು ಹೇಳಿಕೊಂಡ ವಚನ್‌, ಇದೊಂದು ತನಿಖೆಯ ಕಥಾಹಂದರ ಹೊಂದಿದೆ. ಇಲ್ಲಿ ವಸಿಷ್ಠ ಸಿಂಹ ಹಾಗು ಕಿಶೋರ್‌ ಇದ್ದಾರೆ. ಇವರಿಬ್ಬರನ್ನೂ ಇಟ್ಟುಕೊಂಡು ಸ್ಕ್ರಿಪ್ಟ್‌ ಮಾಡೋದೇ ಒಂದು ಸಾಹಸ. ನನಗೆ ನನ್ನ ಕಥೆಯೇ ಸ್ಟ್ರೆಂಥ್.‌ ಉಳಿದಂತೆ ನನ್ನೊಂದಿಗೆ ಸ್ಟ್ರಾಂಗ್‌ ಟೆಕ್ನಿಕಲ್‌ ಟೀಮ್‌ ಇದೆ. ಬಹುತೇಕ ಬೆಂಗಳೂರಲ್ಲೇ ನಡೆಯೋ ಕಥೆ ಇದು. ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವ ಇಬ್ಬರು ಪೊಲೀಸ್‌ ಅಧಿಕಾರಿಗಳ ನಡುವೆ ನಡೆಯೋ ಕಥೆ ಇಲ್ಲಿ ಹೈಲೈಟ್.‌ ಅವರಿಬ್ಬರ ಒಳಜಗಳವೇ ಸಿನಿಮಾದ ಟ್ವಿಸ್ಟ್‌. ಒಟ್ಟಾರೆ ವೃತ್ತಿ ಜೀವನದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಕೆಲಸ ಮಾಡಿ ತೋರಿಸಿ, ತಮ್ಮ ವೃತ್ತಿ ಬದುಕಲ್ಲಿ ತಾವು ಹೀರೋ ಅನ್ನುವುದನ್ನು ಸಾಬೀತುಪಡಿಸುತ್ತಾರೆ. ಅದನ್ನೇ ಇಲ್ಲಿ ಹೇಳಹೊರಟಿದ್ದೇವೆʼ ಎಂದು ವಿವರ ಕೊಡುತ್ತಾರೆ ವಚನ್.

ಕಿಶೋರ್‌, ವಸಿಷ್ಠ

ಖುಷಿಯಲ್ಲಿದ್ದ ವಸಿಷ್ಠ ಸಿಂಹ, “ಶೀರ್ಷಿಕೆ ಇಡದ ಚಿತ್ರವಿದು. ಇದನ್ನು “ವಸಿಷ್ಠ ಗೆಳೆಯರ ಬಳಗ”ದ ಚಿತ್ರ ಎಂದೂ ಕರೆಯಬಹುದು. ಇದೊಂದು ನಿರ್ದೇಶಕನ ಕನಸು. ಒಳ್ಳೆಯ ತಂಡ ಜೊತೆಗಿದೆ. ಸಿನಿಮಾ ಮೇಲೆ ಭವ್ಯ ಭರವಸೆಯೂ ಇದೆ. ಇಬ್ಬರು ಪೊಲೀಸ್‌ ಅಧಿಕಾರಿಗಳ ತನಿಖೆಯ ಜರ್ನಿ ಇಲ್ಲಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ತನ್ನದೇ ಆದ ವಿಶೇಷತೆ ಇದೆ. ಮಂಡ್ಯ, ಮಂಗಳೂರು, ಕೋಲಾರ, ಉತ್ತರ ಕರ್ನಾಟಕ ಹೀಗೆ ರಾಜ್ಯದ ನಾನಾ ಭಾಗದ ನೈಜ ಭಾಷೆ ಇಲ್ಲಿರಲಿದೆ. ಒಂದಂತೂ ಗ್ಯಾರಂಟಿ ಕೊಡ್ತೀನಿ. ಇದು ಅಪ್ಪಟ ಮನರಂಜನೆಯ, ಎಲ್ಲರಿಗೂ ಇಷ್ಟವಾಗುವ ಸಿನಿಮಾ ಆಗಲಿದೆ. ಪೊಲೀಸ್‌ ಅಧಿಕಾರಿ ಅಂದಮೇಲೆ, ಆ ಶಿಸ್ತು, ಗತ್ತು, ಹಮ್ಮು-ಗಿಮ್ಮು ಕಾಮನ್.‌ ಅದೆಲ್ಲದರ ಜೊತೆಯಲ್ಲಿ ಇಲ್ಲೊಂದು ಕೇಸ್‌ ತನಿಖೆಯ ಜಾಡು ಹಿಡಿದು ಹೊರಡು ಅಧಿಕಾರಿಗಳ ಸ್ಪೆಷಲ್‌ ವರ್ಕ್‌ ಕಾಣಬಹುದು. ಅದೇ ಸಿನಿಮಾದ ಜೀವಾಳ. ನೈಜತೆಗೆ ಹತ್ತಿರ ಎನಿಸುವ ದೈಶ್ಯಗಳು ಇಲ್ಲಿವೆ. ಆಕ್ಷನ್‌ ಕೂಡ ಇದೆಯಾದರೂ, ಅದೊಂದು ರೀತಿ ಸ್ಪೆಷಲ್‌ ಡಿಸೈನ್‌ ಆಗಿದೆ” ಎನ್ನುತ್ತಾರೆ ವಸಿಷ್ಠ ಸಿಂಹ.

ಜನಾರ್ದನ್‌, ನಿರ್ಮಾಪಕ

ನಿರ್ಮಾಪಕ ಜನಾರ್ದನ್‌ ಅವರಿಗೆ ಇದು ಮೊದಲ ಚಿತ್ರ. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಜನಾರ್ದನ್‌ ಅಪ್ಪಟ ಕನ್ನಡ ಸಿನಿಮಾ ಮಾಡುವ ಕನಸು ಕಂಡಿದ್ದರಂತೆ. ಅದಕ್ಕೆ ಸರಿಯಾಗಿ ಈ ಕಥೆ ಸಿಕ್ಕಿದೆ. ವಸಿಷ್ಠ ಸಿಂಹ ಗೆಳೆಯರಾಗಿದ್ದರಿಂದ ಅವರೊಂದಿಗೆ ಚರ್ಚಿಸಿ ಈ ಸಿನಿಮಾಗೆ ಕೈ ಹಾಕಿದ್ದಾರೆ.

ಮಾಸ್ತಿ, ಸಂಭಾಷಣೆಕಾರ

ಮಾಸ್ತಿ ಈ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಅವರಿಗೆ ನಿರ್ದೇಶಕ ವಚನ್‌ ಹೇಳಿದ ಕತೆ ಇಷ್ಟವಾಗಿ, ನೈಜತೆಗೆ ಹತ್ತಿರ ಎನಿಸಿತಂಎ. ಪೊಲೀಸ್‌ ವ್ಯವಸ್ಥೆ, ಅವರೊಳಗಿರುವ ಈಗೋ ಇತ್ಯಾದಿ ವಿಷಯಗಳ ಮೇಲೆ ಕಥೆ ಸಾಗಲಿದೆ. ಒಳ್ಳೆಯ ನಟರಿದ್ದಾರೆ. ಹಾಗಾಗಿ ನಮ್ಮಂತಹ ಬರಹಗಾರರಿಗೂ ಅದೊಂದು ಚಾಲೆಂಜ್‌ ಎನಿಸುತ್ತೆ ಎಂಬುದು ಮಾಸ್ತಿ ಮಾತು.

ಅನೂಪ್‌ ಸೀಳಿನ್‌, ಸಂಗೀತ ನಿರ್ದೇಶಕ

ಸಂಗೀತ ನೀಡುತ್ತಿರುವ ಅನೂಪ್‌ ಸೀಳಿನ್‌, “ಲಾಕ್‌ಡೌನ್‌ ಮುನ್ನವೇ ಶುರುವಾಗಬೇಕಿತ್ತು. ಕೊರೊನಾ ಬಂದಿದ್ದರಿಂದ ತಡವಾಯ್ತು. ಅದರಲ್ಲೂ ಸಿನಿಮಾ ಶುರುವಾಗುತ್ತೋ ಇಲ್ಲವೋ ಎಂಬ ಭಯವಿತ್ತು. ಯಾಕೆಂದರೆ, ಒಳ್ಳೆಯ ಕಥೆ ಇದ್ದುದರಿಂದ ಇದು ಸಿನಿಮಾ ರೂಪದಲ್ಲಿ ಹೊರಬರಬೇಕೆಂಬ ಆಸೆ ಇತ್ತು. ವಚನ್‌ ಒಳ್ಳೆಯ ಕಥೆ ಮಾಡಿದ್ದಾರೆ. ತಕ್ಕಂತೆ ಹೀರೋಗಳನ್ನೂ ಆಯ್ಕೆ ಮಾಡಿ, ತಾಂತ್ರಿಕತೆಯಲ್ಲೂ ಸ್ಟ್ರಾಂಗ್‌ ಟೀಮ್‌ ಕಟ್ಟಿಕೊಂಡಿದ್ದಾರೆ. ಇಲ್ಲಿ ಹಾಡುಗಳೂ ಇವೆ. ಅದಕ್ಕಿಂತ ಹೆಚ್ಚಾಗಿ ಹಿನ್ನೆಲೆ ಸಂಗೀತಕ್ಕೆ ಒತ್ತು ಕೊಡಬೇಕಿದೆ. ಬಹುಶಃ ನಿರ್ದೇಶಕರು ಆ ಹಿನ್ನೆಲೆಯಿಂದ ನನ್ನ ಆಯ್ಕೆ ಮಾಡಿರಬೇಕು. ಹಾಡುಗಳಿಗೆ ಪ್ರಮೋದ್‌ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ ಎಂಬ ವಿವರ ಕೊಟ್ಟರು ಅನೂಪ್‌.

ಹರೀಶ್‌ ಕೊಮ್ಮೆ, ಸಂಕಲನಕಾರ

ಚಿತ್ರಕ್ಕೆ ಹರೀಶ್‌ ಕೊಮ್ಮೆ ಸಂಕಲನವಿದೆ. ಧರ್ಮಣ್ಣ ಕಡೂರು ಇಲ್ಲಿ ಬ್ಯಾಂಡ್‌ ಸೆಟ್‌ ಹುಡುಗನ ಪಾತ್ರ ಮಾಡುತ್ತಿದ್ದಾರಂತೆ. ಉಳಿದಂತೆ ಚಿತ್ರಕ್ಕೆ ಸತೀಶ್‌ ಕಲಾನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮಣಿ ಶಶಾಂಕ್‌ ಇದ್ದಾರೆ. ಮಹಾಂತೇಶ್‌ ಬಡಿಗೇರ್‌ ಸೇರಿದಂತೆ ಹಲವು ಕಲಾವಿದರಿದ್ದಾರೆ. ನಾಯಕಿ ಆಯ್ಕೆ ಇನ್ನಷ್ಟೇ ಆಗಬೇಕಿದೆ.

Related Posts

error: Content is protected !!