ಯಾರೋ ಹೆಣೆದ ಬಲೆಗೆ ಸೆರೆ ಸಿಕ್ಕ ಜೀವ

ಆಸೆ -ದುರಾಸೆ, ಸುಳ್ಳು, ಮೋಸಕ್ಕೆ ಬೆಂದ ಮನಸು!

ಚಿತ್ರ ವಿಮರ್ಶೆ

“ನೀನ್‌ ಯಾಕೆ ಈ ಕೊಲೆ ಮಾಡಿದೆ…”
– ಯಾರೂ ಇರದ ಆ ಮನೆಯೊಳಗೆ ಹೋಗಿ ಸಿಲುಕುವ  ಯುವಕನೊಬ್ಬನ ಮೊಬೈಲ್‌ ಕರೆಯಲ್ಲಿ, ಹೆಣ್ಣು ಧ್ವನಿಯೊಂದು ಈ ಪ್ರಶ್ನೆ ಕೇಳುತ್ತೆ. ಅಷ್ಟಕ್ಕೂ ಅಲ್ಲಿ ಆ ಕೊಲೆ ಮಾಡಿದ್ದು ಯಾರು, ಯಾಕೆ, ಆ ಹೆಣ್ಣು ಧ್ವನಿ ಯಾರದ್ದು, ಆ ಕೊಲೆ  ಮಾಡಿದ್ದು ಆ ಯುವಕನಾ ಅಥವಾ ಬೇರೆ ಯಾರದ್ದಾದರೂ ಕೈವಾಡವಿದೆಯಾ?
– ಹೀಗೆ ಇವಿಷ್ಟೂ ಕುತೂಹಲದೊಂದಿಗೆ ಅಂತ್ಯದವರೆಗೂ ಸಾಗುವ “ಅರಿಷಡ್ವರ್ಗ” ಚಿತ್ರದ ಒನ್‌ಲೈನ್.

ಒಂದು ಕೊಲೆ ಸುತ್ತ ಸಾಗುವ‌ ರೋಚಕ ಕಥಾಹಂದರ ಎನ್ಲಡ್ಡಿಯಿಲ್ಲ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕ್ರೈಮ್‌ ಥ್ರಿಲ್ಲರ್‌ ಸ್ಟೋರಿ ಬಂದಿವೆ. ಮರ್ಡರ್‌ ಮಿಸ್ಟ್ರಿ ಕಥೆಗಳು ಬಂದು ಹೋಗಿವೆ. ಅಂಥದ್ದೇ, ಸಾಕಷ್ಟು ತಿರುವುಗಳ ಜೊತೆಗೆ ಮುಂದೇನಾಗುತ್ತೆ ಎಂಬ ಸಣ್ಣ ಆತಂಕದಲ್ಲೇ ನೋಡಿಸಿಕೊಂಡು ಹೋಗುವ ತಾಕತ್ತು ಈ ಚಿತ್ರಕ್ಕಿದೆ ಎಂಬುದೇ ಸಮಾಧಾನ. ನಿರ್ದೇಶಕ ಅರವಿಂದ್‌ ಕಾಮತ್‌ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಿದೆ. ಹೆಣೆದಿರುವ ಚಿತ್ರಕಥೆಯಲ್ಲಿ ಬಿಗಿ ಹಿಡಿತವಿದೆ. ಏನು ಹೇಳಬೇಕು, ಎಷ್ಟು ಹೇಳಬೇಕು, ಯಾವುದನ್ನು ತೋರಿಸಬೇಕು ಎಂಬುದರ ಸ್ಪಷ್ಟತೆ ಇದೆ. ಹಾಗಾಗಿ “ಅರಿಷಡ್ವರ್ಗ” ಯಾವುದೇ ಗೊಂದಲವಿಲ್ಲದೆ, ಎಲ್ಲಿಯೂ ಪ್ರಶ್ನೆಗಳಿಗೆ ಆಸ್ಪದ ನೀಡದೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ.


ಮೊದಲೇ ಹೇಳಿದಂತೆ ಇದೊಂದು ಕ್ರೈಮ್‌ ಕುರಿತಾದ ಕಥೆ. ಒಂದು ಕೊಲೆಯ ಸುತ್ತ ನಡೆಯುವ ಕಥೆಗೆ ಅಷ್ಟೇ ಇಷ್ಟವಾಗುವಂತಹ ಚಿತ್ರಕಥೆ ಕೂಡ ಚಿತ್ರಕ್ಕೆ ಸಾಥ್‌ ನೀಡಿರುವುದೇ ಚಿತ್ರದ ಮೆಚ್ಚುಗೆಗೆ ಕಾರಣ. ಇಲ್ಲಿ ಹೊಡಿ, ಬಡಿ,ಕಡಿ ಎಂಬ ಸದ್ದಿನ ಆರ್ಭಟವಿಲ್ಲ. ತಲ್ಲಣಿಸೋ ಕಥೆಯೊಳಗೆ ಬಿಸಿಯುಸಿರಿನ ಸ್ಪರ್ಶ ಕೊಡುವ ಮೂಲಕ ಹಿಡಿಯಷ್ಟು ಕಾಮ, ಕ್ರೋಧ, ಬೊಗಸೆಯಷ್ಟು ಆಸೆ, ದುರಾಸೆ,ಬಯಕೆ, ಸುಳ್ಳು, ಅಧಿಕಾರ, ನಿಯತ್ತು, ಅಸಹಾಯಕತೆ… ಇವೆಲ್ಲದರ ಮಿಶ್ರಣದ ಜೊತೆ ಥ್ರಿಲ್‌ ಎನಿಸುವ ನಿರೂಪಣೆಯೊಂದಿಗೆ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳು ಒಂದೊಂದು ರೀತಿ ತಪ್ಪಾಗಿ ಅರ್ಥೈಸಿಕೊಂಡು ಕಾಣದ ಸುಳಿಯಲ್ಲಿ ಸಿಲುಕಿ ಆ ಸಂಕಷ್ಟಗಳಿಂದ ಹೊರಬರಲು ಹೆಣಗಾಡುವ ಹೋರಾಟವೇ ಚಿತ್ರದ ಹೈಲೈಟ್.‌ ಆ ಹೋರಾಟ, ಚೀರಾಟದ ಚಿತ್ರಣವನ್ನು ಅಷ್ಟೇ ಪರಿಣಾಮಕಾರಿಯಾಗಿಸಿರುವ ನಿರ್ದೇಶಕರ ಜಾಣತನ ಇಲ್ಲಿ ಇಷ್ಟವಾಗುತ್ತೆ.


ಇಷ್ಟಕ್ಕೂ ಕಥೆ ಏನು?
ಮನೆಯೊಂದರಲ್ಲಿ ಚಿತ್ರ ನಿರ್ಮಾಪಕ, ಉದ್ಯಮಿ ಮಂಜುನಾಥ ಭಟ್‌ ಅವರ ಕೊಲೆ ನಡೆದಿರುತ್ತೆ. ಈ ಸಂಬಂಧ ಆ ಮನೆಯಲ್ಲಿದ್ದ ಮೂವರು ಶಂಕಿತರನ್ನು ಬಂಧಿಸಲಾಗುತ್ತೆ. ಅಷ್ಟಕ್ಕೂ ಆ ಮನೆಯಲ್ಲಿನ ಕೊಲೆಗೂ ಆ ಮೂವರು ಶಂಕಿತರಿಗೆ ಸಂಬಂಧವಿದೆಯಾ? ಗೊತ್ತಿಲ್ಲ. ಆ ಕುರಿತು ನಡೆಯುವ ತನಿಖೆಯೇ ಇಡೀ ಸಿನಿಮಾದ ಜೀವಾಳ. ಇಲ್ಲಿ ಯಾರೋ ಯಾರಿಗಾಗಿಯೋ ದಾಳವಾಗುತ್ತಾರೆ ಅನ್ನುವ ಅಂಶ ಮೆಲ್ಲನೆ ಗೊತ್ತಾಗುತ್ತಿದ್ದಂತೆ, ಆ ಕೊಲೆಯ ಹಿಂದಿನ ರಹಸ್ಯಕ್ಕೆ ಮತ್ತಷ್ಟು ತಿರುವು ಸಿಗುತ್ತಾ ಹೋಗುತ್ತದೆ. ಆ ತಿರುವಿನಲ್ಲೇ ಸಾಕಷ್ಟು ರೋಚಕತೆ ಇದೆ. ಫಿಫ್ಟಿ ಪ್ಲಸ್‌ ಉದ್ಯಮಿಯನ್ನು ಮದುವೆಯಾದ ಯುವತಿಯ ಬಯಕೆ ಒಂದೆಡೆಯಾದರೆ, ಅದನ್ನು ಈಡೇರಿಸಲು ಆಗದೆ ಒಳಗೊಳಗೇ ನೋವು ಅನುಭವಿಸುವ ಉದ್ಯಮಿಯ ಸ್ಥಿತಿ ಇನ್ನೊಂದೆಡೆ, ಈ ಮಧ್ಯೆ ತಾನು ನಟಿ ಆಗಬೇಕು ಅನ್ನೋ ಮತ್ತೊಬ್ಬ ಹುಡುಗಿಯ ಆಸೆ, ನಾನೊಬ್ಬ ಹೀರೋ ಆಗಬೇಕು ಅನ್ನೋ ಪ್ರೀತಿಯೂ ಹುಡುಗನೊಬ್ಬನದು ಅದೇ ಕನಸು. ಉದ್ಯಮಿ ಪತ್ನಿಯ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಗಬಹುದೇನೋ ಎಂಬ ಆಸೆಯ ಕಂಗಳಲ್ಲಿ ನಟಿಯ ಹುಚ್ಚು ಹಿಡಿಸಿಕೊಂಡ ಹುಡುಗಿ, ಹೀರೋ ಆಗುವ ಕನಸು ಕಟ್ಟಿಕೊಂಡ ಹುಡುಗ  ಅವರ ಮನೆಗೆ ಬಂದಾಗ, ಅಲ್ಲಿ ನಡೆಯೋ ದೃಶ್ಯವೇ ಬೇರೆ. ಅಲ್ಲಿ ಉದ್ಯಮಿ ಕೊಲೆ ನೋಡಿ ದಂಗಾಗುತ್ತಾರೆ. ಅವರಷ್ಟೇ ಅಲ್ಲ, ಆ ಉದ್ಯಮಿ ಮನೆಗೆ ಕನ್ನ ಹಾಕಲು ಸಂಚು ರೂಪಿಸುವ ಕಳ್ಳನೊಬ್ಬನೂ ಆ ಮನೆಗೆ ಎಂಟ್ರಿಯಾಗುತ್ತಾನೆ. ಅಲ್ಲಿಗೆ ಆ ಮೂವರು ಕೊಲೆಯಾದ ಉದ್ಯಮಿ ಮನೆಯಲ್ಲಿ ಬಂಧಿಯಾಗುತ್ತಾರೆ. ಹೊರ ಹೋಗೋಕೂ ಭಯ, ಆತಂಕ ಕಾರಣ, ಎಲ್ಲವೂ ಆ ಮನೆಯೊಳಗಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆ. ಮುಂದೆ ಪೊಲೀಸ್‌ ತನಿಖೆ ಶುರುವಾಗುತ್ತೆ. ಇಲ್ಲಿ ಮುಖ್ಯವಾಗಿ “ಸಂಬಂಧ”ದ ಅಂಶವೂ ಗಮನಿಸಲೇಬೇಕು. ಅದನ್ನೂ ಕೂಡ ವಾಸ್ತವತೆಗೆ ಹತ್ತಿರವಾಗುವಂತೆ ಕಟ್ಟಿಕೊಡಲಾಗಿದೆ. ಹಾಗಾದರೆ, ಆ ಕೊಲೆ ಮಾಡಿದ್ದು ಯಾರು? ಈ ಪ್ರಶ್ನೆಯನ್ನಿಟ್ಟುಕೊಂಡು ಕೊನೆಯವರೆಗೂ ಕುತೂಹಲದೊಂದಿಗೆ ಸಿನಿಮಾ ತೋರಿಸಿರುವ ರೀತಿಗೆ ಮೆಚ್ಚಬೇಕು. ಎಲ್ಲಾ ಸರಿ, ಕೊಲೆಗಾರ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ, “ಅರಿಷಡ್ವರ್ಗ” ನೋಡಬೇಕು.

ನಿರ್ದೇಶಕ ಅರವಿಂದ್‌ ಕಾಮತ್‌  ಕಥೆ, ಚಿತ್ರಕಥೆ, ಸಂಭಾಷಣೆಯನ್ನಷ್ಟೇ ಅಲ್ಲ, ನೋಡುಗರಿಗೂ ಅಂದಗಾಣಿಸುವಂತೆ ನಿರೂಪಿಸಿ, ಪ್ರತಿ ಪಾತ್ರಗಳನ್ನೂಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲರ್ದ ಕುತೂಹಲ ಕೆರಳಿಸುತ್ತಾ ಸಾಗುವ ಸಿನಿಮಾ ದ್ವಿತಿಯಾರ್ದದಲ್ಲಿ ಆ ಕುತೂಹಲ ದುಪ್ಪಟ್ಟಾಗುತ್ತೆ. ಇಷ್ಟಕ್ಕೆಲ್ಲಾ ಕಾರಣ, ಮತ್ತದೇ ಕಥೆ, ಪಾತ್ರಗಳ ಆಯ್ಕೆ, ಅವಿನಾಶ್‌ ಎಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ. ನಂದ ಗೋಪಾಲ್‌ ತನಿಖಾಧಿಕಾರಿಯಾಗಿ ಗಮನಸೆಳೆಯುತ್ತಾರೆ. ಉಳಿದಂತೆ
ಅಂಜು ಆಳ್ವಾ, ಸಂಯುಕ್ತಾ ಹೊರನಾಡು, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌ ಇವರೆಲ್ಲರೂ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಚಿತ್ರದ ವೇಗ ಹೆಚ್ಚಿಸಿರೋದು ಬಾಲಾಜಿ ಮನೋಹರ್‌ ಛಾಯಾಗ್ರಹಣ ಮತ್ತು ಅರವಿಂದ್‌ ಅವರ ಸಂಕಲನ.  ಉದಿತ್‌ ಹರಿದಾಸ್‌ ಸಂಗೀತವೂ ಸ್ಕೋರ್‌ ಮಾಡಿದೆ.  “ಭಂಗಿ ಸೇದೋ ಭಂಗಿ ನೋವುಗಳೆಲ್ಲ ಹೋಗಲಿ ಹಿಂಗಿ..”  ಸೇರಿದಂತೆ ಅಲ್ಲಲ್ಲಿ ಕೇಳುವ ಹಾಡು ಕಥೆರೆ ಪೂರಕ ಎನಿಸಿದೆ.


ಕೊನೇ ಮಾತು- ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆ ತೋರಿಸಬೇಕು, ನೋಡುಗರನ್ನು ಎಷ್ಟರಮಟ್ಟಿಗೆ ಹಿಡಿದು ಕೂರಿಸಬೇಕು ಎಂಬ ಜಾಣ್ಮೆಯೇ “ಅರಿಷಡ್ವರ್ಗ” ನೋಡುವಿಕೆಗೆ ಕಾರಣ.

ಚಿತ್ರ : ಅರಿಷಡ್ವರ್ಗ
ನಿರ್ಮಾಣ : ಕನಸು ಟಾಕೀಸ್‌
ನಿರ್ದೇಶನ: ಅರವಿಂದ್‌ ಕಾಮತ್‌
ತಾರಾಗಣ: ಅವಿನಾಶ್‌,  ಸಂಯುಕ್ತಾ ಹೊರನಾಡು, ಅಂಜು ಆಳ್ವಾ ನಾಯಕ್‌, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌, ಮಹೇಶ್‌ ಬಂಗ್‌ ಇತರರು.

 

Related Posts

error: Content is protected !!