ಟೈಟಲ್ಗೊಂದು ಪ್ರೋಮೋ- ಇದು ಕನ್ನಡದಲ್ಲಿ ಮೊದಲ ಪ್ರಯತ್ನ
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಪಕ್ಕಾ ತಯಾರಿಯೊಂದಿಗೆ ಒಂದಷ್ಟು ಪ್ರಯೋಗದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಗುರುತಿಸಿಕೊಳ್ಳಲು ಬರುತ್ತಿರೋ ಹೊಸ ನಿರ್ದೇಶಕ ಯುವಧೀರ. ಹೌದು, ಈ ಯುವಧೀರ ಅವರಿಗೆ ಸಿನಿಮಾರಂಗ ಹೊಸದಲ್ಲ. ಕಳೆದ ಒಂದುವರೆ ದಶಕದಿಂದಲೂ ಸಿನಿಮಾರಂಗದಲ್ಲಿ ಜೀವಿಸಿದ್ದಾರೆ. ಈಗಲೂ ಜೀವಿಸುತ್ತಿದ್ದಾರೆ. ಈಗ ಹೊಸ ಸುದ್ದಿಯೆಂದರೆ, ಹೊಸತನ ಇಟ್ಟುಕೊಂಡಿರುವ ಕಥೆ ಹೆಣೆದು, ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅವರ ಕನಸಿಗೆ ನಿರ್ಮಾಪಕ ಸುರೇಶ ಬಿ. ಅವರು ಬಣ್ಣ ತುಂಬಲು ಸಜ್ಜಾಗಿದ್ದಾರೆ.
ಇಬ್ಬರಿಗೂ ಇದು ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ಒಂದಷ್ಟು ಗಮನ ಸೆಳೆಯು ಅಂಶಗಳೊಂದಿಗೆ ಕನ್ನಡ ಸಿನಿಪ್ರೇಮಿಗಳಿಗೆ ಸಿನಿಮಾ ಕಟ್ಟಿಕೊಡುವ ಉದ್ದೇಶ ಇವರಿಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಯುವಧೀರ, ತಮ್ಮ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲು ತಯಾರಿ ಮಾಡಿಕೊಂಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ನವೆಂಬರ್ ೨೯ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕ ಯುವಧೀರ ಅವರು, ಶೀರ್ಷಿಕೆಗಾಗಿಯೇ ಒಂದು ಪ್ರೋಮೋ ಮಾಡಿದ್ದಾರೆ. ಅಂದು ಪ್ರೋಮೋ ಮೂಲಕ ಚಂದದ ಶೀರ್ಷಿಕೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.
ಅಷ್ಟಕ್ಕೂ ಯುವಧೀರ ಅವರ ಶೀರ್ಷಿಕೆಯೇ ಒಂದಷ್ಟು ವಿಭಿನ್ನವಾಗಿದೆ. ಕಥೆಗೆ ಪೂರಕವಾಗಿಯೇ ಅವರು ಆ ಶೀರ್ಷಿಕೆ ಇಟ್ಟಿದ್ದಾರಂತೆ. ಆ ಶೀರ್ಷಿಕೆ ಕುರಿತು ಹೇಳುವ ಯುವಧೀರ, ಎಲ್ಲರಿಗೂ ಸುಲಭವೆನಿಸುವ, ಎಲ್ಲರ ಬಾಯಲ್ಲೂ ಸದಾ ಬರುವ ಪದವನ್ನೇ ಇಟ್ಟುಕೊಂಡು ಶೀರ್ಷಿಕೆ ಇಟ್ಟಿದ್ದಾರೆ. ಆ ಶೀರ್ಷಿಕೆಗಾಗಿ ಒಂದು ಚಂದದ ಟೈಟಲ್ ಟೀಸರ್ ಮಾಡಿಕೊಂಡಿರುವ ಯುವಧೀರ, ಜನವರಿ ಬಳಿಕ ಚಿತ್ರೀಕರಣಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು ಸರ್ವಮಂಗಳ ಸುರೇಶ ಅವರು ಅರ್ಪಿಸುತ್ತಿದ್ದು, ಶ್ರೀನಿಧಿ ಪಿಕ್ಚರ್ಸ್ ಮೂಲಕ ತಯಾರಾಗುತ್ತಿದೆ. ಯುವಧೀರ ಅವರು, ಇಷ್ಟು ವರ್ಷಗಳ ಅನುಭವಗಳನ್ನು ಒಟ್ಟಿಗೆ ಸೇರಿಸಿಕೊಂಡು ಒಂದು ಚಂದದ ಈ ಸಿನಿಮಾಗೆ ಕೈ ಹಾಕಿದ್ದಾರೆ. ಇದೊಂದು ಡಾರ್ಕ್ ಹ್ಯೂಮರ್ ಸೆಟೈರ್ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್, ಥ್ರಿಲ್ಲರ್, ಡ್ರಾಮಾ, ಕ್ರೈಮ್, ಸ್ಟಂಟ್ಸ್ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್ಗೆ ಸೇರುವ ಸಿನಿಮಾ ಅಲ್ಲ ಅನ್ನುವ ಅವರು, ಹಲವು ಜಾನರ್ಗಳ ಸಮ್ಮಿಶ್ರಣ ಇಲ್ಲಿದೆ. ಹಾಗಾಗಿ ಇದನ್ನು ಹೊಸತನದ ಸಿನಿಮಾ ಎನ್ನಬಹುದು ಎಂಬುದು ಯುವಧೀರ ಮಾತು.
ಈ ಚಿತ್ರಕ್ಕೆ ಇನ್ನೂ ನಾಯಕ, ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ಆಗಿಲ್ಲ. ಆದರೆ, ತಾಂತ್ರಿಕ ವರ್ಗ ಅಂತಿಮವಾಗಿದೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತವಿದೆ. ಮರಿಸ್ವಾಮಿ ಅವರ ಸಂಕಲನವಿದೆ. ಕುಮಾರ್ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸದ್ಯಕ್ಕೆ ಟೈಟಲ್ ಟೀಸರ್ ಮೇಕಿಂಗ್ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.