ಮತ್ತೆ ಮದಗಜನ ಸದ್ದು!

ಡಿಸೆಂಬರ್‌ 1ರಿಂದ 3ನೇ ಹಂತದ ಶೂಟಿಂಗ್‌

ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ

ಶ್ರೀಮುರಳಿ ಅಭಿನಯದ “ಮದಗಜ” ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ಚಿತ್ರ ಎರಡು ಹಂತಗಳ ಚಿತ್ರೀಕರಣ ಮುಗಿಸಿದ್ದು, ಈಗ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದೆ. ಹೌದು, ಸಾಕಷ್ಟು ಕುತೂಹಲ ಕೆರಳಿಸಿರುವ “ಮದಗಜ” ಈಗ ಅದ್ಧೂರಿ ಸೆಟ್‌ನಲ್ಲಿ ಶೂಟಿಂಗ್‌ ನಡೆಸಲು ಹಲವು ರೀತಿಯ ಯೋಜನೆ ಹಾಕಿಕೊಂಡಿದೆ. ನಿರ್ದೇಶಕ ಮಹೇಶ್‌ಕುಮಾರ್‌ ಅವರು ಕಲಾ ನಿರ್ದೇಶಕ ಮೋಹನ್‌ ಬಿ.ಕೆರೆ ಅವರಿಗೆ ಒಂದು ದೊಡ್ಡ ಜವಾಬ್ದಾರಿ ವಹಿಸಿದ್ದು, ಮಿನರ್ವ ಮಿಲ್‌ ಹಾಗೂ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್‌ ಹಾಕುವ ಕೆಲಸ ಕೊಟ್ಟಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳು ಮುಗಿಯುತ್ತ ಬಂದಿದ್ದು, ಡಿಸೆಂಬರ್ 1ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ.


“ಮದಗಜ” ಒಂದು ಪಕ್ಕಾ ಫ್ಯಾಮಿಲಿ ಆಕ್ಷನ್ ಡ್ರಾಮಾ ಆಗಿದ್ದು, ಶ್ರೀಮುರಳಿ ಅವರ ಹಿಂದಿನ ಸಿನಿಮಾಗಳಿಗಿಂತಲೂ ವಿಭಿನ್ನವಾದ ಆಕ್ಷನ್‌ ಮತ್ತು ಕಥೆಯೊಂದಿಗೆ ಅಭಿಮಾನಿಗಳನ್ನು ರಂಜಿಸಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು, ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿ ಬಜೆಟ್‌ನಲ್ಲೇ ನಿರ್ಮಾಣ ಮಾಡುತ್ತಿದ್ದಾರೆ.

ಉಮಾಪತಿ, ನಿರ್ಮಾಪಕ

“ರಾಬರ್ಟ್” ಸಿನಿಮಾ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ “ಮದಗಜ” ಚಿತ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕರು ಶ್ರೀಮುರಳಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಮೊದಲ ಹಂತ ವಾರಣಾಸಿಯಲ್ಲಿ ಮುಗಿದಿದ್ದು, ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.


ಈ ಚಿತ್ರಕ್ಕೆ ಆಶಿಕಾ ರಂಗನಾಥ್‌ ಅವರು ಶ್ರೀಮುರಳಿಗೆ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತೆಲುಗು ಖ್ಯಾತ ನಟ ಜಗಪತಿ ಬಾಬು ವಿಲನ್‌ ಆಗಿದ್ದು, ಸುಮಾರು 20 ವರ್ಷದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪುನಃ ಬರುತ್ತಿರುವುದು ವಿಶೇಷತೆಗಳಲ್ಲೊಂದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ. ಚೇತನ್ ಕುಮಾರ್ ಸಾಹಿತ್ಯವಿದೆ.

ಮಹೇಶ್‌ ಕುಮಾರ್‌, ನಿರ್ದೇಶಕ

Related Posts

error: Content is protected !!